Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಶಿವಾಜಿ ಮಹಾರಾಜ ಪಾತ್ರದಲ್ಲಿ ರಿಷಭ್ ಶೆಟ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ-ಟಿಪ್ಪಣಿ

ಮೊಘಲರ ವಿರುದ್ಧ ಹೋರಾಡಿದ ಮರಾಠ ದೊರೆ ಶಿವಾಜಿ ಮಹಾರಾಜರ ಕುರಿತು ‘ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಚಿತ್ರವು ಘೋಷಣೆಯಾಗಿದ್ದು, ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಭ್ ನಟಿಸಲಿದ್ದಾರೆ. ಈ ಚಿತ್ರವನ್ನು ಸಂದೀಪ್ ಸಿಂಗ್ ನಿರ್ದೇಶಿಸಲಿದ್ದು, ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಲಿದೆ. ರಿಷಭ್ ಶೆಟ್ಟಿ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ ಸಮಯದಿಂದ, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಪಾತ್ರವನ್ನು ರಿಷಭ್ ಶೆಟ್ಟಿ ಮಾಡುತ್ತಿರುವ ಕುರಿತು ಕೆಲವರು ಖುಷಿ ವ್ಯಕ್ತಪಡಿಸಿದರೆ, ಇನ್ನೂ ಹಲವರು ವಿರೋಧಿಸುತ್ತಿದ್ದಾರೆ.

ಪ್ರಮುಖವಾಗಿ, ಕರ್ನಾಟಕದಲ್ಲಿ ಕದಂಬರು, ಚಾಲುಕ್ಯರು, ಹೊಯ್ಸಳರು, ನಾಯಕರು, ವಿಜಯನಗರ ಹಾಗೂ ಮೈಸೂರು ಅರಸರು ಸೇರಿದಂತೆ ಹಲವು ರಾಜರ ವೀರಗಾಥೆಗಳಿರುವಾಗ, ಮರಾಠಿ ರಾಜರೊಬ್ಬರ ಪಾತ್ರವನ್ನು ರಿಷಭ್ ಮಾಡುತ್ತಿರುವ ಕುರಿತು ಹಲವು ಟೀಕೆಗಳು ವ್ಯಕ್ತವಾಗುತ್ತಿದೆ. ಮೇಲಾಗಿ ಶಿವಾಜಿ, ಕರ್ನಾಟಕದ ಮೇಲೆ ಸಾಕಷ್ಟು ಬಾರಿ ದಾಳಿ ಮಾಡಿದ್ದರು. ಶೃಂಗೇರಿ ಮಠದ ಮೇಲೆ ದಾಳಿ ಮಾಡುವುದರ ಜೊತೆಗೆ ಬೆಳವಡಿ ಮಲ್ಲಮ್ಮನ ಜೊತೆ ಯುದ್ಧ ಮಾಡಿದ್ದರು. ಕೊನೆಗೆ ಮಲ್ಲಮ್ಮನ ಎದುರು ಸೋತು ಕ್ಷಮೆ ಕೇಳಿದ್ದರು. ಶಿವಾಜಿ, ಹಿಂದೂ ಹೃದಯ ಸಾಮ್ರಾಟನೇ ಇರಬಹುದು, ಆದರೆ ಕರ್ನಾಟಕ ಮತ್ತು ಕನ್ನಡಿಗರಿಗೆ ಹೀರೋ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇನ್ನೂ ಕೆಲವರು, ಶಿವಾಜಿ ಪಾತ್ರವನ್ನು ನಿರ್ವಹಿಸಿದರೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಯಾವುದೇ ಪಾತ್ರವನ್ನು ಒಬ್ಬ ನಟ ಒಪ್ಪುವುದು ಅಥವಾ ಬಿಡುವುದು ಅವರ ವೈಯಕ್ತಿಕ ವಿಚಾರ. ಹಾಗಾಗಿ, ಇಂತಹ ಪಾತ್ರಗಳನ್ನು ಮಾಡಿ ಅಥವಾ ಮಾಡಬೇಡಿ ಎಂದು ಅವರಿಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಇದು ರಿಷಭ್ ಇಷ್ಟ. ಆದರೆ, ಕನ್ನಡಕ್ಕಿಂತ ಪರಭಾಷೆಗಳ ಚಿತ್ರಗಳಲ್ಲೇ ರಿಷಭ್ ಶೆಟ್ಟಿ ನಟಿಸುತ್ತಿರುವ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಕಳೆದ ವರ್ಷ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ರಿಷಭ್, ಕನ್ನಡ ಚಿತ್ರಗಳಲ್ಲೇ ನಟಿಸುವುದಾಗಿ ಹೇಳಿದ್ದರು. ಪರಭಾಷೆಯ ಚಿತ್ರಗಳಲ್ಲಿ ನಟಿಸುವುದಕ್ಕೆ ಹಲವು ಅವಕಾಶಗಳು ಬರುತ್ತಿದ್ದರೂ, ಕನ್ನಡದಲ್ಲೇ ಹೆಚ್ಚು ಚಿತ್ರಗಳನ್ನು ಮಾಡುವುದಾಗಿ ಹೇಳಿದ್ದರು.

ಆದರೆ, ಇದೀಗ ಅವರು ಪರಭಾಷೆ ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದಾರೆ. ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರವಲ್ಲದೆ, ‘ಜೈ ಹನುಮಾನ್’ ಎಂಬ ಇನ್ನೊಂದು ಪ್ಯಾನ್ ಇಂಡಿಯಾದ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

‘ಕಾಂತಾರ – ಅಧ್ಯಾಯ ೧’ ಚಿತ್ರದ ನಂತರ, ರಿಷಭ್ ಈ ಎರಡೂ ಚಿತ್ರಗಳಲ್ಲಿ ನಟಿಸಲಿದ್ದಾರೆ. ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದ ರಿಷಭ್, ಈಗ ಯೂಟರ್ನ್ ಪಡೆದು, ಕನ್ನಡ ಬಿಟ್ಟು ಪರಭಾಷಾ ಚಿತ್ರಗಳನ್ನೇ ಹೆಚ್ಚಾಗಿ ಒಪ್ಪಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಿಷಭ್ ಮುಂದಿನ ಹೆಜ್ಜೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ

Tags: