ಹಲವು ವರ್ಷಗಳಿಂದ ದೂರವಾಗಿದ್ದ ‘ದುನಿಯಾ’ ವಿಜಯ್ ಮತ್ತು ಅವರ ಸೋದರಳಿಯ ಯೋಗಿ ಈಗ ಹತ್ತಿರವಾಗಿದ್ದಾರೆ. ಯೋಗಿ ಅಭಿನಯದ ‘ಸಿದ್ಲಿಂಗು ೨’ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ವಿಜಯ್, ಇನ್ನು ಮುಂದೆ ಯೋಗಿಯ ಕೈಬಿಡುವುದಿಲ್ಲ ಎನ್ನುವುದರ ಜೊತೆಗೆ, ಯೋಗಿ ಜೊತೆಗೆ ಸಿನಿಮಾ ಮಾಡುವುದಾಗಿಯೂ ಹೇಳಿದ್ದಾರೆ.
ವಿಜಯ್ ಅವರ ಅಕ್ಕನ ಮಗ ಯೋಗಿ. ವಿಜಯ್ ಹೀರೋ ಆಗುವುದಕ್ಕೆ ಕಾರಣರಾದವರು ವಿಜಯ್ ಅವರ ಅಕ್ಕ ಮತ್ತು ಭಾವ. ಚಿತ್ರರಂಗದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ವಿಜಯ್‌ಅವರನ್ನು ‘ದುನಿಯಾ’ ಚಿತ್ರದ ಮೂಲಕ ಹೀರೋ ಮಾಡಿದ್ದು ಅಕ್ಕ ಅಂಬುಜ ಮತ್ತು ಭಾವ ಟಿ.ಪಿ.ಸಿದ್ದರಾಜು. ಈ ಚಿತ್ರದಲ್ಲಿ ವಿಜಯ್‌ಜೊತೆಗೆ ಯೋಗಿ ಕೂಡ ನಟಿಸಿದ್ದರು. ‘ದುನಿಯಾ’ ದೊಡ್ಡ ಯಶಸ್ಸು ಕಂಡಿತು. ಆದರೆ, ಕಾರಣಾಂತರಗಳಿಂದ ಕುಟುಂಬದಲ್ಲಿ ಬಿರುಕುಂಟಾ ಯಿತು. ಆ ನಂತರ ಎಷ್ಟೋ ವರ್ಷಗಳ ಕಾಲ ವಿಜಯ್ ಮತ್ತು ಅಕ್ಕ-ಭಾವನ ನಡುವೆ ಮಾತಿರಲಿಲ್ಲ. ಕೆಲವು ವರ್ಷಗಳ ಹಿಂದೆ ಸಂಬಂಧ ಸುಧಾರಿಸಿತ್ತು. ಈಗ ಇದೇ ಮೊದಲ ಬಾರಿಗೆ ‘ಸಿದ್ಲಿಂಗು ೨’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಯೋಗಿ ಬಂದರೆ, ‘ದುನಿಯಾ’ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಮುಹೂರ್ತಕ್ಕೆ ಯೋಗಿ ಬಂದಿದ್ದರು.
‘ಸಿದ್ಲಿಂಗು ೨’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ‘ದುನಿಯಾ’ ವಿಜಯ್, ‘ಯಾವುದೇ ಪಾತ್ರವಿದ್ದರೂ ನಾನು ಮಾಡಬಲ್ಲೆ ಎಂದು ಧೈರ್ಯವಾಗಿ ಯೋಗಿ ನಿಲ್ಲುತ್ತಾನೆ. ನಾನು ಅವನ ಅಭಿಮಾನಿ. ಅವನ ಸಾಮರ್ಥ್ಯ ಬೇರೆ ಇದೆ. ಅವನಿಗೆ ಒಳ್ಳೆಯ ಕಥೆಗಳು ಸಿಕ್ಕಿ ಅವನು ಇನ್ನೂ ಅದ್ಭುತ ನಟನಾಗಿ ಹೊರ ಹೊಮ್ಮಬೇಕು ಎಂಬುದು ನನ್ನಾಸೆ. ನಾನು ಅವನ ಜೊತೆಗೆ ನಿಲ್ಲುತ್ತೇನೆ. ಯಾವತ್ತೂ ಅವನ ಕೈಬಿಡುವುದಿಲ್ಲ. ಅವನನ್ನು ನಿಲ್ಲಿಸುತ್ತೇನೆ. ನನ್ನ ಕೈಗೆ ಸಿಕ್ಕರೆ ಬೇರೆಯ ತರಹ ಚಿತ್ರ ಮಾಡುತ್ತೇನೆ. ಅವನನ್ನು ಬೇರೆ ತರಹ ತೋರಿಸುವುದಕ್ಕೆ ಆಸೆ’ ಎಂದರು.
ಚಿತ್ರದ ನಾಯಕ ಯೋಗಿ ಮಾತನಾಡಿ, ‘ಸಿದ್ಲಿಂಗು’ ಚಿತ್ರವನ್ನು ನೋಡಿ ಎಲ್ಲರೂ ಇಷ್ಟಪಟ್ಟಿದ್ದರು. ಭಾಗ ಎರಡು ಕೂಡ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗೆ ಮತ್ತು ಚಿತ್ರ ತಂಡಕ್ಕಿದೆ. ಆಗ ‘ಸಿದ್ಲಿಂಗು’, ಕನ್ನಡ ಚಿತ್ರರಂಗಕ್ಕೆ ಬೇರೆ ತರಹದ ಸಿನಿಮಾ ಆಯ್ತು. ಇದು ಅದರ ಮುಂದುವರಿದ ಭಾಗ. ವಿಜಯ ಪ್ರಸಾದ್ ಜೊತೆಗೆ ಕೆಲಸ ಮಾಡುವುದು ಖುಷಿಯ ವಿಷಯ. ಪ್ರತಿಯೊಬ್ಬರಿಂದ ಒಳ್ಳೆಯ ಕೆಲಸ ತೆಗೆಯುತ್ತಾರೆ. ನನ್ನನ್ನು ಮತ್ತು ವಿಜಯಪ್ರಸಾದ್ ಅವರನ್ನು ಯಾರೂ ನಂಬದಂತಹ ಸಮಯದಲ್ಲಿ ಹರಿ ಮತ್ತು ರಾಜು ಅವರು ನಮ್ಮನ್ನು ನಂಬಿ ಚಿತ್ರ ನಿರ್ಮಿಸುವುದಕ್ಕೆ ಮುಂದೆ ಬಂದರು’ ಎಂದರು. ಸಿದ್ಲಿಂಗು ೨’ ಚಿತ್ರವನ್ನು ಶ್ರೀಹರಿ ಮತ್ತು ರಾಜು ಶೇರಿಗಾರ್ ನಿರ್ಮಿಸಿದ್ದು, ಯೋಗಿ, ಸೋನು ಗೌಡ, ಸುಮನ್ ರಂಗನಾಥ್, ಸೀತಾ ಕೋಟೆ, ಮಹಾಂತೇಶ್, ಆಂಟೋನಿ ಕಮಲ್, ಮಂಜುನಾಥ ಹೆಗಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರಸನ್ನ ಗುರ್ಲಕೆರೆ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇದೆ.