ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ ೨’ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಕುರಿತು ನಿರ್ದೇಶಕ ನಾಗಶೇಖರ್ ಹಲವು ವಿಷಯಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು, ಈ ಚಿತ್ರಕ್ಕೆ ಕಥೆ ಕೊಟ್ಟವರು ಸುದೀಪ್ ಎಂದು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ, ಚಿತ್ರಕ್ಕಾಗಿ ಕವಿರಾಜ್ ಬರೆದ ‘ಮಳೆಯಂತೇ ಬಾ?’ ಎಂಬ ಹಾಡನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಹಾಡನ್ನು ಸುದೀಪ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಸುದೀಪ್ ಈ ಹಾಡನ್ನು ಬಿಡುಗಡೆ ಮಾಡಿರುವುದಷ್ಟೇ ಅಲ್ಲ, ಚಿತ್ರಕ್ಕೆ ಕಥೆಯ ಎಳೆಯನ್ನೂ ಕೊಟ್ಟಿದ್ದಾರೆ ಎಂದು ನಾಗಶೇಖರ್ ಹೇಳಿಕೊಂಡಿದ್ದಾರೆ.
‘ರೇಷ್ಮೆ ಬೆಳೆಗಾರರ ಕುರಿತ ಒಂದು ಪ್ರಮುಖ ವಿಷಯ ವನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ಅದರ ಜತೆಗೊಂದು ಪ್ರೇಮಕಥೆಯೂ ಸಾಗುತ್ತದೆ. ಈ ಚಿತ್ರದ ಎಳೆಯನ್ನು ಕೊಟ್ಟಿದ್ದು ಸುದೀಪ್. ‘ಮಾಣಿಕ್ಯ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಅವರು ನನಗೆ ಈ ಎಳೆ ಹೇಳಿದರು. ಇಂಥ ಕಥೆಗಳನ್ನು ನೀನು ಚೆನ್ನಾಗಿ ಮಾಡುತ್ತೀಯ ಎಂದು ಈ ಚಿತ್ರ ಮಾಡುವುದಕ್ಕೆ ಹುರಿದುಂಬಿಸಿದರು. ಹಾಗಾಗಿ, ಈ ಚಿತ್ರ ರೂಪುಗೊಂಡಿರುವ ಶ್ರೇಯಸ್ಸು ಅವರಿಗೇ ಸಲ್ಲುತ್ತದೆ. ಇಂದು ನಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡುವ ಮೂಲಕ ನಮಗೆ ಮತ್ತೊಮ್ಮೆ ಹರಸಿದ್ದಾರೆ’ ಎಂದು ಈ ಕುರಿತು ನಾಗಶೇಖರ್ ಹೇಳಿದ್ದಾರೆ.
ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರ ವಿಷಯವನ್ನಿಟ್ಟುಕೊಂಡು ನವಿರಾದ ಪ್ರೇಮಕಥೆಯನ್ನು ನಿರ್ದೇಶಕ ನಾಗಶೇಖರ್ ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದಾರಂತೆ. ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್ ಲ್ಯಾಂಡ್ ವರೆಗೂ ಹೋಗುತ್ತದಂತೆ. ಚಿತ್ರದಲ್ಲಿ ರೇಷ್ಮೆ ಬೆಳೆಗಾರ ಸಂಜು ಆಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಪಾತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ.
ಪವಿತ್ರ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಸಂಪತ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ಶ್ರೀಧರ್ ವಿ.ಸಂಭ್ರಮ್ ಸಂಗೀತ ಸಂಯೋಜನೆ ಇದೆ





