Mysore
21
overcast clouds
Light
Dark

ʼಪಿ.ಪಟ್ಟಣಕ್ಕೆ ವಲಯ ಅರಣ್ಯ ಅಧಿಕಾರಿ ಕಚೇರಿ ಸ್ಥಳಾಂತರಿಸಿʼ

ಮಹೇಶ ಕೋಗಿಲವಾಡಿ

ಪಿರಿಯಾಪಟ್ಟಣ: ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಕಚೇರಿಯನ್ನು ಪಿರಿಯಾಪಟ್ಟಣ ತಾಲ್ಲೂಕಿಗೆ ವರ್ಗಾವಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕು ಕೊಡಗಿನ ಗಡಿಭಾಗಕ್ಕೆ ಹೊಂದಿಕೊಂಡಂತಿದ್ದು, ಅರೆ ಮಲೆನಾಡು ಪ್ರದೇಶವಾಗಿದೆ. ಅತಿ ಹೆಚ್ಚಿನ ಅರಣ್ಯ ಪ್ರದೇಶವನ್ನು ಒಳಗೊಂಡಿರುವ ತಾಲ್ಲೂಕು ಇದಾಗಿದ್ದು, 60 ಕಿ.ಮೀ. ವ್ಯಾಪ್ತಿಗಳಲ್ಲಿ ನೂರಕ್ಕೂ ಹೆಚ್ಚು ಗ್ರಾಮಗಳು ಅರಣ್ಯದ ಅಂಚಿನಲ್ಲಿವೆ. 30ಕ್ಕೂ ಹೆಚ್ಚು ಹಾಡಿಗಳು ನಾಗರಹೊಳೆ ವನ್ಯಜೀವಿ ಅರಣ್ಯ ಪ್ರದೇಶದಲ್ಲಿವೆ.

ಇಷ್ಟೆಲ್ಲಾ ವನ್ಯಜೀವಿ ವಲಯ, ಅರಣ್ಯ ಪ್ರದೇಶ ಇಲ್ಲಿದ್ದರೂ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ವನ್ಯಜೀವಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಇಲ್ಲದೆ ಹುಣಸೂರು ತಾಲ್ಲೂಕಿನಲ್ಲಿ ಕಚೇರಿ ನಿರ್ಮಾಣ ಮಾಡಿರುವುದರಿಂದ ಪಿರಿಯಾಪಟ್ಟಣ ತಾಲ್ಲೂಕಿನ ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ.

ಈ ಅರಣ್ಯ ಪ್ರದೇಶಕ್ಕೆ ತಾಲ್ಲೂಕಿನ ನೂರಾರು ಗ್ರಾಮಗಳು ಹೊಂದಿಕೊಂಡಂತಿದ್ದು, ಈ ಅರಣ್ಯ ಪ್ರದೇಶದಿಂದ ಪ್ರತಿನಿತ್ಯ ಕಾಡುಪ್ರಾಣಿಗಳು ರೈತರ ಜಮೀನುಗಳಿಗೆ ಬೆಳೆಗಳಿಗೆ ಲಗ್ಗೆಯಿಟ್ಟು ಲಕ್ಷಾಂತರ ರೂ. ಮೌಲ್ಯದ ಬೆಳೆಗಳನ್ನು ನಾಶಪಡಿಸುತ್ತಿದ್ದು ಪರಿಹಾರಕ್ಕಾಗಿ ಹುಣಸೂರು ತಾಲ್ಲೂಕಿಗೆ ಹೋಗಲು ತೊಂದರೆಯಾಗುತ್ತಿದೆ. ಅದೇ ರೀತಿ ಇದುವರೆಗೂ ಕಾಡುಪ್ರಾಣಿಗಳಿಂದ ನಾಶವಾದಂತಹ ಬೆಳೆಗಳಿಗೆ ಯಾವುದೇ ಪರಿಹಾರ ದೊರೆಯುತ್ತಿಲ್ಲ.
ಆದ್ದರಿಂದ ತಾಲ್ಲೂಕಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಿರಿಯಾಪಟ್ಟಣ ತಾಲ್ಲೂಕಿಗೆ ವನ್ಯಜೀವಿ ರಾಷ್ಟ್ರೀಯ ಉದ್ಯಾನವನದ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ವರ್ಗಾಯಿಸಿಕೊಡಬೇಕೆಂದು ಅನೇಕ ಪ್ರಗತಿಪರ ಚಿಂತಕರು, ರೈತರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೋಟ್ಸ್‌))

ತಾಲ್ಲೂಕಿಗೆ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿಗಳ ಕಚೇರಿಯು ಅಗತ್ಯವಾಗಿ ಬೇಕಿದ್ದು, ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿಗಳ ಕಚೇರಿಯನ್ನು ಪಿ.ಪಟ್ಟಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. -ಕೆ.ವೆಂಕಟೇಶ್, ಪಶುಸಂಗೋಪನೆ ಸಚಿವರು

ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಹೆಚ್ಚಾಗಿದ್ದು, ಈ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಅನೇಕ ಗ್ರಾಮಗಳವರು ಕಾಡುಪ್ರಾಣಿಗಳಿಂದ ಉಂಟಾಗುವಂತಹ ತೊಂದರೆಗಳಿಗಾಗಲಿ, ಅರಣ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳಿಗಾಗಲಿ ವನ್ಯಜೀವಿ ವಿಭಾಗದ ಅರಣ್ಯ ಅಧಿಕಾರಿಗಳನ್ನು ಭೇಟಿ ಮಾಡಲು ಹುಣಸೂರು ತಾಲ್ಲೂಕಿಗೆ ಹೋಗಬೇಕಾಗಿದ್ದು, ಇದರಿಂದ ತಾಲ್ಲೂಕಿನ ಸಾವಿರಾರು ರೈತರಿಗೆ ಸಮಸ್ಯೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಕಚೇರಿಯನ್ನು ಸ್ಥಳಾಂತರಿಸಿದರೆ ತಾಲ್ಲೂಕಿನ ಜನತೆಗೆ ಅನುಕೂಲವಾಗಲಿದೆ.
-ಸುರೇಶ್‌, ರೈತ