ಮೈಸೂರು: ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ದಂಪತಿ ಪುತ್ರ, ನಟ ಅಭಿಷೇಕ್ ಅವರ ಮದುವೆ ನಿಶ್ಚಯವಾಗಿದೆ. ಅಭಿಷೇಕ್ ಅವರ ನಿಶ್ಚಿತಾರ್ಥ ಡಿಸೆಂಬರ್ 11 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಆದರೆ ಅಭಿಷೇಕ್ ಮದುವೆ ಆಗಲಿರುವ ಹುಡುಗಿ ಖ್ಯಾತ ಮಾಡೆಲ್ ಆಗಿದ್ದಾರೆ. ಇಷ್ಟು ಬಿಟ್ಟರೆ ಈ ಬಗ್ಗೆ ಅಂಬರೀಷ್ ಕುಟುಂಬ ಯಾವುದೇ ವಿವರಗಳನ್ನು ಬಿಟ್ಟು ಕೊಟ್ಟಿಲ್ಲ. ಇದು ಆರೆಂಜ್ ಮ್ಯಾರೇಜ್ ಆಗಿದ್ದು, ನಿಶ್ಚಿತಾರ್ಥದವರೆಗೂ ಯಾವುದೇ ವಿವರಗಳನ್ನು ಬಿಟ್ಟುಕೊಡದಿರಲು ಸುಮಲತಾ ಮತ್ತು ಅಭಿಷೇಕ್ ನಿರ್ಧರಿಸಿದ್ದಾರೆ.
ನಿಶ್ಚಿತಾರ್ಥಕ್ಕೆ ಎಲ್ಲಾ ತಯಾರಿ ನಡೆದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ‘ಅಮರ್’ ಸಿನಿಮಾ ನಂತರ ಅಭಿಷೇಕ್ ಅವರ ಕೈಯಲ್ಲಿ ಕೆಲವು ಸಿನಿಮಾಗಳಿವೆ. “ಬ್ಯಾಡ್ ಮ್ಯಾನರ್ಸ್” ಸಿನಿಮಾ ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದೆ. ಈ ನಡುವೆ ಅಭಿಷೇಕ್ ಮುಂದಿನ ವಿಧಾನ ಸಭಾ ಚುನಾವಣೆಗೂ ಸ್ಪರ್ಧಿಸುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಸದ್ಯಕ್ಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸುಮಲತಾ ಅವರೇ ಸ್ಪಷ್ಟಪಡಿಸಿದ್ದಾರೆ.





