ಕೆಲವು ವರ್ಷಗಳ ಹಿಂದೆ ಧರ್ಮ ಕೀರ್ತಿರಾಜ್ ಅಭಿನಯದಲ್ಲಿ ‘ಮಮ್ತಾಜ್’ ಎಂಬ ಪ್ರೇಮಕಥೆಯನ್ನು ನಿರ್ದೇಶಿಸಿದ್ದರು ಮುರಳಿ. ಈಗ ಅವರು ಧರ್ಮ ಕೈಗೆ ‘ತಲ್ವಾರ್’ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬರೀ ಮೆದುವಾದ ಪಾತ್ರಗಳನ್ನೇ ಮಾಡುತ್ತಿದ್ದ ಧರ್ಮ ಅವರನ್ನು ಭೂಗತಲೋಕಕ್ಕೆ ಕಳಿಸಿದ್ದಾರೆ. ಮೊದಲನೇ ಬಾರಿಗೆ ರೌಡಿ ಪಾತ್ರವನ್ನು ಮಾಡಿಸಿದ್ದಾರೆ. ಈ ಚಿತ್ರ ಸುಮಾರು ಐದು ವರ್ಷಗಳ ಹಿಂದೆಯೇ ಪ್ರಾರಂಭವಾಗಿದ್ದರೂ, ಕಾರಣಾಂತರಗಳಿಂದ ಬಿಡುಗಡೆಯಾಗಿರಲಿಲ್ಲ. ಈಗ ಚಿತ್ರಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದ್ದು, ಈ ವರ್ಷದ ಆರಂಭದಲ್ಲಿ ಬಿಡುಗಡೆ ಆಗಲಿದೆ.
ನಿರ್ದೇಶಕ ಮುರಳಿ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ರಚಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ತಾವು ನೋಡಿದ ಘಟನೆಯೇ ಅವರಿಗೆ ಈ ಚಿತ್ರಕ್ಕೆ ಸ್ಛೂರ್ತಿ. ‘ಇದೊಂದು ರೌಡಿಸಂ ಹಾಗೂ ಸಂಬಂಧಗಳ ಸುತ್ತ ನಡೆಯುವ ಕಥೆ. ನಾನು ಓದುವ ಸಂದರ್ಭದಲ್ಲಿ ನಮ್ಮ ಹಾಸ್ಟೆಲ್ ಬಳಿ ನನ್ನ ಕಣ್ಣೆದುರೇ ನಡೆದಂತಹ ನೈಜ ಘಟನೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳು ಈ ಚಿತ್ರದ ವಿಶೇಷತೆ.
ಈ ಚಿತ್ರದಲ್ಲಿ ನಟ ಧರ್ಮ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾರೆ ಅವರು. ಈ ಚಿತ್ರದ ಕುರಿತಂತೆ ವಿವರಿಸುವ ಧರ್ಮ ಕೀರ್ತಿರಾಜ್, ‘ಇದೊಂದು ಆಕ್ಷನ್ ಹಾಗೂ ತಾಯಿ ಸೆಂಟಿಮೆಂಟ್ ಕಥೆ ಇರುವ ಚಿತ್ರ. ಚಿತ್ರದಲ್ಲಿ ಸಾಕಷ್ಟು ಮಾಸ್ ಅಂಶಗಳಿವೆ. ನನ್ನ ಪಾಲಿಗೆ ಇದು ವಿಶೇಷ ಚಿತ್ರ. ದುಡ್ಡಿಗಾಗಿ ಏನನ್ನಾದರೂ ಮಾಡಲು ಸಿದ್ದವಾಗಿರೋ ಯುವಕನ ಪಾತ್ರ ನನ್ನದು. ಆನಂತರ ಆತನಿಗೆ ಪಶ್ಚಾತ್ತಾಪವಾಗಿ ಏನು ಮಾಡುತ್ತಾನೆ ಎಂಬುದನ್ನು ‘ತಲ್ವಾರ್’ ಚಿತ್ರದ ಮೂಲಕ ಹೇಳಿದ್ದೇವೆ’ ಎನ್ನುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಹೆಸರು ಮಾಡಿರುವ ಸುರೇಶ್ ಬೈರಸಂದ್ರ, ಸ್ಟೋನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ‘ತಲ್ವಾರ್’ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಜೊತೆಗೆ ಅದಿತಿ ರಾವ್, ಜೆಕೆ, ಅವಿನಾಶ್ (ಜ್ಯೂನಿಯರ್ ದರ್ಶನ್), ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ.