Mysore
29
scattered clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಶ್ರಮಜೀವಿಗಳ ಬದುಕು ಹಸನಾಗಿಸಲು ಶ್ರಮ

ಕೆ.ಬಿ.ರಮೇಶನಾಯಕ

‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಭರವಸೆ

ಮೈಸೂರು: ಸ್ವಾತಂತ್ರ್ಯ ಪೂರ್ವದಿಂದಲೂ ಶ್ರಮಜೀವಿ ವರ್ಗ ಎಂದೇ ಕರೆಯಿಸಿಕೊಂಡಿರುವ ಬೋವಿ ಸಮುದಾಯ ಇಂದಿಗೂ ಮುಖ್ಯವಾಹಿನಿಗೆ ಬರಲು ಹರಸಾಹಸ ಮಾಡುತ್ತಿದೆ. ಈ ಸಮುದಾಯವು ಆರ್ಥಿಕವಾಗಿ ಹಿಂದುಳಿದಿರುವುದನ್ನು ಗಮನಿಸಿ ಸರ್ಕಾರ ಕರ್ನಾಟಕ ಬೋವಿ ಅಭಿ ವೃದ್ಧಿ ನಿಗಮ ಸ್ಥಾಪಿಸಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸವಲತ್ತುಗಳನ್ನು ಪಡೆಯಲು ಪರದಾಡುತ್ತಿದ್ದ ಬೋವಿ ಸಮುದಾಯಕ್ಕೆ ಪ್ರತ್ಯೇಕವಾಗಿ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದ ಮೇಲೆ ಸಾಕಷ್ಟು ಸುಧಾರಣೆ ಗಳನ್ನು ಕಂಡಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಎಂ.ರಾಮಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಆಂದೋಲನ: ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಎಂ.ರಾಮಪ್ಪ: ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಂತ ಹಂತವಾಗಿ ಬೆಳೆದಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ನನ್ನನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ ಮೇಲೆ ಪಕ್ಷದ ಸಂಘಟನೆಗೆ ಕೆಲಸ ಮಾಡಿದ್ದೇನೆ. ಬೋವಿ ಸಮುದಾಯ ಹೆಚ್ಚಿರುವ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಂಘಟನೆ ಮಾಡಿ ಕಾಂಗ್ರೆಸ್ ಪರವಾಗಿ ಬೆಂಬಲಕ್ಕೆ ನಿಲ್ಲುವಂತೆ ಮಾಡಿದ್ದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಗುರುತಿಸಿ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪಕ್ಷ ಮೊದಲಿನಿಂದಲೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಗುರುತಿಸಿ ಪಕ್ಷ ಸಂಘಟನೆಗೆ ಅವಕಾಶ ಮಾಡಿ ಕೊಡುತ್ತಿತ್ತು. ಈಗ ಸಮಾಜದ ಕೆಲಸ ಮಾಡಲು ಜವಾಬ್ದಾರಿ ನೀಡಿರುವುದು ಖುಷಿಯಾಗಿದೆ.

ಆಂದೋಲನ: ನಿಗಮದ ಸೌಲಭ್ಯಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ಕಾರ್ಯಕ್ರಮ ರೂಪಿಸುತ್ತೀರ?

ಎಂ.ರಾಮಪ್ಪ: ಬೋವಿ ಸಮುದಾಯದ ಜನರು ಅನಕ್ಷರಸ್ಥರು. ಆದರೂ ಅವರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಸುವಷ್ಟು ಸಾಮರ್ಥ್ಯವಿದೆ. ಪ್ರತಿಯೊಂದು ಜಿಲ್ಲೆಗಳಿಗೂ ಪ್ರವಾಸ ಮಾಡಿ ನಿಗಮದ ಸೌಲಭ್ಯಗಳು, ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಿ -ಲಾನುಭವಿಗಳ ಮನೆಗೆ ಸೌಲಭ್ಯ ತಲುಪುವಂತೆ ಮಾಡುತ್ತೇನೆ. ಸರ್ಕಾರದ ಕಾರ್ಯಕ್ರಮಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಸಂಕಲ್ಪ ತೊಟ್ಟಿದ್ದೇನೆ. ನಿಗಮದಿಂದ ರೂಪಿಸಿರುವ ಯೋಜನೆಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗುವುದು. ಈತನಕ ಎಷ್ಟು ಜನರಿಗೆ ಸೌಲಭ್ಯ ತಲುಪಿಸಲಾಗಿದೆ, ಉಳಿದವರಿಗೆ ಯಾವ ರೀತಿಯಲ್ಲಿ ತಲುಪಿಸಬೇಕು ಎಂಬುದರ ಕುರಿತು ಚಿಂತನೆ ನಡೆಸಿ ಅದಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು.

ಆಂದೋಲನ: ಶ್ರಮಿಕ ಜೀವಿಗಳ ಬದುಕು ಹಸನಾಗಿಸಲು ನಿಮ್ಮ ಪ್ರಯತ್ನ ಹೇಗಿರುತ್ತದೆ?

ಎಂ.ರಾಮಪ್ಪ: ಬೋವಿ ಸಮುದಾಯದವರು ತುಂಬಾ ಬಡವರು. ನಾನು ಕೂಡ ಬಡತನದಿಂದ ಬಂದವನು. ಬಡತನ ಏನು, ಸಮಸ್ಯೆಗಳು ಏನು ಎಂಬುದನ್ನು ನೋಡಿದ್ದೇನೆ. ಬೋವಿ ಸಮುದಾಯದ ವ್ಯಕ್ತಿಗಳು ಶ್ರಮಜೀವಿಗಳು. ಹಾಗಾಗಿ ಬದಲಾದ ಕಾಲಕ್ಕೆ ತಕ್ಕಂತೆ ಅವರಿಗೆ ಅನುಕೂಲ ಮಾಡಿಕೊಡಬೇಕಿದೆ. ಸಮಸ್ಯೆಗಳನ್ನು ನಿವಾರಿಸಲು ಮೊದಲ ಆದ್ಯತೆ ನೀಡಿ ಆ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಸಮುದಾಯದ ಸಚಿವರು, ಶಾಸಕರು, ಮಾಜಿ ಸಚಿವರು, ವಿಶೇಷವಾಗಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ.

ಆಂದೋಲನ: ನಿಗಮದಲ್ಲಿ ಯಾವ್ಯಾವ ಯೋಜನೆಗಳು ಇವೆ?

ಎಂ.ರಾಮಪ್ಪ: ನಿಗಮದಲ್ಲಿ ಒಂದು ಲಕ್ಷ ಮಂದಿಗೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡುವ ವ್ಯವಸ್ಥೆ, ಸಾರಥಿ ಯೋಜನೆಯಡಿ ಕಾರುಗಳನ್ನು ಖರೀದಿಸಲು ಅವಕಾಶವಿದೆ. ನಿರಾವರಿ ವ್ಯವಸ್ಥೆಗೆ ಗಂಗಾಕಲ್ಯಾಣ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗುತ್ತದೆ. ಆಯಾಯ ಕ್ಷೇತ್ರದ ಶಾಸಕರ ಶಿಫಾರಸ್ಸು ಸೇರಿದಂತೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳಿಗೆ ಅವಕಾಶ ನೀಡುವುದಿಲ್ಲ. ಯಾವುದೇ ಸೌಲಭ್ಯವಾದರೂ ಇಲಾಖೆ ಅಧಿಕಾರಿಗಳು ಫಲಾನುಭವಿಯ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲು ನಿರ್ದೇಶನ ನೀಡಲಾಗುವುದು

ಆಂದೋಲನ: ಬೋವಿ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಹೆಚ್ಚಿಸಲು ನಿಮ್ಮ ಅವಧಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತೀರಿ?

ಎಂ.ರಾಮಪ್ಪ: ಈಗಷ್ಟೆ ನಿಗಮದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮುಂದಿನ ವಾರ ಅಧಿಕಾರಿಗಳ ಸಭೆ ಕರೆದು ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳುತ್ತೇನೆ. ಸಮಾಜದ ಜನಸಂಖ್ಯೆಗೆ ತಕ್ಕಂತೆ ಕಾರ್ಯಕ್ರಮ ರೂಪಿಸಲು ಅನುದಾನದ ಅಗತ್ಯವಿದ್ದರೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ನಿಗಮವು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕಾರಣ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಅನುದಾನ ಹೆಚ್ಚಳಕ್ಕೆ ಮನವಿ ಮಾಡುವೆ. ಮುಖ್ಯಮಂತ್ರಿಗಳು ದಲಿತರು, ಹಿಂದುಳಿದ ವರ್ಗಗಳು, ಶೋಷಿತ ಸಮುದಾಯಗಳ ಪರ ಕಾಳಜಿ ಹೊಂದಿದ್ದಾರೆ. ಅಧಿಕಾರಿಗಳ ಸಭೆ ಕರೆದು ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಸಿಎಂ ಅವರನ್ನು ಭೇಟಿ ಮಾಡಿ ಪ್ರಸ್ತಾವನೆ ಇಡುವೆ.

ಆಂದೋಲನ: ಏನಾದರೂ ಹೊಸ ಯೋಜನೆ ತರುವುದಕ್ಕೆ ಚಿಂತನೆ ಮಾಡುವಿರಾ?

ಎಂ.ರಾಮಪ್ಪ: ನಿಗಮದಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗುವುದಿಲ್ಲ. ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರ ಮನೆಗೂ ತಲುಪಿಸುವುದಕ್ಕೆ ಆದ್ಯತೆ ನೀಡಲಾಗುವುದು. ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಯಲು ಹೆಚ್ಚು ಬೇಡಿಕೆ ಬರುವ ಬಗ್ಗೆ ಗೊತ್ತಿದೆ. ಸರ್ಕಾರವೇ ಹೊಸ ಯೋಜನೆಗಳನ್ನು ರೂಪಿಸಿ ಘೋಷಣೆ ಮಾಡಿದರೆ ನಿಗಮಗಳು ಅದನ್ನು ಅನುಷ್ಠಾನಕ್ಕೆ ತರುವ ಹೊಣೆ ಹೊರುವ ಕೆಲಸ ಮಾಡುತ್ತದೆ ಎನ್ನುವ ವಿಶ್ವಾಸವಿದೆ.

Tags:
error: Content is protected !!