ದೇಹಕ್ಕೆ ವಯಸ್ಸಾದಂತೆಲ್ಲಾ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದೇ ಕಾರಣಕ್ಕೆ ವಯಸ್ಸಾದವರಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚು. ಉತ್ತಮ ಜೀವನ ಕ್ರಮ, ಪೌಷ್ಠಿಕ ಆಹಾರ ಸೇವನೆ, ನಿಗದಿತ ವ್ಯಾಯಾಮಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ವಯೋಸಹಜ ಸಮಸ್ಯೆಗಳ ತೀವ್ರತೆಯಿಂದ ತಪ್ಪಿಸಿಕೊಳ್ಳಬಹುದು.
ಬಿಪಿ, ಸಕ್ಕರೆ ಕಾಯಿಲೆ, ಕಣ್ಣಿನ ತೊಂದರೆ, ಕೀಲುಗಳಲ್ಲಿ ನೋವು, ನೆನಪಿನ ಶಕ್ತಿ ಕುಂದುವುದು, ಹೃದಯ, ಕಿಡ್ನಿ ಸಂಬಂಧಿ ಸಮಸ್ಯೆಗಳು ಕಾಡುವ ಸಮಯದಲ್ಲಿ ನಿಗದಿತವಾದ ಜೀವನ ಶೈಲಿ ಕೈ ಹಿಡಿಯುತ್ತದೆ. ಸಮತೋಲಿತ ಆಹಾರ, ವ್ಯಾಯಾಮದ ಜೊತೆ ನಮ್ಮ ಮಾನಸಿಕ ಆರೋಗ್ಯವೂ ಮುಖ್ಯ.
* ದೇಹಕ್ಕೆ ವ್ಯಾಯಾಮ ಅತಿ ಮುಖ್ಯ. ಇದರಿಂದ ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಒಳ್ಳೆಯ ನಿದ್ದೆ ಬಂದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಬೆಳಗ್ಗಿನ ವೇಳೆಯಲ್ಲಿ ನಿದ್ದೆ ಮಾಡುವುದನ್ನು ಬಿಡಿ.
* ರಾತ್ರಿ ಸುಮಾರು ೭-೮ ಗಂಟೆಗೆ ಊಟ ಮಾಡಿ ಎರಡು ತಾಸಿನ ನಂತರ ನಿದ್ರಿಸುವುದು ಒಳಿತು. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.
* ರಾತ್ರಿ ವೇಳೆ ಅತಿಯಾದ ಎಣ್ಣೆ ಪದಾರ್ಥ, ಖಾರವಾದ ಆಹಾರವನ್ನು ಸೇವಿಸದಿರಿ. ಇದರಿಂದ ಅಸಿಡಿಟಿ, ಹುಳಿತೇಗಿನಿಂದ ಪಾರಾಗಬಹುದು.
* ನಿಗದಿತ ಸಮಯದಲ್ಲೇ ಮಾತ್ರೆ ಸೇವನೆ, ಊಟ-ತಿಂಡಿ ಮಾಡುವುದು ಉತ್ತಮ.
* ನಿಯಮಿತವಾಗಿ ವೈದ್ಯರನ್ನು ಭೇಟಿಯಾಗುವುದು, ಚೆಕಪ್‌ಗಳನ್ನು ಮಾಡಿಸುವುದು ಸೂಕ್ತ.
* ನಕಾರಾತ್ಮಕ ಚಿಂತನೆಗಳನ್ನು ದೂರವಿಟ್ಟು, ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡಬೇಕು.
* ಕುಟುಂಬ ಸದಸ್ಯರು, ಮಕ್ಕಳು, ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಹಳೆಯ ಸಂತಸದ ಕ್ಷಣಗಳನ್ನು ಮೆಲುಕು ಹಾಕುವುದು ಇನ್ನೂ ಉತ್ತಮ.





