Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ವರ್ಷಾಂತ್ಯ: ಗರಿಗೆದರದ ಮೈಸೂರು ಪ್ರವಾಸೋದ್ಯಮ

ಗಿರೀಶ್ ಹುಣಸೂರು

ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು

ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ದಿನಗಣನೆ ಆರಂಭವಾಗಿದೆ. ವರ್ಷಾಂತ್ಯದ ಡಿಸೆಂಬರ್ ತಿಂಗಳ ಹತ್ತು ದಿನಗಳು ಕಳೆದಿದ್ದು, ಕ್ರಿಸ್‌ಮಸ್‌ಗೆ ಇನ್ನು ಕೇವಲ ೧೫ ದಿನಗಳಷ್ಟೇ ಉಳಿದಿವೆ.

ಈ ಮಧ್ಯೆ ವಾರಾಂತ್ಯದ ರಜೆ, ಶಾಲಾ ಪ್ರವಾಸ, ಕ್ರಿಸ್ ಮಸ್ ರಜೆ, ವರ್ಷಾಂತ್ಯದ ರಜೆ, ಹೊಸ ವರ್ಷವನ್ನುಅರಮನೆಗಳ ನಗರಿ ಮೈಸೂರಿನಲ್ಲಿ ಸ್ವಾಗತಿಸಲ ಸ್ನೇಹಿತರೊಟ್ಟಿಗೆ ರಜೆಯನ್ನು ಜಾಲಿಯಾಗಿ ಕಳೆಯುವ ನಿಟ್ಟಿನಲ್ಲಿ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡಿದ್ದು, ದಸರಾ ಬಳಿಕ ಮೈಸೂರಿನಲ್ಲಿ ಮತ್ತೆ ಪ್ರವಾಸಿಗರ ದಂಡು ಕಂಡುಬರುತ್ತಿದೆ. ಆದರೆ, ಮೈಸೂರಿಗೆ ಬರುವ ಪ್ರವಾಸಿಗರು ರಾತ್ರಿ ವೇಳೆಗೆ ವಾಪಸ್ಸಾಗುತ್ತಿರುವುದರಿಂದ ಇಲ್ಲಿನ ಪ್ರವಾಸೋದ್ಯಮ ಗರಬಡಿದಂತಾಗಿದೆ.

ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಮೈಸೂರು. ಚಾಮುಂಡಿಬೆಟ್ಟ, ಅಂಬಾವಿಲಾಸ ಅರಮನೆ, ಮೃಗಾಲಯ, ಕಾರಂಜಿ ಕೆರೆ, ದಸರಾ ವಸ್ತು ಪ್ರದರ್ಶನ, ಕೆಆರ್‌ಎಸ್ ಬೃಂದಾವನ, ಸಂತ ಫಿಲೋಮಿನಾ ಚರ್ಚ್ ಪ್ರವಾಸಿಗರ ನೆಚ್ಚಿನ ತಾಣಗಳೆನಿಸಿವೆ.

ಕೇರಳದ ವಯನಾಡು, ಊಟಿ, ಕೊಡಗು, ಚಿಕ್ಕಮಗಳೂರು ಕಡೆಗೆ ಪ್ರವಾಸ ಹೊರಡುವವರು ದಿನದ ಮಟ್ಟಿಗೆ ಮೈಸೂರು ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಮುಂದುವರಿಯುವವರೇ ಹೆಚ್ಚು. ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆ ಮುಗಿಸಿದ ಬಳಿಕ ತಲಕಾಡು, ಸೋಮನಾಥ ದೇವಸ್ಥಾನ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ, ಮಲೆ ಮಹದೇಶ್ವರ ಬೆಟ್ಟ, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಸ್ಥಾನ, ನಿಮಿಷಾಂಬ ದೇವಸ್ಥಾನ, ಟಿಪ್ಪುವಿನ ಕೋಟೆ, ಬೇಸಿಗೆ ಅರಮನೆ,ಕಾವೇರಿ ನದಿ ತಟ, ರಂಗನತಿಟ್ಟು ಪಕ್ಷಿಧಾಮ, ಬೈಲಕುಪ್ಪೆಯ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿನ ಗೋಲ್ಡನ್ ಟೆಂಪಲ್ ವೀಕ್ಷಿಸಿದ ಬಳಿಕ ಮುಂದಿನ ಪ್ರವಾಸಿತಾಣಗಳ ಕಡೆಗೆ ಹೊರಟುಬಿಡುತ್ತಾರೆ.

‘ಶಕ್ತಿ’ಯ ಪಾಲು ಹೆಚ್ಚು: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರವಾಸ ಕಲ್ಪಿಸಿರುವುದರಿಂದ ರಜಾ ದಿನಗಳಲ್ಲಿ ಪ್ರಮುಖವಾಗಿ ಯಾತ್ರಾ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು ಮಹಿಳೆಯರು, ಮಕ್ಕಳಿಂದ ತುಂಬಿ ತುಳುಕುತ್ತಿವೆ. ಇದರಿಂದಾಗಿ ಸರ್ಕಾರಕ್ಕೆ ಹೆಚ್ಚಿನ ಆದಾಯವೂ ಹರಿದುಬರುತ್ತಿದೆ. ಇನ್ನೊಂದು ವಾರ ಕಳೆದ ನಂತರ ಖಾಸಗಿ ಶಾಲೆಗಳು ಕ್ರಿಸ್ ಮಸ್ ರಜೆ ನೀಡುವ ಜತೆಗೆ ಸಾಲು ಸಾಲು ರಜೆಗಳು ಬರುವುದರಿಂದ ದೇಶದ ನಾನಾ ಭಾಗಗಳಿಂದ ಹಾಗೂ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ.

ಇದರಿಂದ ಈ ಬಾರಿ ಕ್ರಿಸ್‌ಮಸ್ ಹಾಗೂ ವರ್ಷಾಂತ್ಯ, ಹೊಸ ವರ್ಷಾಚರಣೆಯ ಸಂಭ್ರಮ ಇಮ್ಮಡಿಗೊಳ್ಳಲಿದೆ. ಜತೆಗೆ ಮೈಸೂರು ಅರಮನೆ ಮಂಡಳಿ ವತಿಯಿಂದ ವರ್ಷಾಂತ್ಯದಲ್ಲಿ ಅರಮನೆ ಆವರಣದಲ್ಲಿ ಆಯೋಜಿಸುವ ಪುಷ್ಪ ಪ್ರದರ್ಶನ ಪ್ರವಾಸಿಗರು ಮಾತ್ರವಲ್ಲದೇ ಸ್ಥಳೀಯರನ್ನೂ ಸೆಳೆಯಲಿದೆ. ದಸರಾ ಸಂದರ್ಭವನ್ನು ಹೊರತುಪಡಿಸಿದರೆ ಡಿಸೆಂಬರ್ -ಜನವರಿ ತಿಂಗಳುಗಳಲ್ಲಿ ಮೈಸೂರಿನ ಪ್ರವಾಸೋದ್ಯಮ ಗರಿಗೆದರಲಿದೆ.

ಪ್ರವಾಸೋದ್ಯಮವನ್ನೇ ನಂಬಿ ಜೀವನ ಸಾಗಿಸುವ ಪ್ರವಾಸಿ ಟ್ಯಾಕ್ಸಿ, ಆಟೋ ರಿಕ್ಷಾ ಚಾಲಕರು, ಹೋಟೆಲ್‌ಗಳು, ವಸತಿ ಗೃಹಗಳು, ಚಿತ್ರಮಂದಿರಗಳು, ಮಾಲ್‌ಗಳು, ಅಂಗಡಿ ಮುಂಗಟ್ಟುಗಳು, ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ಕುದುರಲಿದೆ. ಹೀಗಾಗಿ ಮೈಸೂರಿನ ಈ ಉದ್ಯಮಗಳವರು ದಸರಾ, ಕ್ರಿಸ್ ಮಸ್, ವರ್ಷಾಂತ್ಯ, ಹೊಸ ವರ್ಷಾಚರಣೆಯ ದಿನಗಳನ್ನು ಎದುರು ನೋಡುವುದು ಸಾಮಾನ್ಯವಾಗಿದೆ. ಆದರೆ, ಕೆಲ ತಿಂಗಳುಗಳಿಂದ ಬಂಡೀಪುರ-ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿಂದ ಹುಲಿಗಳು ಕಾಡಂಚಿನ ಪ್ರದೇಶಗಳಿಗೆ ಲಗ್ಗೆಯಿಟ್ಟು, ಜನ-ಜಾನುವಾರುಗಳನ್ನು ಬಲಿ ಪಡೆದು ಆತಂಕ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿರುವುದರ ಜತೆಗೆ ಸರ್ಕಾರ ಸ-ರಿಯನ್ನು ರದ್ದು ಮಾಡಿರುವುದರಿಂದ ಪರಿಸರ ಪ್ರವಾಸೋದ್ಯಮ ತಿಂಗಳುಗಳಿಂದ ಸ್ತಬ್ದವಾಗಿದೆ.

ಹೀಗಾಗಿ ರಜೆಯ ಸಂದರ್ಭದಲ್ಲಿ ಅರಣ್ಯ, ವನ್ಯಜೀವಿಗಳನ್ನು ವೀಕ್ಷಿಸಲು ಕಾತರರಾಗಿರುವವರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ. ಇದು ಒಂದೆಡೆಯಾದರೆ, ವನ್ಯಜೀವಿ ಸ-ರಿ ಸ್ಥಗಿತಗೊಳಿಸಿರುವುದರಿಂದ ಈ ಭಾಗದ ಪರಿಸರ ಪ್ರವಾಸೋದ್ಯಮ ತಿಂಗಳುಗಳಿಂದ ಕಳಾಹೀನವಾಗಿದೆ.

ಬುಕ್ ಆಗದ ವಸತಿಗೃಹಗಳು: ವರ್ಷಾಂತ್ಯ, ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದರೂ ಮೈಸೂರಿನಲ್ಲಿರುವ ತಾರಾ ಹೋಟೆಲ್‌ಗಳು ಸೇರಿದಂತೆ ಸುಮಾರು ೪೫೦ ಹೋಟೆಲ್‌ಗಳಲ್ಲಿನ ೧೦,೫೦೦ ರೂಮ್‌ಗಳು ಹಾಗೂ ವಸತಿಗೃಹಗಳಲ್ಲಿ ರೂಮ್‌ಗಳನ್ನು ಕಾದಿರಿಸಲು ಈ ವರ್ಷ ಅಂತಹ ವಿಚಾರಣೆಯೂ ಆಗುತ್ತಿಲ್ಲ. ಬುಕ್ಕಿಂಗ್ ಕೂಡ ಈವರೆಗೆ ಆಗಿಲ್ಲ. ಅಷ್ಟಕ್ಕೂ ಮೈಸೂರಿನಲ್ಲಿ ಉಳಿದುಕೊಳ್ಳುವವರಿಗಿಂತ ಒಂದು ದಿನದ ಪ್ರವಾಸ ಮುಗಿಸಿ ಹೊರಡುವವರೇ ಹೆಚ್ಚು ಎಂದು ಅಳಲು ತೋಡಿಕೊಳ್ಳುತ್ತಾರೆ ಹೋಟೆಲ್ ಉದ್ಯಮಿಗಳು. ಡಿಸೆಂಬರ್ ೨೦ರ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಮೈಸೂರಿನ ಪ್ರವಾಸಿ ತಾಣಗಳು, ರಸ್ತೆಗಳಲ್ಲಿ ಜನದಟ್ಟಣೆ ಸಾಮಾನ್ಯ.

ವರ್ಷಾಂತ್ಯ-ಹೊಸ ವರ್ಷಾಚರಣೆಗೆ ಮೈಸೂರನ್ನು ಆಯ್ದುಕೊಂಡ ದೇಶ-ವಿದೇಶಗಳ ಪ್ರವಾಸಿಗರು ಈ ವಾರಾಂತ್ಯಕ್ಕೆ ಮೈಸೂರಿನತ್ತ ಮುಖ ಮಾಡಲಿರುವುದರಿಂದ ಮುಂದಿನ ಹದಿನೈದು ದಿನಗಳ ಕಾಲ ಪ್ರವಾಸಿಗರಿಂದ ತುಂಬಿ ತುಳುಕುವುದರಲ್ಲಿ ಎರಡು ಮಾತಿಲ್ಲ.

ಪ್ರವಾಸವೇ ತ್ರಾಸ: ದೇಶ-ವಿದೇಶಗಳಿಂದ ಮೈಸೂರಿಗೆ ಬರುವ ಪ್ರವಾಸಿಗರು ಬಯಸುವ ವಿಮಾನಯಾನ ಸದ್ಯ ಸಮರ್ಪಕವಾಗಿಲ್ಲ. ಇಂಡಿಗೋ ಸಂಸ್ಥೆಯ ಎರಡು ವಿಮಾನಗಳಷ್ಟೇ ಹೈದರಾಬಾದ್ -ಮೈಸೂರು, ಚೆನ್ನೈ-ಮೈಸೂರು ನಡುವೆ ಸಂಚರಿಸುತ್ತಿವೆ.ಹೀಗಾಗಿ ಹೆಚ್ಚಿನ ಪ್ರವಾಸಿಗರು ರೈಲು,ಪ್ರವಾಸಿ ಟ್ಯಾಕ್ಸಿಗಳನ್ನೇ ಆಶ್ರಯಿಸಬೇಕಿದೆ”

” ವರ್ಷಾಂತ್ಯದ ಮುನ್ನ ೧೫ ದಿನ, ಹೊಸ ವರ್ಷಾರಂಭದ ನಂತರ ೧೫ದಿನಗಳ ಕಾಲ ಮೈಸೂರಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿದೇಶಿ ಪ್ರವಾಸಿಗರು ಅರಮನೆ, ಜಗನ್ಮೋಹನ ಕಲಾ ಗ್ಯಾಲರಿ, ಸೋಮನಾಥಪುರ ದೇವಾಲಯಕ್ಕೆ ಹೆಚ್ಚು ಭೇಟಿ ನೀಡುತ್ತಾರೆ. ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್‌ನಿಂದ ನಗರವನ್ನು ನೋಡಲು ಇಷ್ಟಪಡುತ್ತಾರೆ.”

ಟಿ.ಕೆ.ಸುಂದರ್ ರಾಜು, ಪ್ರವಾಸಿ ಮಾರ್ಗದರ್ಶಿ, ಪ್ರವಾಸೋದ್ಯಮ ಇಲಾಖೆ 

” ಸಫಾರಿ ಸ್ಥಗಿತಗೊಂಡಿರುವುದರಿಂದ ಮೈಸೂರು ಹಾಗೂ ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸಕ್ಕೆ ಬರುವವರ ಸಂಖ್ಯೆ ಖಂಡಿತವಾಗಿಯೂ ಕಡಿಮೆಯಾಗಿದೆ. ಸುಮಾರು ಜನರು ಒಂದೆರಡು ದಿನಗಳು ಇಲ್ಲಿ ಉಳಿದು ನಂತರ ಸಫಾರಿಗೆ ಹೋಗುತ್ತಿದ್ದರು. ಆದರೆ ಈಗ ಸಫಾರಿ ಇಲ್ಲದ ಕಾರಣ ಜನರು ಕಡಿಮೆಯಾಗಿದ್ದಾರೆ. ವಿಶೇಷವಾಗಿ ವಿದೇಶಿ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆಯಾಗಿದೆ. ಇನ್ನೂ ಡಿಸೆಂಬರ್ ಎರಡನೇ ವಾರದವರೆಗೂ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅಷ್ಟರಲ್ಲಿ ಸರ್ಕಾರ ಸಫಾರಿ ಮೇಲಿನ ನಿರ್ಬಂಧ ಹಿಂಪಡೆದರೆ ಪ್ರವಾಸೋದ್ಯಮ ಚೇತರಿಸಿಕೊಳ್ಳಬಹುದು.”

ಬಿ.ಎಸ್.ಪ್ರಶಾಂತ್, ಅಧ್ಯಕ್ಷರು , ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್

” ವನ್ಯಜೀವಿ ಸಫಾರಿ ರದ್ದಾಗಿರುವುದು, ಹೆಚ್ಚಿನ ವಿಮಾನಗಳ ಸಂಚಾರ ಇಲ್ಲದಿರುವುದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಹೋಟೆಲ್, ವಸತಿ ಗೃಹಗಳಲ್ಲಿ ರೂಮ್‌ಗಳ ಬುಕ್ಕಿಂಗ್ ಇನ್ನಷ್ಟೇ ಆಗಬೇಕಿದೆ. ಡಿ.೨೦ರ ನಂತರ ರೂಮ್‌ಗಳ ಬುಕ್ಕಿಂಗ್ ಆಗಬಹುದು. ?”

ಸಿ.ನಾರಾಯಣಗೌಡ, ಅಧ್ಯಕ್ಷರು, ಹೋಟೆಲ್ ಮಾಲೀಕರ ಸಂಘ,ಮೈಸೂರು

Tags:
error: Content is protected !!