ಟೀನೇಜ್‌ನಲ್ಲಿ ಇರುವ ಯುವ ಮನಸ್ಸುಗಳಿಗೆ ಡಾ. ರವೀಶ್ ಕಿವಿಮಾತು
ದಾರಿ ಸಾಗುತ್ತಾ ಇರುವಾಗ ದೃಶ್ಯಗಳು ಬದಲಾಗುತ್ತಾ ಹೋಗುತ್ತವೆ. ಅದೇ ರೀತಿ ಮನುಷ್ಯನ ಜೀವನ ಸಾಗುತ್ತಾ ಹೋದಂತೆ ಮನಸ್ಸು, ದೇಹ ಪ್ರಕೃತಿ, ನೋಡುವ ನೋಟ, ಆಡುವ ಆಟ ಎಲ್ಲವೂ ಬದಲಾಗುತ್ತಾ ಹೋಗುತ್ತವೆ. ಈ ರೀತಿಯ ವೈವಿಧ್ಯತೆಯೇ ಚೆಂದದ ಬದುಕಿನ ಹೂರಣ. ಇಂತಿಪ್ಪ ಮಜಲುಗಳಲ್ಲಿ ಟೀನೇಜ್ ಎನ್ನುವ ಶಿಶೋರಾವಸ್ಥೆ ಬದುಕಿನ ಮುಖ್ಯ ಘಟ್ಟ.
ಟೀನೇಜ್ ಎಂಬುದನ್ನು ಅತ್ಯಂತ ಸುಲಭವಾಗಿ ಬಣ್ಣದ ಲೋಕ ಎಂದುಬಿಡಬಹುದು. ಕಣ್ಣಿಗೆ ಕಾಣುವುದರಲೆಲ್ಲಾ ಒಂದು ಬಗೆಯ ಚಂದ ಅಡಗಿರುತ್ತದೆ. ಎಲ್ಲದರಲ್ಲಿಯೂ ಆಕರ್ಷಣೆ ಅಡಕವಾಗಿರುತ್ತದೆ. ಸೌಂದರ್ಯವನ್ನು ಆಸ್ವಾದಿಸುತ್ತಾ, ಜೀವನದ ಗುರಿಯತ್ತ ನೇರವಾಗಿ ಸಾಗಿದರೆ ಸೇಫ್. ಇಲ್ಲಿ ಎಡವಿದರೆ ಸಂಕಷ್ಟ ಪಕ್ಕಾ. ಇದಕ್ಕೆ ನಮ್ಮ ಮುಂದೆ ಸಾಕಷ್ಟು ಜೀವಂತ ಉದಾಹರಣೆಗಳಿವೆ. ಇಂದಿನ ಸೋಷಲ್ ಮೀಡಿಯಾ, ವೇಗದ ಇಂಟರ್‌ನೆಟ್ ಯುಗದಲ್ಲಿ ಎದುರಾಗುವ ಅಗ್ಗದ ಆಕರ್ಷಣೆಗಳಿಂದ ತಪ್ಪಿಸಿಕೊಂಡು ಮುನ್ನಡೆಯುವುದು ಯುವಕರಿಗೆ ನಿಜಕ್ಕೂ ಸವಾಲೇ ಸೈ. ಇದನ್ನು ಹೇಗೆ ಎದುರಿಸಬೇಕು ಎಂದು ಯುವಕರಿಗೆ ಸರಳವಾಗಿ ಹೇಳಿದ್ದಾರೆ ಮನೋವೈದ್ಯರಾದ ಡಾ. ಬಿ.ಎನ್ ರವೀಶ್.
ಬಾಲ್ಯ ಮುಗಿದ ನಂತರ ಬದುಕಿನ ಎರಡನೇ ಇನ್ನಿಂಗ್ಸ್ ಶಿಶೋರಾವಸ್ಥೆಯಲ್ಲಿ ತೆರೆದುಕೊಳ್ಳುತ್ತದೆ. ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ದೇಹ ಶಕ್ತಿ ಪಡೆದುಕೊಳ್ಳುವ ಹಂತ ಇದು. ಇದು ನಾವೇನೇ ಮಾಡದಿದ್ದರೂ ಪ್ರಕೃತಿ ನಿಯಮದಂತೆ ಬದಲಾವಣೆ ಆಗುತ್ತದೆ. ಆದರೆ ಈ ಅವಧಿಯಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಪ್ರಮುಖ ಜವಾಬ್ದಾರಿ ಟೀನೇಜರ್‌ಗಳ ಮೇಲಿರುತ್ತದೆ. ಇದು ಪ್ರಕೃತಿ ಸಹಜವಾಗಿ ಆಗುವುದಿಲ್ಲ, ಬದಲಾಗಿ ಸ್ವ ಪ್ರಯತ್ನ, ಪೋಷಕರು, ಶಿಕ್ಷಕರು, ಸುತ್ತಲಿನ ಸಮಾಜದ ನಡವಳಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ.
ಯವ್ವನದ ದಾರಿಯಲ್ಲಿ
ಹನ್ನೆರಡು, ಹದಿಮೂರು ವರ್ಷ ದಾಟಿದ ನಂತರ ಮಕ್ಕಳಲ್ಲಿ ದೈಹಿಕ ಬದಲಾವಣೆಯಾಗಲು ಪ್ರಾರಂಭವಾಗುತ್ತದೆ. ಪ್ರತಿ ೩ ವರ್ಷಕ್ಕೂ ಈ ಬದಲಾವಣೆ ಬೇರೆ ಬೇರೆ ಘಟ್ಟಗಳನ್ನು ದಾಟುತ್ತದೆ. ದೇಹ ಹೊಸ ಹೊಸ ಬೇಡಿಕೆಗಳನ್ನು ಇಡುತ್ತದೆ. ಮನಸ್ಸಿನ ಅಲೆದಾಟ ಹೆಚ್ಚುತ್ತದೆ. ಇಂತಹ ವೇಳೆಯಲ್ಲಿಯೇ ವ್ಯಕ್ತಿ ಅಸಲಿ ದಾರಿ ಕಂಡುಕೊಳ್ಳಬೇಕು. ಇದಕ್ಕೆ ಸ್ವಯಂ ನಿಯಂತ್ರಣ ಅತಿ ಮುಖ್ಯ. ಇದರ ಜೊತೆಗೆ ಮನೆಯವರು, ಶಾಲೆ, ಕಾಲೇಜು, ಸುತ್ತಲಿನ ಪರಿಸರವೂ ಪ್ರಮುಖ.
ದಾರಿ ತಪ್ಪದಿರಲು ಸುಲಭ ದಾರಿ
* ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದನ್ನು ಕಲಿಯಬೇಕು. ಯಾವುದನ್ನು ತೆಗೆದುಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವ ಸ್ವಯಂ ವಿವೇಚನೆಯನ್ನು ಉತ್ತಮರಿಂದ ತಿಳಿದುಕೊಳ್ಳಬೇಕು.
* ಟೀನೇಜ್‌ನಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಆಗುವ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಮತೋಲಿತ ಆಹಾರ, ಉತ್ತಮ ದಿನಚರಿ ಬೆಳೆಸಿಕೊಳ್ಳಬೇಕು.
* ಇಂದಿನ ಸೋಷಲ್ ಮೀಡಿಯಾಗಳ ದಾಳಿಯಿಂದ ತಪ್ಪಿಸಿಕೊಂಡರೆ ಯಶಸ್ಸಿನ ಹಾದಿ ಅರ್ಧ ಕ್ರಮಿಸಿದಂತೆ. ಭ್ರಮೆಗೆ ಒಳಗಾಗಿ ಕಡೆಗೆ ಭ್ರಮ ನಿರಶನಕ್ಕೆ ಒಳಗಾಗದಿರುವಂತೆ ಎಚ್ಚರ ವಹಿಸಬೇಕು.
* ಸೂರ್ಯ ಹುಟ್ಟುವ ವೇಳೆಗೆ ನಾವು ಎದ್ದೇಳಬೇಕು, ಒಳ್ಳೆಯ ನೀರು, ಆಹಾರ, ಗಾಳಿ ಸೇವಿಸಿ ಮನಸ್ಸನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು.
* ಜೀವನದ ಉದ್ದೇಶ ಏನು ಎಂಬುದನ್ನು ಅರಿತುಕೊಳ್ಳಬೇಕು. ಅದಕ್ಕೆ ತಕ್ಕಂತೆ ಜೀವನ ಕ್ರಮ ರೂಪಿಸಿಕೊಳ್ಳಬೇಕು. ಇದಕ್ಕೆ ಮನೆಯವರ ಸಹಕಾರವನ್ನೂ ಪಡೆಯಬೇಕು.
* ಆಸೆಗಳು ದುರಾಸೆಗಳಾಗದಂತೆ ನೋಡಿಕೊಳ್ಳಬೇಕು. ಹಠವನ್ನು ಬೇರೆ ಕಡೆಗಳಿಗೆ ತಿರುಗಿಸದೇ ಸಾಧನೆಯ ಕಡೆ ತಿರುಗಿಸಬೇಕು.
* ತಾಳ್ಮೆ, ಸಹನೆ, ಮೌನ, ಪ್ರೀತಿ, ಸೋದರತ್ವಗಳೆಲ್ಲವನ್ನೂ ರೂಢಿಸಿಕೊಳ್ಳಬೇಕು. ಜೊತೆಗೆ ಯಾವುದರ ಮೂಲ ಉದ್ದೇಶ ಏನಿದೆಯೋ ಅಷ್ಟುನ್ನು ಮಾತ್ರ ಮಾಡಬೇಕು.
ಪೋಷಕರು, ಸಮಾಜದ ಪಾತ್ರ
ಟೀನೇಜ್‌ನಲ್ಲಿರುವ ಹುಡುಗ, ಹುಡುಗಿಯರಿಗೆ ಸರಿಯಾದ ದಾರಿ ತೋರುವ ಗುರುತರವಾದ ಜವಾಬ್ದಾರಿ ಪೋಷಕರು, ಶಿಕ್ಷಕರು ಮತ್ತು ಸಮಾಜದ ಮೇಲಿದೆ. ಇದಕ್ಕಾಗಿ ಅವರು ದೊಡ್ಡ ದೊಡ್ಡ ಸಾಹಸಗಳನ್ನು ಮಾಡಬೇಕಿಲ್ಲ. ಅದಕ್ಕೆ ಬದಲಾಗಿ ಸಣ್ಣ ಸಣ್ಣ ಪ್ರಯೋಗಗಳನ್ನು ಮಾಡಿದರೆ ಸಾಕು.
* ಹೇಳುವುದನ್ನು ನಿಲ್ಲಿಸಿ, ಮಾಡಿ ತೋರಿಸುವತ್ತ ಗಮನ ನೀಡಬೇಕು, ಮಾತಿಗಿಂತ ಮಾದರಿ ಮುಖ್ಯ.
* ಒಳ್ಳೆಯ ಕಾರ್ಯ ಮಾಡಿದಾಗ ಅದಕ್ಕೆ ಸೂಕ್ತ ಪ್ರೋತ್ಸಾಹ, ಬಹುಮಾನ ನೀಡಿ ಗೌರವಿಸುವುದು.
* ಪ್ರಾರಂಭದಲ್ಲಿ ಮಾಡುವ ತಪ್ಪುಗಳನ್ನು ತಿದ್ದಬೇಕು. ಮಾಡಿದ ತಪ್ಪು ಎಲ್ಲರಿಗೂ ಗೊತ್ತಾಗದ ಹಾಗೆ ಎಚ್ಚರ ವಹಿಸಬೇಕು.
* ಉತ್ತಮರ ಜೀವನ ಚರಿತ್ರೆ, ಒಳ್ಳೆಯ ಪುಸ್ತಕಗಳು, ಸಿನಿಮಾಗಳನ್ನು ಪರಿಚಯಿಸಬೇಕು.
* ತಮ್ಮ ಕೌಟುಂಬಿಕ ವ್ಯವಸ್ಥೆಯ ಇತಿಮಿತಿಗಳು, ಅದರ ಹಿನ್ನೆಲೆ, ಮುಂದೆ ಮಾಡಬಹುದಾದ ಕಾರ್ಯಗಳ ಬಗ್ಗೆ ಯುವಕರಿಗೆ ಸೂಕ್ಷ್ಮವಾಗಿ ಹೇಳುವುದು.