Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಗಂಧದ ಗುಡಿʼ ಸಾಕ್ಷ್ಯಚಿತ್ರ ಪ್ರೀ-ರಿಲೀಸ್​ ಇವೆಂಟ್​ : ಬೊಮ್ಮಾಯಿಯನ್ನು ಆಹ್ವಾನಿಸಿದ ರಾಜ್‌ ಕುಟುಂಬ

ಪುನೀತ್​ ರಾಜ್​ಕುಮಾರ್ ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಅ.28ಕ್ಕೆ ಬಿಡುಗಡೆ ಆಗಲಿದೆ. ಈಗಾಗಲೇ ಇದರ ಟ್ರೇಲರ್ ಸಖತ್​ ಸದ್ದು ಮಾಡುತ್ತಿದೆ. ಈ ಡಾಕ್ಯುಮೆಂಟರಿ​ ಬಿಡುಗಡೆ​ ಆಗುವುದಕ್ಕೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್​ ಮಾಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಸಲಕ ತಯಾರಿ ನಡೆಯುತ್ತಿದೆ. ಅ.21ರಂದು ಪ್ರೀ-ರಿಲೀಸ್​ ಕಾರ್ಯಕ್ರಮ ಜರುಗಲಿದೆ. ಅದಕ್ಕಾಗಿ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಇಂದು (ಅ.11) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಈ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಮುಂತಾದವರು ಉಪಸ್ಥಿತರಿದ್ದರು.

ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’. ಹಾಗಾಗಿ ರಾಜ್​ ಕುಟುಂಬದವರು ತುಂಬಾ ಕಾಳಜಿ ವಹಿಸಿ ಇದನ್ನು ದೊಡ್ಡ ಮಟ್ಟದಲ್ಲಿ ರಿಲೀಸ್​ ಮಾಡುತ್ತಿದ್ದಾರೆ. ಸಿನಿಮಾದ ರೀತಿ ಚಿತ್ರಮಂದಿರದಲ್ಲೇ ಇದು ಬಿಡುಗಡೆ ಆಗಲಿದೆ. ಇದರ ಟ್ರೇಲರ್​ ಬಿಡುಗಡೆ ಆದ ಬಳಿಕ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಅ.21ರಂದು ನಡೆಯಲಿರುವ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಎಂದು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ವಿನಂತಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ‘ಪುನೀತ ಪರ್ವ’ ಎಂದು ಕರೆಯಲಾಗುತ್ತಿದೆ. ಅದಕ್ಕೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಹಲವರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ.

ಕರುನಾಡಿನ ಅರಣ್ಯ ಸಂಪತ್ತು, ವನ್ಯಜೀವಿಗಳ ಜಗತ್ತು, ಕಾಡಿನ ಜನರ ಬದುಕು ಸೇರಿದಂತೆ ಅನೇಕ ವಿಚಾರಗಳ ಮೇಲೆ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬೆಳಕು ಚೆಲ್ಲಲಿದೆ. ಇದರ ಟ್ರೇಲರ್​ ಒಂದು ಕೋಟಿಗೂ ಅಧಿಕ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.

ವಿಶೇಷವಾಗಿದೆ ಆಮಂತ್ರಣ ಪತ್ರಿಕೆ:

‘ಗಂಧದ ಗುಡಿ’ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಈಗಾಗಲೇ ಅನೇಕರಿಗೆ ಆಮಂತ್ರಣ ಪತ್ರಿಕೆ ತಲುಪಿದೆ. ಸಂಪೂರ್ಣ ಮರದಿಂದ ಮಾಡಲಾದ ಈ ಪತ್ರಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಪುತ್ಥಳಿ ಇದೆ. ಜೊತೆಗೆ ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್​ಕುಮಾರ್​ ಎಂದು ಬರೆದಿರುವ ಹಸ್ತಾಕ್ಷರ ಇದೆ. ಅಮಿತಾಭ್ ಬಚ್ಚನ್​, ರಜನಿಕಾಂತ್​ ಮುಂತಾದ ಗಣ್ಯರಿಗೆ ಇದೇ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ