ಬೆಂಗಳೂರು : ರಾಜ್ಯ ಸರ್ಕಾರದ ಉದ್ಯಮಗಳಲ್ಲೊಂದಾಗಿರುವ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್) ನಟ ಡಾಲಿ ಧನಂಜಯ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿ ನಿರ್ವಾಣ ದಿನದ ಅಂಗವಾಗಿ ಸಿಎಂ ಸಿದ್ದರಾಮಯ್ಯನವರು ವಿಧಾನಸೌಧದ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿ ಧನಂಜಯ್ ಅವರನ್ನು ಲಿಡ್ಕರ್ ಸಂಸ್ಥೆಯ ರಾಯಭಾರಿಯಾಗಿ ಘೋಷಣೆ ಮಾಡಿ, ಅಂಬೆಡ್ಕರ್ ಅವರ ಕುರಿತಾದ ಪುಸ್ತಕ ಹಾಗೂ ಲಿಡ್ಕರ್ ಸಂಸ್ಥೆಯಿಂದ ವಿಶೇಷವಾಗಿ ತಯಾರಿಸಿದ್ದ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು.
ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯನವರು ನಾಡಿನ ಖ್ಯಾತ ನಟ ಡಾಲಿ ಧನಂಜಯ ಅವರನ್ನು ಲಿಡ್ಕರ್ ರಾಯಭಾರಿಯಾಗಿ ಆಯ್ಕೆ ಮಾಡಿದ್ದೇವೆ. ಅವರು ಉಚಿತವಾಗಿ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಧನಂಜಯ್ ಒಬ್ಬ ಸಾಮಾಜಿಕ ಕಳಕಳಿಯುಳ್ಳ ನಟ. ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದು ಅರ್ಥಪೂರ್ಣವಾಗಿದೆ. ಇದರಿಂದ ಚರ್ಮೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದರು.
ನಂತರ ಮಾತನಾಡಿದ ನಟ ಡಾಲಿ ಧನಂಜಯ್ ನಾನು ಮೊದಲ ಬಾರಿಗೆ ಒಂದು ಸಂಸ್ಥೆಗೆ ರಾಯಬಾರಿ ಆಗುತ್ತಿದ್ದೇನೆ. ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂದರಾ ಅವರು ರಾಜ್ಯದಲ್ಲಿ ಚರ್ಮೋದ್ಯಮ ನಂಬಿಕೊಂಡು 50 ಸಾವಿರ ಕುಟುಂಬಗಳಿವೆ. ನಮ್ಮ ನಾಡಿನಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯ ಅವರಂತಹ ಸಾವಿರಾರು ಜನ ಕುಶಲಕರ್ಮಿಗಳಿದ್ದಾರೆ. ನಮ್ಮದೇ ಆದ ಬ್ರ್ಯಾಂಡ್ ಗೆ ನಾವು ಬೆಂಬಲಿಸಬೇಕು ಎನ್ನುವ ಉದ್ದೇಶದಿಂದ ಇದನ್ನು ಒಪ್ಪಿಕೊಂಡಿದ್ದೇನೆ ಮೇಕ್ ಇನ್ ಇಂಡಿಯಾ ಹೇಗಿದೆಯೋ ಗಾಗೆ ಮೇಕ್ ಇನ್ ಕರ್ನಾಟಕ ಆಗಬೇಕು. ಲಿಡ್ಕರ್ ಸಂಸ್ಥೆಗೆ ಬೆಂಬಲ ನೀಡುವುದರಿಂದ ಅದನ್ನೇ ನಂಬಿಕೊಂಡಿರುವ ಕುಟುಂಬಗಳಿಗೆ ಸಹಾಯವಾಗಲಿದೆ. ನಮ್ಮ ರಾಜ್ಯದಲ್ಲಿ ಮೈಸೂರು ಸಿಲ್ಕ್ ಹೇಗಿದೆಯೋ ಹಾಗೆ ನಮ್ಮದೂ ಒಂದು ಬ್ರಾಂಡ್ ಇರಬೇಕು ಎಂದರು.