Mysore
24
overcast clouds

Social Media

ಗುರುವಾರ, 03 ಏಪ್ರಿಲ 2025
Light
Dark

ನಿರ್ದೇಶಕನಾದ ವಿನಯ್‌ ರಾಜ್‌ಕುಮಾರ್ ‘ಅಂದೊಂದಿತ್ತು ಕಾಲ’ ಮಾರ್ಚ್‌ನಲ್ಲಿ ಬರಲಿದೆ

ವಿನಯ್‌ ರಾಜ್‌ಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ “ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ’ ಎಂಬ ಹಾಡನ್ನು ಕೆಲವು ದಿನಗಳ ಹಿಂದೆ ಗಣೇಶ್ ಮತ್ತು ಪೂಜಾ ಗಾಂಧಿ ಬಿಡುಗಡೆ ಮಾಡಿದ್ದರು. ಈ ಹಾಡು ಇದೀಗ 1 ಲಕ್ಷ ಮಿಲಿಯನ್ ವೀಕ್ಷಣೆಯೊಂದಿಗೆ ಜನಮೆಚ್ಚುಗೆ ಪಡೆದಿದೆ. ಈ ಹಾಡು ಯಶಸ್ವಿಯಾದ ಹಿನ್ನೆಲೆಯಲ್ಲಿ ಚಿತ್ರತಂಡದವರು ಇತ್ತೀಚೆಗೆ ಮಾಧ್ಯಮದ ಮುಂದೆ ಬಂದು ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ರಾಜಕುಮಾರ್, ‘ಮುಂಗಾರು ಮಳೆಯಲ್ಲಿ’ ಹಾಡು ಬಿಡುಗಡೆಯಾಗಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಸಂಗೀತ ನಿರ್ದೇಶಕ ಕವಿ ರಾಘವೇಂದ್ರ ಎಲ್ಲ ಹಾಡುಗಳಿಗೆ ಬಹಳ ಚೆನ್ನಾಗಿ ರಾಗ ಸಂಯೋಜನೆ ಮಾಡಿಕೊಟ್ಟಿದ್ದಾರೆ. ಚಿತ್ರವು ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೊಬ್ಬ ನಿರ್ದೇಶಕನ ಜೀವನದ ಕಥೆ, ನಿರ್ದೇಶಕ ಕೀರ್ತಿ ಜೀವನದಲ್ಲಿ ಅನುಭವಿಸಿದ ಘಟನೆಗಳು. ಅವರ ಸ್ನೇಹಿತರ ಅನುಭವಗಳನ್ನು ಸೇರಿಸಿ ಒಂದೊಳ್ಳೆಯ ಕಥೆ ಹೇಳಿದ್ದಾರೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದರು.

‘ಅಂದೊಂದಿತ್ತು ಕಾಲ’ ಎಂಬ ಹೆಸರೇ ಬಹಳ ಆಪ್ತವಾಗಿದೆ ಎಂದ ಆದಿತಿ ಪ್ರಭುದೇವ, ‘ಈ ಚಿತ್ರದಲ್ಲಿ ನನಗೆ ಕಣ್ಣಲ್ಲೇ ಮಾತಾಡುವ ಪಾತ್ರವಿದೆ. ವಿನಯ್ ಜೊತೆಗೆ ಬಹಳ ಖುಷಿಯಿಂದ ಕೆಲಸ ಮಾಡಿದ್ದೇನೆ. ಸಂಗೀತ ನಿರ್ದೇಶಕ ರಾಘವೇಂದ್ರ ಬಹಳ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ ಅದೇ ಕಾರಣಕ್ಕೆ ಜನ ಮೆಚ್ಚಿದ್ದಾರೆ. ಈ ಹಾಡನ್ನು ಮೆಚ್ಚಿ ಹಲವರು ರೀಲ್ಸ್ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು’ ಎಂದರು. “ಅಂದೊಂದಿತ್ತು ಕಾಲ’ ಚಿತ್ರವನ್ನು ಚಂದನ್‌ ಸಿನಿಮಾಸ್ ಅಡಿ ಸುರೇಶ್ ನಿರ್ಮಿಸಿದ್ದಾರೆ. ಕೀರ್ತಿ ಕೃಷ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಘವೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜು ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.

Tags: