ನಟಿ ರಮ್ಯಾ ಎರಡು ವರ್ಷಗಳ ಹಿಂದೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನಿರ್ಮಿಸಿದ್ದರು. ತಾವೇ ನಿರ್ಮಿಸಿದ ಚಿತ್ರವಾದರೂ, ಅದರ ಕಾರ್ಯಕ್ರಮದಲ್ಲಿ ಎಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ಬಹು ವರ್ಷಗಳ ನಂತರ ಬೇರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಾರ ಬಿಡುಗಡೆಯಾಗುತ್ತಿರುವ ಗುರು ನಂದನ್ ನಾಯಕನಾಗಿ ಅಭಿನಯಿಸಿರುವ ‘ರಾಜು ಜೇಮ್ಸ್ ಬಾಂಡ್’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ಜೊತೆಗೆ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.
ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾ ಣದ, ದೀಪಕ್ ಮಧು ವನಹಳ್ಳಿ ನಿರ್ದೇಶನದ ‘ರಾಜು ಜೇಮ್ಸ್ ಬಾಂಡ್’ ಚಿತ್ರದ ಈ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕರಾದ ರಮೇಶ್ ರೆಡ್ಡಿ, ನಾಯಕಿ ತಪಸ್ವಿನಿ ಶರ್ಮ ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಹಾಜರಿದ್ದು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
‘ರಾಜು ಜೇಮ್ಸ್ ಬಾಂಡ್’ ಚಿತ್ರದ ತುಣುಕು ಹಾಗೂ ಹಾಡುಗಳನ್ನು ನೋಡಿದರೆ, ಚಿತ್ರ ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಇವೆ. ಚಿತ್ರ ಯಶಸ್ಸು ಕಾಣಲಿ’ ಎಂದು ಗೃಹ ಸಚಿವರು ಶುಭ ಕೋರಿದರು. ‘ಟ್ರೇಲರ್ ಹಾಗೂ ಹಾಡುಗಳು ತುಂಬಾ ಚೆನ್ನಾಗಿವೆ.
ಛಾಯಾ ಗ್ರಹಣವಂತೂ ಸೂಪರ್. ಅಷ್ಟೇ ಚೆನ್ನಾಗಿ ನಾಯಕ ಹಾಗೂ ನಾಯಕಿ ಅಭಿನಯಿಸಿದ್ದಾರೆ. ಪ್ರೇಮಿಗಳ ದಿನದಂದು ಬಿಡುಗಡೆ ಯಾಗುತ್ತಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ರಮ್ಯ ಹಾರೈಸಿದರು.
‘ರಾಜು ಜೇಮ್ಸ್ ಬಾಂಡ್’ ಚಿತ್ರದಲ್ಲಿ ಗುರುನಂದನ್, ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ನಟಿಸಿದ್ದು, ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇದೆ.