Mysore
20
overcast clouds
Light
Dark

ಬಣ್ಣದ ಲೋಕಕ್ಕೆ ಮರಳಿದ ಮಹಾಲಕ್ಷ್ಮೀ

1984ರಲ್ಲಿ ತೆರೆಕಂಡ ರವೀಂದ್ರನಾಥ್ ನಿರ್ದೇಶನದ ‘ಅಪರಂಜಿ’ ಚಿತ್ರದ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಯವಾದ ನಟಿ ಮಹಾಲಕ್ಷ್ಮೀ, ರಾಜಕುಮಾ‌ರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಂಕರನಾಗ್‌, ಅಶೋಕ್‌, ಲೋಕೇಶ್, ರವಿಚಂದ್ರನ್, ಪ್ರಭಾಕರ್ ಸೇರಿದಂತೆ ಎಲ್ಲ ನಟರ ಜೊತೆ ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಆಕೆ ನಟಿಸಿದ್ದಾರೆ. ಮಹಾಲಕ್ಷ್ಮೀ ಅವರು ನಟಿಸಿದ ಕೊನೆಯ ಚಿತ್ರ ‘ಮನೇಲಿ ಇಲಿ, ಬೀದೀಲಿ ಹುಲಿ’.

ಅದಾದ ನಂತರ ಅವರು ಕನ್ನಡ ಚಿತ್ರಗಳಲ್ಲಿ ನಟಿಸಿರಲಿಲ್ಲ. ವೈಯಕ್ತಿಕ ಬದುಕಿನ ಏರುಪೇರು, ದಾಂಪತ್ಯ ಜೀವನದ ಕುರಿತಂತೆ ಬಂದ ಸುದ್ದಿ, ಗಾಳಿಸುದ್ದಿಗಳಿಗೆ ಬೆನ್ನು ಹಾಕಿದ ಮಹಾಲಕ್ಷ್ಮೀ ಇದೀಗ ಮೂರು ದಶಕಗಳ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಈ ತಿಂಗಳ ಮೊದಲ ವಾರ ತೆರೆಕಂಡ ಆ ಚಿತ್ರ ‘ಟಿಆರ್‌ಪಿ ರಾಮ’. ರವಿಪ್ರಸಾದ್‌ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಮಹಾಲಕ್ಷೀ ಅವರದು ತಾಯಿಪಾತ್ರ.

‘ಟಿಆರ್‌ಪಿ ರಾಮ’ ಚಿತ್ರ ಚಿತ್ರೀಕರಣ ಮುಗಿದು ತೆರೆಕಾಣುವ ಮೊದಲೇ ಮಹಾಲಕ್ಷ್ಮೀ, ತಾವು ನಟಿಸಿರುವ ಕಿರುತೆರೆ ಸರಣಿಯೊಂದರ ಮೂಲಕ ಮನೆಮನೆಗಳ ನಡುಮನೆಗೆ ಬಂದುಬಿಟ್ಟಿದ್ದಾರೆ. ‘ಕಾವೇರಿ ಕನ್ನಡ ಮೀಡಿಯಂ’ ಈ ಸರಣಿಯ ಹೆಸರು. ಅದರಲ್ಲಿ ಮಹಾಲಕ್ಷೀ ಅವರದು ಅಜ್ಜಿಪಾತ್ರ. ಅದು ನಾಯಕ ನಾಯಕಿಯರನ್ನು ಒಂದು ಮಾಡುವ ಪಾತ್ರವಂತೆ. ಸರಣಿಯ ಹೆಸರು ಕೇಳುತ್ತಿದ್ದಂತೆಯೇ ಇದು ಕನ್ನಡದ ಕುರಿತಂತೆಯೂ ಹೇಳುವುದಿರಬೇಕು ಎನ್ನುವ ಅನುಮಾನ ಬಂದರೆ ಸಹಜ. ಇದನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರೀತಂ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಯೂ ಸಾಧನೆ ಮಾಡಬಹುದು ಎನ್ನುವುದನ್ನು ಹೇಳುವ ಈ ಸರಣಿ ಈಗಾಗಲೇ ಜನಪ್ರಿಯವಾಗುತ್ತಿದೆ ಎನ್ನಲಾಗಿದ್ದು ಮಹಾಲಕ್ಷ್ಮೀಯವರ ಪಾತ್ರವೂ ಗಮನಾರ್ಹ ಎನ್ನುತ್ತಿದ್ದಾರೆ ವೀಕ್ಷಕರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ