ವಾರದ ಮುಖ
ಕನ್ನಡದ ಕಥೆಗಾರ ಬನ್ನೂರಿನ ಅದೀಬ್ ಅಖ್ತರ್ ಬಳಿ ನೀವು ಈಗ ಯಾಕೆ ಬರೆಯುತ್ತಿಲ್ಲ ಸಾಹೇಬರೇ ಎಂದು ಕೇಳಿದರೆ ‘ಒಂದು ಕಥೆ ಬರೆದಿಟ್ಟಿರುವೆ. ಆದರೆ ಅದಕ್ಕೆ ಇನ್ನೂ ಹೆಸರು ಇಟ್ಟಿಲ್ಲ. ಹಾಗಾಗಿ ಅದು ನನ್ನಲ್ಲೇ ಉಳಿದು ಬಿಟ್ಟಿದೆ’ ಎಂದು ಮಗುವಿನ ಹಾಗೆ ನಗುತ್ತಾರೆ. ಆದರೆ ನಿಜವಾದ ವಿಷಯ ಏನೆಂದರೆ ಮೂರು ವರ್ಷಗಳ ಹಿಂದೆ ಮಿದುಳಿಗೆ ಲಘು ಆಘಾತಗೊಂಡು ಪ್ರಜ್ಞಾಹೀನರಾಗಿದ್ದ ಅದೀಬ್ ಈಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಮಡದಿ ರಶೀದಾ ಭಾನು ಪತಿಗೆ ಕಿವಿ ಮತ್ತು ಮಾತಿನ ಹಾಗೆ ಸಾಥ್ ನೀಡುತ್ತಿದ್ದಾರೆ. ಬನ್ನೂರಿನ ಮುಖ್ಯ ರಸ್ತೆಯಲ್ಲಿ ಪುಟ್ಟದೊಂದು ಚಪ್ಪಲಿ ಅಂಗಡಿ ಇಟ್ಟುಕೊಂಡು ಬದುಕುತ್ತಿರುವ ಅದೀಬ್ ಅವರ ನಿಜವಾದ ಹೆಸರು ಇಕ್ಬಾಲ್ ಅಹಮದ್. ಅದೀಬ್ ಅಖ್ತರ್ ಅನ್ನುವುದು ಅವರ ಕಾವ್ಯನಾಮ. ಮೊದಲು ಉರ್ದುವಿನಲ್ಲಿ ಬರೆಯುತ್ತಿದ್ದ ಅದೀಬ್ ತಮ್ಮ ೪೪ ನೆಯ ವಯಸ್ಸಿನಲ್ಲಿ ಕನ್ನಡದ ಅ ಆ ಇ ಈ ಕಲಿತು ಆಮೇಲೆ ಕನ್ನಡದಲ್ಲೇ ಐದು ಪುಸ್ತಕಗಳನ್ನು ಬರೆದರು.
ಇದೀಗ ೬೭ ವರ್ಷ ತಲುಪಿರುವ ಅದೀಬ್ ಅವರಿಗೆ ಕನ್ನಡದಲ್ಲಿ ಇನ್ನೂ ಬರೆಯುವ ಆಸೆ. ಅವರ ಮಡದಿ ರಶೀದಾರಿಗೂ ತನ್ನ ಗಂಡ ಕನ್ನಡದಲ್ಲಿ ಇನ್ನಷ್ಟು ಬರೆದು, ಇನ್ನಷ್ಟು ಖ್ಯಾತರಾಗಬೇಕು ಎನ್ನುವ ಆಸೆ. ಅದೀಬ್ ಇನ್ನೂ ಚೇತರಿಸಿಕೊಂಡು ಕನ್ನಡದಲ್ಲಿ ಮತ್ತಷ್ಟು ಬರೆಯಬೇಕು ಎನ್ನುವುದು ಕನ್ನಡದ ಅವರ ಅಭಿಮಾನಿ ಓದುಗರ ಹಂಬಲ.