ಸಿ.ಎಂ.ಸುಗಂಧರಾಜು
ವೃತ್ತಿ ಸಲುವಾಗಿ ಮೈಸೂರು-ನಂಜನಗೂಡು ನಡುವೆ ನಿತ್ಯ ಸಂಚಾರ ಮಾಡುವುದು ನನ್ನ ದಿನಚರಿ. ನಿತ್ಯ ಓಡಾಡುವಾಗಲೆಲ್ಲ ಒಂದೊಂದು ಹೊಸ ಮುಖಗಳ ಪರಿಚಯವಾಗುತ್ತದೆ. ಅವರೊಂದಿಗೆ ಮಾತನಾಡುವುದು, ಏನಾದರೂ ಹೊಸ ವಿಷಯ ಕೆದಕುವುದು ನನ್ನ ಹವ್ಯಾಸ. ಹೀಗೆ ಒಮ್ಮೆ ನಂಜನ ಗೂಡಿನಿಂದ ಮೈಸೂರಿಗೆ ಹೋಗ ಬೇಕಾದರೆ ೭೫ರ ಹರೆಯದ ಅಜ್ಜಿಯೊಬ್ಬರ ಪರಿಚಯವಾಯಿತು.
ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು ಅಜ್ಜಿ. ಆಕೆ ಏನೂ ಮೈಸೂರಿಗೆ ಬರು ವಂತವಳಲ್ಲ. ತನ್ನ ಹಳ್ಳಿಗೆ ತೆರಳಲು ಕುಳಿತ್ತಿದ್ದಳು. ಒಬ್ಬಳೇ ಕುಳಿತ್ತಿದ್ದ ಅಜ್ಜಿಯ ಪಕ್ಕದಲ್ಲಿ ಕುಳಿತೆ. ‘ವಸಿ ನೀರು ಕೊಡು ಮಗ’ ಅಜ್ಜಿ ನನ್ನನ್ನು ಕೇಳಿದರು. ಕೈಯಲ್ಲಿದ್ದ ಬಾಟಲಿ ನೀರನ್ನು ಕೊಟ್ಟು ‘ಏನಜ್ಜಿ ವಯಸ್ಸಾಗಿದೆ ಒಬ್ಬಳೆ ಬಂದಿದ್ದೀಯಲ್ಲ? ಜತೆಗೆ ಮಕ್ಕಳು ಬಂದಿಲ್ವೇ’ ಎಂದು ಪ್ರಶ್ನಿಸಿದೆ. ಅದಕ್ಕೆ ಅಜ್ಜಿ ‘ಅಯ್ಯೋ ತಕ ಮಗ. ಮೂರು ಗಂಡೈಕ ನಂಗ’ ಎಂದವಳೇ ಕಣ್ಣಲ್ಲಿ ನೀರು ಜಿನುಗಿಸಲು ಆರಂಭಿಸಿದಳು. ಗಾಬರಿಯಿಂದ ನಾನು ‘ಏನಜ್ಜಿ ಏನಾಯಿತು? ಮಕ್ಕಳು ಚೆನ್ನಾಗಿದ್ದಾರೆ ತಾನೇ’ ಎಂದೆ.
ಅಜ್ಜಿ ಮಾತನಾಡಲು ಶುರು ಮಾಡಿದಳು. ಅವಳ ಜೀವನದ ಕಥೆ ಕೇಳಿ ನಿಜಕ್ಕೂ ಬೇಸರವಾಯಿತು. ಹಿರಿಯರು ಮಕ್ಕಳು ಇಳಿಗಾಲದಲ್ಲಿ ನಮ್ಮನ್ನು ನೋಡಿಕೊಳ್ಳುತ್ತಾರೆ, ಒಂದು ತುತ್ತು ಅನ್ನ ಹಾಕುತ್ತಾರೆ ಎಂದು ಕಷ್ಟಪಟ್ಟು ಓದಿಸಿ ದೊಡ್ಡವರನ್ನಾಗಿ ಮಾಡುತ್ತಾರೆ. ಆದರೆ ನಾವು ತಲೆಗೆ ವಿದ್ಯೆ ಹತ್ತಿದ ಬಳಿಕ ಉದ್ಯೋಗಗಳನ್ನು ಕಂಡುಕೊಂಡು ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ. ಅಂದಹಾಗೆ ಈ ಮಾತು ಏಕೆ ಹೇಳಿದೆ ಎಂದರೆ, ಅಜ್ಜಿಯ ಮೂವರು ಮಕ್ಕಳ ಪೈಕಿ ಒಬ್ಬ ಮಗ ಬೆಂಗಳೂರಿನಲ್ಲಿ ವೈದ್ಯನಾಗಿದ್ದರೆ, ಮತ್ತೊಬ್ಬ ಇಂಜಿನಿಯರ್ ಆಗಿದ್ದಾರೆ. ಮೂರನೇ ಮಗ ಓದು ತಲೆಗತ್ತದ ಪರಿಣಾಮ ಊರಿನಲ್ಲೇ ತಂದೆ ತಾಯಿಯೊಂದಿಗೆ ಉಳಿದು, ಕೃಷಿ ಮಾಡುತ್ತಾ ಒಂದು ಚಿಲ್ಲರೆ ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾನೆ. ಸದ್ಯಕ್ಕೆ ಈ ಮೂರನೇ ಮಗನ ಈ ಹಿರಿ ಜೀವಗಳಿಗೆ ಆಸರೆ.
ಮಕ್ಕಳು ಇಂಜಿನಿಯರ್, ಡಾಕ್ಟರ್, ಲಾಯರ್, ಟೀಚರ್ ಆಗಬಾರದು ಎಂದು ಹೇಳುತ್ತಿಲ್ಲ. ಶಿಕ್ಷಣ ಪಡೆದು ಉದ್ಯೋಗ ಗಳಿಸಿದ ಮೇಲೆ ಸಾಕಿ ಸಲುಹಿದ ತಂದೆ-ತಾಯಿಯನ್ನು ತೊರೆದು ಬದುಕ ಬಾರದು ಎಂಬುದಷ್ಟೇ ಈ ಲೇಖನದ ಉದ್ದೇಶ.
ಆ ಅಜ್ಜಿಯ ಮೂರನೇ ಮಗ ಅನಕ್ಷರಸ್ಥನಾದರೂ ಅಪ್ಪ-ಅಮ್ಮನನ್ನು ನೋಡಿಕೊಳ್ಳಬೇಕು ಎಂಬ ಸಂಸ್ಕಾರ ಆತನಲ್ಲಿದೆ. ಓದಿದ ಮಕ್ಕಳು ಪಟ್ಟಣ ಸೇರಿ ಕುಟುಂಬವನ್ನೇ ಮರೆತು ತಮ್ಮಷ್ಟಕ್ಕೆ ತಾವು ಜೀವನ ಕಟ್ಟಿಕೊಂಡು, ಹಿರಿಯರನ್ನು ಅನಾಥರಾಗಿಸಿ ಹೋಗುತ್ತಿದ್ದಾರೆ. ಇದು ಆ ಅಜ್ಜಿ ಒಬ್ಬಳ ಪಾಡಲ್ಲ. ಇಂತಹ ಹತ್ತಾರು ಜೀವಗಳು ತಮ್ಮ ಮಕ್ಕಳಿಂದ ದೂರಾಗಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ.
ಅಷ್ಟಕ್ಕೂ ಕೊನೆ ಮಗ ನೋಡಿಕೊಳ್ಳುತ್ತಿದ್ದರೂ ಅಜ್ಜಿ ಏಕೆ ಕಣ್ಣೀರು ಇಟ್ಟಳು? ಎಂಬ ಪ್ರಶ್ನೆ ಮೂಡುವುದು ಸಹಜ. ಅಂದ ಹಾಗೆ ಅಜ್ಜಿಗೆ ಇರುವುದು ಒಂದು ಎಕರೆ ಜಮೀನು ಅಷ್ಟೇ. ಕೃಷಿಯಲ್ಲಿ ಹೇಳಿ ಕೊಳ್ಳುವ ಲಾಭವಿಲ್ಲ. ಒಬ್ಬನೇ ಮಗ ತನ್ನ ಕುಟುಂಬದ ಜತೆ ತಂದೆ ತಾಯಿಯನ್ನೂ ನೋಡಿಕೊಂಡು ಚಿಲ್ಲರೆ ಅಂಗಡಿಯಿಂದ ಬರುವ ಅಲ್ಪ ಆದಾಯದಿಂದ ಸಂಸಾರ ಸಾಗಿಸುತ್ತಿದ್ದಾನೆ. ಇನ್ನಿಬ್ಬರು ಮಕ್ಕಳು ಹಬ್ಬ ಹರಿದಿನಕ್ಕಷ್ಟೇ ಊರಿಗೆ ಬಂದು ಹೋಗು ತ್ತಾರೆಯೇ ವಿನಾ ಕಷ್ಟಸುಖ ವಿಚಾರಿಸುವು ದಿಲ್ಲ. ಹೀಗಿರುವಾಗ ಮೂರನೇ ಮಗನ ಕಷ್ಟದ ಜೀವನ ಅಜ್ಜಿಯ ಕಣ್ಣಂಚಲ್ಲಿ ನೀರು ಜಿನುಗುವಂತೆ ಮಾಡಿತು.
ಇಷ್ಟೆಲ್ಲ ಮಾತುಕಥೆ ನಡೆಯುತ್ತಿದ್ದಂತೆ ಅಜ್ಜಿಯ ಊರಿನ ಬಸ್ ಬಂದಿತ್ತು. ಅಷ್ಟ ರಲ್ಲಾಗಲೇ ಮೈಸೂರು ಕಡೆಗೆ ನಾಲ್ಕೆ ದು ಬಸ್‌ಗಳು ಬಂದುಹೋದರೂ ಅಜ್ಜಿ ಯನ್ನು ಬಿಡದೆ ಮಾತನಾಡಿಸುತ್ತಿದ್ದ ನಾನುಅಜ್ಜಿಯ ಬಸ್ ಬಂದ ಕೂಡಲೇ ಆಕೆಯನ್ನು ಬಸ್ ಹತ್ತಿಸಿ ಮೈಸೂರಿಗೆ ಹೊರಟೆ.





