Mysore
28
clear sky

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ನಿರುದ್ಯೋಗಿಗಳ ಬದುಕಿನ ಬೆಳ್ಳಿ ರೇಖೆ ಯುವನಿಧಿ

ರಾಜ್ಯ ಸರ್ಕಾರದ ಯುವನಿಧಿ ಯೋಜನೆ ಉದ್ದೇಶವು ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ಸಿಗುವವರೆಗೆ ಆರ್ಥಿಕ ಸಹಾಯ ನೀಡುವುದಾಗಿದೆ. ಪದವೀಧರರಿಗೆ ಮಾಸಿಕ ೩,೦೦೦ ರೂ. ಮತ್ತು ಡಿಪ್ಲೊಮಾ ಹೊಂದಿದವರಿಗೆ ೧,೫೦೦ ರೂ.ಗಳನ್ನು ೨ ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ನೀಡಲಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನಗಳನ್ನು ಪೂರ್ಣಗೊಳಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಯುವನಿಧಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ವೈದ್ಯಕೀಯ ಶಿಕ್ಷಣ, ಕೌಶಲ ಅಭಿವೃದ್ಧಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ತಮ್ಮ ಇಲಾಖೆಯಲ್ಲಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ‘ಆಂದೋಲನ’ಕ್ಕೆ ನೀಡಿರುವ ಸಂದರ್ಶನದ ಇಲ್ಲಿದೆ.

ಆಂದೋಲನ: ಯುವ ನಿಧಿ ಯೋಜನೆಯನ್ನು ರಾಜ್ಯದಲ್ಲಿ ಯಾವ ಉದ್ದೇಶಕ್ಕೆ ಜಾರಿಗೆ ತರಲಾಯಿತು?

ಶರಣ ಪ್ರಕಾಶ್ ಪಾಟೀಲ್: ಕೆಲಸ ಹುಡುಕುವ ಅವಧಿಯಲ್ಲಿ ಯುವಜನತೆಯ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾ ಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಕೇವಲ ಹಣ ನೀಡುವುದಲ್ಲದೆ, ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಮೂಲಕ ಉಚಿತ ತಾಂತ್ರಿಕ ತರಬೇತಿ ನೀಡಿ ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಸಂದರ್ಶನಗಳಿಗೆ ಹೋಗಲು ಮತ್ತು ಅಲ್ಪಾವಧಿಯ ಕೋರ್ಸ್‌ಗಳನ್ನು ಕಲಿಯಲು ಅಗತ್ಯವಾದ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆಂದೋಲನ: ಯೋಜನೆಯಿಂದ ಯುವಕರಿಗೆ ಏನು ಲಾಭ?

ಶರಣ ಪ್ರಕಾಶ್ ಪಾಟೀಲ್: ಪ್ರಾಥಮಿಕ ಪ್ರಯೋಜನವೆಂದರೆ ಆರ್ಥಿಕ ಸಹಾಯ. ಇದು ನಿರುದ್ಯೋಗಿ ಯುವಕರು ತಮ್ಮಮೂಲಭೂತ ಅಗತ್ಯಗಳನ್ನು ಪೂರೈಸಲು ಮತ್ತು ಉದ್ಯೋಗ ಹುಡುಕಾಟ ಅಥವಾ ಕೌಶಲ ಅಭಿವೃದ್ಧಿಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ. ಯೋಜನೆಯು ಒದಗಿಸುವ ಆರ್ಥಿಕ ಸ್ವಾತಂತ್ರ್ಯವು ಯುವ ವ್ಯಕ್ತಿಗಳ ಆತ್ಮವಿಶ್ವಾಸ ಮತ್ತು ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ, ಇದು ಅವರ ವೃತ್ತಿ ಗುರಿಗಳನ್ನು ಸಕ್ರಿಯವಾಗಿ ಮುಂದುವರಿಸಲು ಅವರನ್ನು ಪ್ರೋತ್ಸಾಹಿಸುತ್ತದೆ. ಈ ಯೋಜನೆಯು ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಯುವಜನರಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.

ಆಂದೋಲನ: ಯುವನಿಧಿಗೆ ಈವರೆಗೆ ಎಷ್ಟು ಅಭ್ಯರ್ಥಿಗಳು ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ?

ಶರಣ ಪ್ರಕಾಶ್ ಪಾಟೀಲ್: ಪದವಿ ಮುಗಿಸಿದ ೩,೭೨,೦೫೭ ಅಭ್ಯರ್ಥಿಗಳು ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ೭,೧೨೬ ಅಭ್ಯರ್ಥಿಗಳು ಸೇರಿದಂತೆ ಈವರೆಗೂ ಒಟ್ಟು ೩,೭೯,೧೮೩ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಆಂದೋಲನ: ಈ ಯೋಜನೆಯಲ್ಲಿ ಲಾಭ ಪಡೆದ ಅಭ್ಯರ್ಥಿಗಳು ಎಷ್ಟು ಮಂದಿ ಹಾಗೂ ಬಿಡುಗಡೆಯಾಗಿರುವ ಅನುದಾನದ ಮಾಹಿತಿ ನೀಡಬಹುದೇ?

ಶರಣ ಪ್ರಕಾಶ್ ಪಾಟೀಲ್: ರಾಜ್ಯದಲ್ಲಿ ಯುವ ನಿಧಿ ಯೋಜನೆ ಆರಂಭವಾದ ದಿನದಿಂದ ಈವರೆಗೂ ಕೌಶಲ ಅಭಿವೃದ್ಧಿ ಇಲಾಖೆ ವತಿಯಿಂದ ಒಟ್ಟು ೨,೯೮,೩೧೬ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಯೋಜನೆ ಯಡಿ ೮೭೪.೧೭ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ೩,೦೮,೨೬೭ ಅರ್ಹ ಅಭ್ಯರ್ಥಿಗಳಿಗೆ ೭೫೭.೯೨ ಕೋಟಿ ರೂ. ನಿರುದ್ಯೋಗ ಭತ್ಯೆ ವಿತರಿಸಲಾಗಿದೆ.

ಆಂದೋಲನ: ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೈಗೊಂಡಿರುವ ಕ್ರಮಗಳೇನು?

ಶರಣ ಪ್ರಕಾಶ್ ಪಾಟೀಲ್: ಯುವ ನಿಧಿ ಪ್ಲಸ್ ಯೋಜನೆ ಯಡಿ ಕೆಎಸ್‌ಡಿಸಿಯಿಂದ ಯುವನಿಧಿ ನೋಂದಾಯಿತ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡುವ ಮೂಲಕ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸಲಾಗುತ್ತದೆ. ಇಲ್ಲಿಯವರೆಗೆ ೧,೬೧೫ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ೧,೧೦೦ ಅಭ್ಯರ್ಥಿಗಳಿಗೆ ತರಬೇತಿ ನಡೆಯುತ್ತಿದೆ. ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗ ನಿಯೋಜನೆಗೆ ಅನುಕೂಲವಾಗುವಂತೆ ಇಂಗ್ಲಿಷ್, ಸಂವಹನ ಕೌಶಲ ತರಬೇತಿ ನೀಡಲಾಗುತ್ತದೆ. ಇಲ್ಲಿಯವರೆಗೆ ಒಟ್ಟು ೧೭,೦೫೬ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ೪೮ ಕೈಗಾರಿಕೆಗಳೊಂದಿಗೆ ಇಲಾಖೆಯು ಒಡಂಬಡಿಕೆಯನ್ನು ಮಾಡಿಕೊಂಡು ೫೫ ಸರ್ಕಾರಿ, ೪ ಅನುದಾನಿತ ಹಾಗೂ ೬ ಖಾಸಗಿ ಐಟಿಐಗಳಲ್ಲಿ Dual System of Training (DST) ಅನ್ನು ಅನುಷ್ಠಾನಗೊಳಿಸಲಾಗಿದೆ. ಮಾರುಕಟ್ಟೆ ಆಧಾರಿತ ಕೌಶಲ ತರಬೇತಿಗಳನ್ನು ಪದವಿ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಲಾಗಿದ್ದು, ಅಂತಿಮ ಪದವಿಯ ೬೬,೨೯೦ ವಿದ್ಯಾರ್ಥಿಗಳಿಗೆ ADOBE / Microsoft / Tally / Veranda ಕಂಪೆನಿಗಳ ಮೂಲಕ ಹಾಗೂ ಕೈಗಾರಿಕೆಗೆ ತಕ್ಕಂತೆ ಹೊಸ ಕೌಶಲ ಕೋರ್ಸ್‌ಗಳಡಿ ತರಬೇತಿಯನ್ನು ನೀಡಲಾಗಿದೆ.

ಆಂದೋಲನ: ‘ನನ್ನ ವೃತ್ತಿ ನನ್ನ ಆಯ್ಕೆ ’ ಏನಿದು ಪರಿಕಲ್ಪನೆ?

ಶರಣ ಪ್ರಕಾಶ್ ಪಾಟೀಲ್: ರಾಜ್ಯದ ೮ನೇ ತರಗತಿಯಿಂದ ೧೨ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಭವಿಷ್ಯದ ಆಯ್ಕೆಯ ಮಾರ್ಗದರ್ಶನದ ಮುಖೇನ ವೃತ್ತಿಗಳ ಆಯ್ಕೆಗೆ ಸಹಕರಿಸಲಾಗಿದ್ದು, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ಈಗಾಗಲೇ ಪ್ರೌಢ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯವರ ಸಹಕಾರದೊಂದಿಗೆ ೮ನೇ ಮತ್ತು ೯ನೇ ತರಗತಿಯ ೧೫೦ ಎನ್.ಎಸ್. ಕ್ಯೂ.ಎಫ್. ಶಾಲೆಗಳಲ್ಲಿನ ೩೫,೦೦೦ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿಯನ್ನು ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸದರಿ ಕಾರ್ಯಕ್ರಮವನ್ನು ವಿಸ್ತರಿಸಿ ೨.೩೦ ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.

ಆಂದೋಲನ: ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಯಾವ ರೀತಿ ತರಬೇತಿಯನ್ನು ನೀಡಲಾಗುತ್ತದೆ?

ಶರಣ ಪ್ರಕಾಶ್ ಪಾಟೀಲ್: ವಿದೇಶಿ ವಿಶ್ವವಿದ್ಯಾಲಯಗಳು ಪ್ರದರ್ಶನ ನೀಡಲು ಸಮಗ್ರ ವೇದಿಕೆ ನಿರ್ಮಿಸು ವುದು. ಪಾರದರ್ಶಕ, ಮೌಲ್ಯಾಧಾರಿತ, ವೈಯಕ್ತಿಕಗೊಳಿಸಿದ ಮಾರ್ಗದರ್ಶನಕ್ಕಾಗಿ ಆಗಸ್ಟ್ ೨೦೨೫ರಲ್ಲಿ ಸಾರ್ವಜನಿಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. studyabroad.ksdc karnataka.com ನಲ್ಲಿ ೩,೫೦೦ ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದರು. ಸುಮಾರು ೩೦೦ ಅಭ್ಯರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ದೃಢಪಡಿಸಿದ್ದು, ಉಳಿದ ಅಭ್ಯರ್ಥಿಗಳು ಕೌನ್ಸೆಲಿಂಗ್ ಹಂತದಲ್ಲಿದ್ದಾರೆ.

ಆಂದೋಲನ: ಬೃಹತ್ ಉದ್ಯೋಗ ಮೇಳಗಳು ಯಾವ ರೀತಿ ಅನುಕೂಲ ಕಲ್ಪಿಸಿವೆ?

ಶರಣ ಪ್ರಕಾಶ್ ಪಾಟೀಲ್: ೧೦ ಮೆಗಾ ಉದ್ಯೋಗ ಮೇಳಗಳನ್ನು ನಡೆಸಲಾಗಿದೆ. ೧,೦೪,೫೪೬ ಮಂದಿ ಉದ್ಯೋಗ ಮೇಳಗಳಿಗೆ ಹಾಜರಾಗಿದ್ದರು. ೧,೮೦೫ ಉದ್ಯೋಗದಾತರು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು ಮತ್ತು ೧೭,೭೮೯ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ೩೧,೬೭೦ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ ಮತ್ತು ಕೌನ್ಸೆಲಿಂಗ್ ಆಧಾರದ ಮೇಲೆ ಉದ್ಯೋಗ ನಿಯೋಜಿಸುವ ಪ್ರಕ್ರಿಯೆಯಲ್ಲಿದೆ.

ಆಂದೋಲನ: ಯಾವ ರೀತಿ ತರಬೇತಿ ನೀಡಲಾಗುತ್ತದೆ?

ಶರಣ ಪ್ರಕಾಶ್ ಪಾಟೀಲ್: ತರಬೇತಿಯನ್ನು ಕರ್ನಾಟಕ ಜರ್ಮನ್ ಬಹು ಕೌಶಲ ಅಭಿವೃದ್ಧಿ ಕೇಂದ್ರ ಸೊಸೈಟಿಯು- ೧೧,೫೭೫ ಅಭ್ಯರ್ಥಿಗಳಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಕೋರ್ಸ್‌ಗಳಲ್ಲಿ ತರಬೇತಿ ನೀಡಿದ್ದು, ೭೧೧ ಅಭ್ಯರ್ಥಿಗಳಿಗೆ ಉದ್ಯೋಗ ನಿಯುಕ್ತಿಗೊಳಿಸಲಾಗಿದೆ. ೧೮,೭೮೮ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ೮೮೮ ಫಲಾನುಭವಿಗಳು ಸ್ವಂತ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳು ೨೩,೭೧೫ ಅಭ್ಯರ್ಥಿಗಳಿಗೆ ದೀರ್ಘಾವಧಿ ಮತ್ತು ಅಲ್ಪಾವಧಿ ತರಬೇತಿಗಳನ್ನು ನೀಡಿವೆ. ೩,೧೭೧ ಅಭ್ಯರ್ಥಿಗಳು ಉದ್ಯೋಗಕ್ಕೆ ನಿಯುಕ್ತರಾಗಿದ್ದಾರೆ.

ಆಂದೋಲನ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಉದ್ದೇಶವೇನು?

ಶರಣ ಪ್ರಕಾಶ್ ಪಾಟೀಲ್: ರಾಜ್ಯಾದ್ಯಂತ ೧,೨೮,೯೨೬ ಸ್ವಸಹಾಯ ಗುಂಪುಗಳನ್ನು ಎನ್‌ಆರ್‌ಎಲ್‌ಎಂ ಅಡಿಯಲ್ಲಿ ರಚಿಸಲಾಗಿದೆ. ರಾಜ್ಯದಲ್ಲಿ ೫೧,೯೫೭ ಅರ್ಹ ಸ್ವ-ಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ, ಜೀವನೋಪಾಯ ಮತ್ತು ಇತರ ಆದಾಯ ಉತ್ಪಾದಿಸುವ ಚಟುವಟಿಕೆಗಳಿಗಾಗಿ ೭೨೧.೩೬ ಕೋಟಿ ರೂ. ಸಮುದಾಯ ಬಂಡವಾಳ ನಿಧಿಯನ್ನು ಒದಗಿಸಲಾಗಿದೆ. ರಾಜ್ಯದಲ್ಲಿನ ಅರ್ಹ ೪,೧೧೬ ಸ್ವ-ಸಹಾಯ ಗುಂಪುಗಳಿಗೆ ಸ್ವ-ಉದ್ಯೋಗ, ಆರ್ಥಿಕ, ಜೀವನೋಪಾಯ ಚಟುವಟಿಕೆಗಳು ಮತ್ತು ಇತರ ಆದಾಯ ಉತ್ಪಾದಿಸುವ ಚಟುವಟಿಕೆ ಗಳಿಗಾಗಿ ೮.೭೬ ಕೋಟಿ ರೂ. ಮೊತ್ತವನ್ನು ಆವರ್ತಕ ನಿಧಿಯಾಗಿ ಒದಗಿಸಲಾಗಿದೆ.

Tags:
error: Content is protected !!