ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ ಸರಣಿಗಳು ಬಂದು ಹೋಗಿ ಒಂದುವರೆ ವರ್ಷ ಕಳೆದರೂ ಕೂಡ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ನೀಡಿಲ್ಲ. ಹೀಗಾಗಿ ರಾಕಿ ಬಾಯ್ ಅಭಿಮಾನಿಗಳು ಬೆಸರದಿಂದಲೇ ಮುಂದಿನ ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಈ ನಡುವೆ ಆಗಾಗ ಯಶ್ 19 ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿರುತ್ತವೆ. ಇದೀಗ ಯಶ್ 19 ಸಿನಿಮಾಗೆ ಕೌಂಟ್ ಡೌನ್ ಶುರುವಾಗಿದೆ ಎನ್ನಲಾಗುತ್ತಿದೆ.
ಇದೀಗ ಯಶ್ ಅವರು ಅಪ್ಲೋಡ್ ಮಾಡಿರುವ ಇಸ್ಟಾಗ್ರಾಮ್ ಪ್ರೊಫೈಲ್ ಫೋಟೋದಿಂದ ಯಶ್ 19 ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಲೋಡಿಂಗ್ ಎಂಬ ಬರಹವಿರುವ ಫೋಟೊವನ್ನು ಯಶ್ ಅವರು ಅಪ್‌ಲೋಡ್ ಮಾಡಿದ್ದಾರೆ. ಸಧ್ಯ ಈ ಫೋಟೊ ಅವರ ಮುಂದಿನ ಸಿನಿಮಾ ಅಪ್ಡೇಟ್ ನೀಡಿದ್ದಾರಾ ಎಂಬ ಕುತೂಹಲ ಹುಟ್ಟಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಸ್ವತಃ ಯಶ್ ಅವರೇ ಬಿಜಿಎಸ್ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಹೌದು, ನವೆಂಬರ್ 23 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಯಶ್ ತಮ್ಮ ಮುಂದಿನ ಚಿತ್ರದ ಅಪ್‌ಡೇಟ್ ಅನ್ನು ಸ್ವತಃ ತಾವೇ ನೀಡಲಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹದ ಸುದ್ದಿಗಳಿಗೂ ತೆರೆ ಎಳೆದಿದ್ದರು.
“ಒಳ್ಳೊಳ್ಳೆ ಹೊಸ ಕಲಾವಿದರು ಬರುತ್ತಾ ಇದ್ದಾರೆ. ಅವರ ಚಿತ್ರಗಳನ್ನು ನೋಡಿ ಬೆನ್ನು ತಟ್ಟಿ. ನಮಗೂ ನೀವು ಬೆನ್ನು ತಟ್ಟಿದ್ದಕ್ಕೆ ನಾನು ಇವತ್ತು ಈ ಸ್ಥಾನದಲ್ಲಿರೋದು. ನೀವೆಲ್ಲಾ ಕೇಳ್ತಾ ಇದೀರ ನನಗೆ ಗೊತ್ತು ಅಪ್‌ಡೇಟ್ ಅಂತ. ಒಂದು ವಿಷಯ ಹೇಳ್ತೀನಿ, ನಾನು ಕೂತಿದೀನಿ ಅಂದ್ರೆ ಅದು ನೀವು ಕೊಟ್ಟ ಧೈರ್ಯದಿಂದ. ಹಂಗಂತ ನಾನು ರಿಲ್ಯಾಕ್ಸ್ ಆಗಿ ಕೂತಿಲ್ಲ. ನೀವು ಕೊಟ್ಟಿರೋ ಸಕ್ಸಸ್ ಜವಾಬ್ದಾರಿ ಅಂತ ತಿಳಿದುಕೊಂಡು ಇನ್ನೂ ಮುಂದೆ ಕೆಲಸ ಮಾಡಬೇಕು ಅಂತ ಮುಂದಿನ ಹಂತಕ್ಕೋಸ್ಕರ ಪ್ರಿಪೇರ್ ಆಗ್ತಾ ಇದೀನಿ, ಕೆಲಸ ಮಾಡ್ತೀನಿ. ತಾಳ್ಮೆ ಇಟ್ಟುಕೊಳ್ಳಿ, ನಾನು ಯಾವತ್ತೂ ಅನೌನ್ಸ್‌ಮೆಂಟ್ ಅಂತ ಹೇಳಿಲ್ಲ. ತುಂಬಾ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ, ಯಾವುದೇ ತಿಂಗಳು ಬಂದಾಗಲೂ ಈ ತಿಂಗಳು ಅಪ್‌ಡೇಟ್ ಅಂತ ಹೇಳಿ ಹೇಳಿ ನಿಮಗೆ ಆ ತಾಳ್ಮೆ ಲೆವೆಲ್ ಹೋಗ್ತಿದೆ, ಮಿಸ್‌ಗೈಡ್ ಆಗ್ತಿದೆ. ನಾನೇ ಹೇಳ್ತೀನಿ, ಅಡುಗೆ ಬೆಂದಮೇಲೆ ಬಡಿಸಬೇಕು, ಮುಂಚೆನೇ ಮಾಡೋಕೆ ನನಗೆ ಇಷ್ಟ ಇಲ್ಲ, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ, ನಿಮಗೆ ಇಷ್ಟವಾಗುವಂತ ಕೆಲಸ ಆಗುತ್ತೆ, ಥ್ಯಾಂಕ್ಯೂ” ಎಂದು ಯಶ್ ಹೇಳಿಕೆ ನೀಡಿದರು.