• ಸಿ.ಎಂ.ಸುಗಂಧರಾಜು
ಕೇರಿಯೊಳಗಿನ ಅಜ್ಜ ಅಜ್ಜಿಯ ಪರಸಂಗ, ಒಗಟುಗಳು, ಕಥೆ, ಗಾದೆಗಳು ಈಗ ಕಣ್ಮರೆಯಾಗುತ್ತಿವೆ. ಬಹುಪಾಲು ಮಕ್ಕಳು ತಮ್ಮ ಬಾಲ್ಯವನ್ನು ಅಜ್ಜ ಅಜ್ಜಿಯರೊಂದಿಗೆ ಕಳೆಯದಿರುವುದೇ ಇವುಗಳು ಪ್ರಸ್ತುತದ ಪೀಳಿಗೆಯಿಂದ ದೂರಾಗಲು ಕಾರಣ.
ನಾವು ಸಣ್ಣವರಿದ್ದಾಗ ನಮ್ಮ ತಾತ ಪರಸಂಗ ಹೇಳುತ್ತಾನೆ ಎಂದು ಬೇಗ ಊಟ ಮುಗಿಸಿ ಮನೆಯ ಮುಂದಿನ ಜಗಲಿಕಟ್ಟೆಯ ಮೇಲೆ ಇಲ್ಲವೇ ಅಂಗಳದಲ್ಲಿ ಚಾಪೆ ಹಾಸಿಕೊಂಡು ತಯಾರಾಗಿ ಕುಳಿತಿರುತ್ತಿದ್ದೆವು. ಊಟ ಮುಗಿಸಿಬಂದ ತಾತ ಪರಸಂಗ ಹೇಳಲು ಆರಂಭಿಸಿದ ಅಂದರೆ ನಮಗೆಲ್ಲ ನಗು ಆರಂಭವಾಗುತ್ತಿತ್ತು.
ತಾತನ ಹಾಸ್ಯಭರಿತ ಕಥೆಗಳನ್ನು ಕೇಳಿಕೊಂಡು ನಿದ್ದೆಗೆ ಜಾರುತ್ತಿದ್ದೆವು. ಇವುಗಳೊಟ್ಟಿಗೆ ಒಂದಿಷ್ಟು ನೀತಿ ಕಥೆಗಳು, ಗಾದೆಗಳು ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ನಮ್ಮನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡಿದವು ಎಂದರೆ ತಪಾಗಲಾರದು.
ಇವೆಲ್ಲದರ ನಡುವೆ ನಮಗೆ ಕೆಲವೊಂದಿಷ್ಟು ಪರೀಕ್ಷೆಗಳನ್ನು ನಮ್ಮ ಮುಂದೆ ತಾತ ಇಡುತ್ತಿದ್ದ. ಕೆಲವೊಂದಿಷ್ಟು ಒಗಟುಗಳನ್ನು ಹೇಳಿ ಅವುಗಳನ್ನು ಬಿಡಿಸಿ ಎನ್ನುವುದು ನಮ್ಮ ತಾತನ ಚಾಳಿ ಎಂದೇ ಹೇಳಬೇಕು. ಕೇಳಿದ ಒಗಟನ್ನು ಮರುದಿನದವರೆಗೆ ಸಮಯ ತೆಗೆದುಕೊಂಡು ಬಿಡಿಸಬೇಕಿತ್ತು ನಾವು. ಬಹುಶಃ ಹಾಗೆಲ್ಲ ಮೊಬೈಲ್ ಗೀಳು ಇಲ್ಲದಿರುವುದೇ ನಾವು ನಮ್ಮ ಬಾಲ್ಯವನ್ನು ಅರ್ಥಪೂರ್ಣವಾಗಿ ಕಳೆಯಲು ಸಾಧ್ಯವಾಯಿತು ಎನ್ನಬಹುದು.
ಈಗ ಅಜ್ಜ-ಅಜ್ಜಿ ಹಳ್ಳಿಯಲ್ಲಿದ್ದರೆ, ಮೊಮ್ಮಕ್ಕಳು ನಗರಗಳಲ್ಲಿದ್ದಾರೆ. ಒಂದು ವೇಳೆ ಅವರೂ ಮೊಮ್ಮಕ್ಕಳೊಂದಿಗೆ ಒಂದೇ ಮನೆಯಲ್ಲಿದ್ದರೂ ಮೊಬೈಲ್ ಗೀಳಿಗೆ ಅಂಟಿಕೊಂಡು ಮೊಮ್ಮಕ್ಕಳು ಅಜ್ಜ-ಅಜ್ಜಿಯರೊಟ್ಟಿಗೆ ಸಮಯ ಕಳೆಯುತ್ತಿಲ್ಲ. ಇದು ಪ್ರಸ್ತುತ ಪೀಳಿಗೆಯ ವಿಪರ್ಯಾಸ.
ವರ್ಷಕ್ಕೆ ಒಂದು ಬಾರಿ ತಾತ ಊರಿನ ಜನರೊಂದಿಗೆ ಭತ್ತದ ಕೊಯ್ಲಿಗೆ ಹೋಗುತ್ತಿದ್ದಾಗ ನಾವೂ ಅವರೊಟ್ಟಿಗೆ ಹೋಗುತ್ತಿದ್ದೆವು. ಅವರೆಲ್ಲ ಕೆಲಸ ಮುಗಿಸಿ ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು. ಊರಿಗೆ ಊರೇ ಕಿತ್ತು ತಿನ್ನುವ ಬಡತನದಲ್ಲಿದ್ದರೂ, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದ್ದರೂ ಅಲ್ಲಿ ಹಂಚಿ ಉಣ್ಣುವ ಬಾಂಧ್ಯವಕ್ಕೇನೂ ಕೊರತೆ ಇರುತ್ತಿರಲಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಗೇಯ್ದ ಭತ್ತವನ್ನು ಹಂಚಿಕೊಳ್ಳುತ್ತಿದ್ದರು. ಬೆವರು ಸುರಿಸಿ ತಂದ ಅನ್ನದ ಕೂಳನ್ನು ಮಕ್ಕಳಿಗೆಲ್ಲಾ ಹಂಚಿ ತಾವೂ ತಿನ್ನುತ್ತಿದ್ದರು. ಇವೆಲ್ಲ ನಮಗೆ ಒಂದೊಂದು ಜೀವನದ ಪಾಠವನ್ನು ಕಲಿಸಿವೆ. ಒಟ್ಟಿಗೆ ಉಂಡು, ಒಟ್ಟಿಗೆ ಬೆಳೆದ ನಮ್ಮ ಗೆಳೆಯರೆಲ್ಲ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಹಬಾಳ್ವೆ ನಡೆಸಲು ನಮಗೆ ಹಿರಿಯೊಂದಿಗೆ ಬೆರೆತು ಕಲಿತ ಪಾಠವೇ ಬುನಾದಿಯಾಗಿವೆ.
ತಾತ ಕಥೆ, ಗಾದೆ, ಪರಸಂಗ ಹೇಳಿದ್ದು ಮಾತ್ರವಲ್ಲ ಅದರೊಟ್ಟಿಗೆ ಬಾಡಿಗೆ ಸೈಕಲ್ ಪಡೆದು ಊರೂರು ಸುತ್ತಿಸಿದ್ದು, ಅಜ್ಜಿಯೊಂದಿಗೆ ಸೇರಿ ಕೈತುತ್ತು ತಿನಿಸಿದ್ದು, ಎಂತಹದ್ದೇ ಸಮಸ್ಯೆ ಎದುರಾದರೂ ಮೊಮ್ಮಕ್ಕಳ ಮುಂದೆ ತೋರಿಸಿಕೊಳ್ಳದೆ ನಮ್ಮನ್ನು ಜೋಪಾನ ಮಾಡಿ ಬೆಳೆಸಿದ ತಾತನನ್ನು ಮರೆಯಲಾಗದು.
ಈಗ ಕುಳಿತು ಕಥೆ ಕೇಳಲು ಮನೆಯ ಮುಂದೆ ಜಗುಲಿಗಳಿಲ್ಲ. ಅಂಗಳ ಈಗ ರಸ್ತೆಯಾಗಿ ವಾಹನ ಸಂಚಾರದಿಂದ ತುಂಬಿದೆ. ಕೈಯಲ್ಲಿ ಮೊಬೈಲ್ ಹಿಡಿದ ಎಲ್ಲರೂ ಅವರವರ ಲೋಕದಲ್ಲಿ ಮುಳುಗಿದ್ದಾರೆ. ಈ ಕಾಲಘಟದಲ್ಲಿ ಅಜ್ಜ ಅಜ್ಜಿಯರ ಪರಸಂಗವಿಲ್ಲ, ಒಗಟುಗಳಿಲ್ಲ, ಕಥೆಗಳಿಲ್ಲ, ಗಾದೆಯ ಮಾತುಗಳಂತೂ ಈ ಪೀಳಿಗೆ ಕೇಳಿರುವ, ಕೇಳಿಸಿಕೊಳ್ಳುವ ಉದಾಹರಣೆಗಳಿಲ್ಲ. ಇದು ಪ್ರಸ್ತುತ ಪೀಳಿಗೆಯ ದೌರ್ಭಾಗ್ಯವೇ ಸರಿ.