Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ವಾರಾಂತ್ಯಕ್ಕೆ ʼನಟನ ರಂಗಶಾಲೆʼಯಲ್ಲಿ ಎರಡು ವಿಶೇಷ ನಾಟಕಗಳ ಪ್ರಸ್ತುತಿ!

ಮೈಸೂರು : ನಗರದ ಹೆಸರಾಂತ ʼನಟನ ರಂಗಶಾಲೆʼಯಲ್ಲಿ ಈ ಬಾರಿಯ ವಾರಾಂತ್ಯ ನಾಟಕಕ್ಕೆ ಎರಡು ವಿಶೇಷವಾದ ನಾಟಕಗಳನ್ನು ಪ್ರಸ್ತುತ ಪಡಿಸಲು ಸಿದ್ಧವಾಗಿದೆ. ಈ ಬಗ್ಗೆ ಚಿತ್ರನ ನಟ ಹಾಗೂ ʼನಟನ ರಂಗಶಾಲೆʼಯ ಸಂಸ್ಥಾಪಕರಾದ ಮಂಡ್ಯ ರಮೇಶ್‌ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕಾರ್ಯಕ್ರಮದ ಬಗ್ಗೆ ತಿಳಿಸಿದ ಅವರು, ಮೈಸೂರು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನ ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸಿಕೊಂಡು ಬಂದಿದೆ. ಆದರೆ ಈ ಬಾರಿ ವಾರಾಂತ್ಯದಲ್ಲಿ ಎರಡು ವಿಶೇಷ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಫೆಬ್ರವರಿ ೦೩ರಂದು ಸಂಜೆ ೬.೩೦ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ೨೦೨೩-೨೪ನೇ ಸಾಲಿನ ರಂಗಭೂಮಿ ಡಿಪ್ಲೋಮಾ ವಿದ್ಯಾರ್ಥಿಗಳ ಎರಡನೇ ಅಭ್ಯಾಸೀ ಪ್ರಯೋಗ, ಹೆಸರಾಂತ ರಂಗಕರ್ಮಿ ಡಾ.ಶ್ರೀಪಾದ ಭಟ್ ನಿರ್ದೇಶನದ ‘ಕನ್ನಡ ಕಾವ್ಯಕಣಜ’ ನಾಟಕವನ್ನು ಪ್ರದರ್ಶನಗೊಳಿಸಲಿದ್ದಾರೆ ಎಂದರು.

ಇನ್ನು, ಫೆಬ್ರವರಿ ೦೪ರಂದು ಸಂಜೆ ೦೬.೩೦ಕ್ಕೆ ರಂಗದಾಸೋಹ (ರಿ), ಬೆಂಗಳೂರು ಅಭಿನಯಿಸುವ, ಎನ್.ಸಿ. ಮಹೇಶ್ ನಿರ್ದೇಶನದ ‘ನೀ ಒಥೆಲೋವಾದರೆ, ನಾ ಇಯಾಗೊ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : ೭೨೫೯೫೩೭೭೭೭, ೯೪೮೦೪೬೮೩೨೭, ೯೮೪೫೫೯೫೫೦೫

‘ಕನ್ನಡ ಕಾವ್ಯಕಣಜ’ ನಾಟಕದ ಕುರಿತು: ಇದೊಂದು ಕಾವ್ಯ ಪ್ರಯೋಗ. ಕಾವ್ಯ ಪ್ರಸ್ತುತಿ. ಕನ್ನಡ ನಾಡು ನುಡಿ ಇದುವರೆಗೂ ಬೆಳೆಸಿಕೊಂಡು ಬಂದ ಸಂಬಂಧದ ವಿವಿಧ ವಿನ್ಯಾಸಗಳನ್ನು ಕವಿ ಪದಗಳ ಮೂಲಕ ಕಾಣಲಾಗಿದೆ. ಇಲ್ಲಿ ಶಾಸನಗಳಿವೆ, ಕವನಗಳಿವೆ, ಹಾಡಿದೆ, ವಚನವಿದೆ, ಕತೆಗಳಿವೆ, ಕಾದಂಬರಿಯ ಭಾಗಗಳಿವೆ. ಇವೆಲ್ಲವೂ ನಟರ ಶರೀರ ಮತ್ತು ಶಾರೀರಗಳನ್ನು ಆಧರಿಸಿ ಅಭಿನೀತಗೊಳ್ಳಲಿದೆ. ಕನ್ನಡ ಕಾವ್ಯ ಕಣಜ, ಕನ್ನಡ ಕಾವ್ಯಗಳ ರಂಗಪ್ರಸ್ತುತಿ. ಶಾಸನ ಪದಗಳಿಂದ ಆರಂಭಿಸಿ ಈ ಹೊತ್ತಿನವರೆಗಿನ ಸಾಹಿತ್ಯ ಚರಿತ್ರೆಯನ್ನು ಅನುಲಕ್ಷಿಸಿ ಅವುಗಳಲ್ಲಿ ಕೆಲವು ಪಠ್ಯಗಳನ್ನು ಆಯ್ದು ಪ್ರಸ್ತುತ ಪಡಿಸಲಾಗುತ್ತಿದೆ. ಇಲ್ಲಿ ಆದರ್ಶ ಮನುಷ್ಯರ ಹುಡುಕಾಟವಿದೆ; ಸಂಬಂಧಗಳ ವಿವಿಧ ಸ್ವರೂಪಗಳ ಅನ್ವೇಷಣೆಯಿದೆ. ವರ್ಣ, ವರ್ಗ, ಲಿಂಗ ತಾರತಮ್ಯಗಳ ಸ್ವರೂಪ ಕಾರಣಗಳ ಹುಡುಕಾಟದ ಪ್ರಯತ್ನವೂ ಇಲ್ಲಿದೆ. ಕಾವ್ಯಗಳನ್ನು ರಂಗದ ಮೇಲೆ ಪ್ರಯೋಗಿಸಬಹುದಾದ ಹಲವು ಮಾದರಿಗಳ ಪ್ರಸ್ತುತಿಯೂ ಇಲ್ಲಿದೆ.‘ನೀ ಒಥೆಲೋವಾದರೆ, ನಾ ಇಯಾಗೊ’ ನಾಟಕದ ಕುರಿತು: ಇದು ಶೇಕ್ಸ್ಪಿಯರ್‌ನ ಒಥೆಲೋ ನಾಟಕದ ರೂಪಾಂತರ. ಒಂದರ್ಥದಲ್ಲಿ ಸಮಕಾಲೀನ ರೂಪ. ಮೂಲ ನಾಟಕದಲ್ಲಿನ ರಾಜಪ್ರಭುತ್ವ ಮತ್ತು ಯುದ್ಧ, ಹೋರಾಟಗಳು ಈ ನಾಟಕದಲ್ಲಿ ಇಂದಿನ ವಿದ್ಯಮಾನದ ಪರ್ಯಾಯ ರೂಪಗಳನ್ನು ಪಡೆದುಕೊಂಡಿದೆ. ಮೂಲ ಕಥೆಯ ಚೌಕಟ್ಟಿನ ಒಳಗೆ ಇಂದಿನ ಬದುಕಿನ ಗತಿಯನ್ನು ಚಿತ್ರಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ