ಮನೆಯಲ್ಲಿ ಹಿರಿಯರಿದ್ದಾರೆ ಎಂದರೆ ಅಲ್ಲಿ ಆಹಾರ ಪದ್ಧತಿಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಮಗುವಿನಂತೆ ಸೂಕ್ಷ್ಮ ಆರೋಗ್ಯ ಅವರದ್ದಾಗಿರುವುದಲ್ಲ, ವಯಸ್ಸಾದಂತೆ ರೋಗ ನಿರೋಧಕ ಶಕ್ತಿ ಕುಂದುವುದರಿಂದ ಆರೋಗ್ಯಕರ ಆಹಾರ ಶೈಲಿ ಕಾಪಾಡಿಕೊಳ್ಳುವುದು ಮುಖ್ಯ.
ಆಹಾರದಲ್ಲಿ ಮಿತಿ ಹಾಗೂ ಪೌಷ್ಟಿಕ ಆಹಾರ ವನ್ನು ಸೇವನೆ ಮಾಡುವುದರಿಂದ ಹಿರಿಯರು ವೃದ್ಧಾಪ್ಯ ತಲುಪಿದರೂ ಆರೋಗ್ಯ ಸಮ ತೋಲನ ಕಾಪಾಡಿಕೊಳ್ಳಬಹುದು. ಇದಕ್ಕಾಗಿ ಅವರು ಒಂದಿಷ್ಟು ಆಹಾರ ಸೇವಿಸುವುದು ಅಗತ್ಯ. ಅವುಗಳೆಂದರೆ…
ಸೇಬು: ನಿತ್ಯ ಒಂದೊಂದು ಸೇಬು ಸೇವನೆ ಮಾಡಿದರೆ ಹಿರಿಯರೂ ವೈದ್ಯರಿಂದ ದೂರವಿರಬಹುದು ಎಂಬುದು ಸುಳ್ಳಲ್ಲ. ರಕ್ತದ ಒತ್ತಡ ಮತ್ತು ಮಧುಮೇಹ ಸಮಸ್ಯೆಯನ್ನು ಸೇಬು ತನ್ನಲ್ಲಿನ ಆಂಟಿ-ಆಕ್ಸಿಡೆಂಟ್ ಮತ್ತು ಕರಗುವ ನಾರಿನ ಅಂಶದಿಂದ ಮತ್ತು ವಿಟಮಿನ್ ‘ಸಿ’ ಅಂಶದಿಂದ ನಿಯಂತ್ರಿಸುತ್ತದೆ.
ಹಸಿರು ಎಲೆ-ತರಕಾರಿಗಳು: ದಂಟಿನ ಸೊಪ್ಪು, ಪಾಲಕ್ ಸೊಪ್ಪು, ಹೂ ಕೋಸು, ಎಲೆ ಕೋಸು, ಬೊಕೋಲಿ ಇತ್ಯಾದಿ ಆಹಾರಗಳು ಹಿರಿಯರ ಮಾನಸಿಕ ಆರೋಗ್ಯ ಹೆಚ್ಚಿಸುತ್ತವೆ.
ಮೀನು: ಮೀನಿನಲ್ಲಿ ಒಮೆಗಾ-3 ಫ್ಯಾಟಿ ಅಂಶಗಳು ಹೆಚ್ಚಾಗಿರುವುದಿಂದ 60 ವರ್ಷ ಮೇಲ್ಪ ಟ್ಟವರಿಗೆ ಹೃದಯ ಮತ್ತು ಮಿದುಳಿನ ಸಮಸ್ಯೆ ಗಳನ್ನು ಪರಿಹಾರ ಮಾಡುವ ಗುಣಲಕ್ಷಣ ಹೊಂದಿವೆ.
ಮೊಟ್ಟೆ: ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಯಥೇಚ್ಛವಾಗಿದ್ದು, ದೇಹದ ಮಾಂಸಖಂಡ ಗಳನ್ನು ಬಲಪಡಿಸುವುದಕ್ಕೆ ಸಹಾಯಕವಾಗಿದೆ.
ಕಾಫಿ ಸೇವನೆ: ಹಿರಿಯರಲ್ಲಿ ಹಿತಮಿತವಾದ ಕಾಫಿ ಸೇವನೆಯ ಅಭ್ಯಾಸವಿದ್ದರೆ ಹೃದಯ ಸಂಬಂಧಿ, ಉಸಿರಾಟದ ಸಮಸ್ಯೆ, ಪಾರ್ಶ್ವ ವಾಯು, ಅಲ್ಟಿಮರ್ ಕಾಯಿಲೆ ಸೇರಿದಂತೆ ಕೆಲವು ಸೋಂಕುಗಳನ್ನು ದೂರಮಾಡಬಹುದು.