Mysore
29
overcast clouds

Social Media

ಬುಧವಾರ, 09 ಏಪ್ರಿಲ 2025
Light
Dark

ದೂರ ತೀರಯಾನ’ಕ್ಕೆ ಹೊರಟ ನಿರ್ದೇಶಕ ಮಂಸೋರೆ..

ಮಂಸೋರೆ ಕಳೆದ ವರ್ಷ ‘ದೂರ ತೀರ ಯಾನ’ ಎಂಬ ಚಿತ್ರವನ್ನು ಪ್ರಾರಂಭಿಸಿದ್ದು ನೆನಪಿರಬಹುದು. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಜುಲೈ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಮಂಸೋರೆ ಚಿತ್ರಗಳೆಂದರೆ ಏನಾದರೂ ಸಾಮಾಜಿಕ ಸಮಸ್ಯೆ, ಕಾಳಜಿ ಇರಬೇಕು ಎನ್ನುವಷ್ಟರ ಮಟ್ಟಿಗೆ ಆ ತರಹದ ಚಿತ್ರಗಳನ್ನೇ ಮಾಡುತ್ತಿದ್ದರು ಮಂಸೋರೆ. ಅದಕ್ಕೆ ಉದಾಹರಣೆಯಾಗಿ ‘ಆಕ್ಟ್ ೧೯೭೮’, ‘ಹರಿವು’, ‘೧೯.೨೦.೨೧’ ಮುಂತಾದ ಚಿತ್ರಗಳು ಸಿಗುತ್ತವೆ. ಅದೇ ತರಹದ ಚಿತ್ರಗಳನ್ನು ಮಾಡುತ್ತಿದ್ದರೆ, ಬ್ರಾಂಡ್‌ಆಗಿ ಬಿಡಬಹುದು ಎಂಬ ಕಾರಣಕ್ಕೆ ಅವರು ಈ ಬಾರಿ ಪ್ರೇಮ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತೀರಾ ಗಂಭೀರವಲ್ಲದ ಮತ್ತು ಲವಲವಿಕೆಯಿಂದ ಕೂಡಿರುವ ಚಿತ್ರ ಇದು ಎನ್ನುವ ಮಂಸೋರೆ, ‘ಇದೊಂದು ಪ್ರೀತಿಯ ಹುಡುಕಾಟದ ಕಥೆ. ಈಗ ಪ್ರೀತಿಯ ವ್ಯಾಖ್ಯಾನ ಬದಲಾಗಿದೆ. ಅದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಈ ಚಿತ್ರಕ್ಕಾಗಿ ಒಂದು ವರ್ಷ ರೀಸರ್ಚ್ ಮಾಡಿದ್ದೇನೆ. ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಅವಲೋಕಿಸಿದ್ದೇನೆ. ಪ್ರೇಕ್ಷಕರು ಯಾವ ರೀತಿಯ ಕಥೆ ಮತ್ತು ಚಿತ್ರಗಳನ್ನು ಇಷ್ಟ ಪಡುತ್ತಾರೆ ಎಂದು ಮಾಹಿತಿ ಕಲೆ ಹಾಕಿ, ಅದೆಲ್ಲವನ್ನೂ ಇಟ್ಟುಕೊಂಡು ಕಥೆ ಮಾಡಿದ್ದೇನೆ. ಇಲ್ಲೂ ಕಥೆ ಆಳವಾಗಿದೆ. ಅದನ್ನು ಹೇಳುವ ಶೈಲಿಯನ್ನು ಮಾತ್ರ ಬದಲಾಯಿಸುತ್ತಿದ್ದೇನೆ’ ಎನ್ನುತ್ತಾರೆ.

ಇದೊಂದು ಪ್ರಯಾಣದ ಚಿತ್ರವಂತೆ. ಬೆಂಗಳೂರಿನಿಂದ ಶುರುವಾಗಿ ಗೋವಾದಲ್ಲಿ ಮುಗಿಯುತ್ತದೆ. ಮೊದಲ ೧೦ ನಿಮಿಷ ಬೆಂಗಳೂರಿನಲ್ಲಿ ನಡೆಯುತ್ತದೆ. ನಂತರ ಗೋವಾ ವರೆಗೂ ಪ್ರಯಾಣ ಮುಂದುವರಿಯುತ್ತದೆ. ಇಲ್ಲಿ ನಾಯಕ ಪಿಟೀಲು ನುಡಿಸಿದರೆ, ನಾಯಕಿ ಕೊಳಲು ನುಡಿಸುತ್ತಾಳೆ. ಅದು ಅವರಿಬ್ಬರ ಪ್ರವೃತ್ತಿ. ವೃತ್ತಿಯಲ್ಲಿ ಅವರಿಬ್ಬರೂ ಸಾಫ್ಟ್ ವೇರ್ ಇಂಜಿನಿಯರ್‌ಗಳು. ಅವರಿಬ್ಬರ ಪ್ರೀತಿಯ ಹುಡುಕಾಟವೇ ಈ ಚಿತ್ರದ ಕಥೆಯಂತೆ. ‘ದೂರ ತೀರಯಾನ’ ಚಿತ್ರದಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದು, ಈ ಚಿತ್ರವನ್ನು ಡಿ ಕ್ರಿಯೇಷನ್ಸ್ ಬ್ಯಾನರ್‌ನಡಿ ದೇವರಾಜ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ ಮತ್ತು ಬಕ್ಕೇಶ್ ಸಂಗೀತ ಸಂಯೋಜನೆ ಇದೆ

Tags: