Mysore
21
clear sky

Social Media

ಬುಧವಾರ, 21 ಜನವರಿ 2026
Light
Dark

ಸಫಾರಿ ಬಂದ್‌ನಿಂದ ಸಂಕಷ್ಟಕ್ಕೀಡಾದ ಕಾರ್ಮಿಕರು

ಸಫಾರಿ ಬೇಕೋ-ಬೇಡವೋ ಎಂಬ ಗೊಂದಲದಲ್ಲಿ ಸರ್ಕಾರ

ವರ್ಷಾಂತ್ಯಕ್ಕಾದರೂ ಸಫಾರಿ ಪುನಾರಂಭಕ್ಕೆ ಸ್ಥಳೀಯರ ಒತ್ತಾಯ

ಮೈಸೂರು: ವನ್ಯಜೀವಿ-ಮಾನವ ಸಂಘರ್ಷ ಮಿತಿ ಮೀರಿದ ಹಿನ್ನೆಲೆಯಲ್ಲಿ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿ ಬಂದ್ ಆಗಿದ್ದು, ಇದರಿಂದ ಸಾವಿರಾರು ಕಾರ್ಮಿಕರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ಹೌದು, ಅರಣ್ಯ ಪ್ರದೇಶದ ಅಂಚಿನಲ್ಲಿ ಅನೇಕ ಹೋಮ್‌ಸ್ಟೇಗಳು ಹಾಗೂ ರೆಸಾರ್ಟ್‌ಗಳು ಇವೆ. ಇವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಕಾರ್ಮಿಕರು ಇದೀಗ ಕೆಲಸವಿಲ್ಲದೇ ಮನೆ ಸೇರಿದ್ದಾರೆ. ಇವರನ್ನೇ ನಂಬಿಕೊಂಡಿರುವ ಕುಟುಂಬಗಳು ಬೇರೆ ದುಡಿಮೆ ಇಲ್ಲದೆ ಕೈಕಟ್ಟಿಕುಳಿತಿವೆ.

ಇಲ್ಲಿನ ಹೋಮ್‌ಸ್ಟೇಗಳು ಹಾಗೂ ರೆಸಾರ್ಟ್‌ಗಳು ಸಫಾರಿಗೆ ಬರುವ ಪ್ರವಾಸಿಗರನ್ನೇ ಅವಲಂಬಿಸಿದ್ದು, ಇದರಿಂದ ಸಾವಿರಾರು ಜನರಿಗೆ ಉದ್ಯೋಗ ದೊರಕುತ್ತದೆ. ಬಂಡೀಪುರದಲ್ಲಿ ೨೦೨೨-೨೩ನೇ ಸಾಲಿನಲ್ಲಿ ೧,೨೩,೯೫೮, ೨೦೨೩-೨೪ನೇ ಸಾಲಿನಲ್ಲಿ ೧,೮೦,೪೪೯ ಹಾಗೂ ೨೦೨೪-೨೫ನೇ ಸಾಲಿನಲ್ಲಿ ೧,೮೯,೬೧೫ ಪ್ರವಾಸಿಗರು ಸಫಾರಿಗೆ ಭೇಟಿ ನೀಡಿದ್ದಾರೆ.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಹೋಮ್‌ಸ್ಟೇಗಳು ಹಾಗೂ ರೆಸಾರ್ಟ್‌ಗಳಲ್ಲಿ ಉಳಿಕೊಳ್ಳುವುದರಿಂದ ಭರ್ತಿಯಾಗುತ್ತಿದ್ದವು. ಇದೀಗ ಸ-ರಿ ಬಂದ್ ಮಾಡಿರುವುದರಿಂದ ಉದ್ಯೋಗ ಕಳೆದುಕೊಂಡಂತಾಗಿದೆ.

ಬಂಡೀಪುರದಲ್ಲಿ ಪ್ರತಿವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪ್ರಾಣಿಗಳು ಅರಣ್ಯದಿಂದ ಹೊರಗೆ ಬಂದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂಬ ವಾದ ಒಂದೆಡೆಯಾದರೆ, ಕಾಡಂಚಿನಲ್ಲಿ ಅಕ್ರಮ ಹೋಮ್‌ಸ್ಟೇಗಳು ಮತ್ತು ರೆಸಾರ್ಟ್‌ಗಳ ನಿರ್ಮಾಣವೂ ಇದಕ್ಕೆ ಕಾರಣ ಎಂಬುದು ಪರಿಸರ ಪ್ರೇಮಿಗಳ ವಾದ. ಈ ಕಾರಣ ಗಳನ್ನು ನೀಡಿ ಸರ್ಕಾರ ಸಫಾರಿ ಬಂದ್ ಮಾಡಿದೆ ಎಂಬುದು ಇಲ್ಲಿನ ಜನರ ವಾದ. ಆದರೆ, ಇದರ ಪರಿಣಾಮ ಮಾತ್ರ ಸ್ಥಳೀಯರ ಮೇಲೆ ಬೀರಿದೆ.

ಇನ್ನು, ವರ್ಷಾಂತ್ಯಕ್ಕೆ ಸಾಲು ಸಾಲು ರಜೆ ಬರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಈಗ ಲಾದರೂ ಸಫಾರಿ ಆರಂಭಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

” ಸಫಾರಿ ಸ್ಥಗಿತವಾಗಿರುವುದರಿಂದ ಕಾರ್ಮಿಕರಿಗೆ ಸಮಸ್ಯೆ ಆಗಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದಿಂದ ರೈತರಿಗೂ ಜೀವ ಹಾನಿಯಾಗಿದೆ. ಹಾಗಾಗಿ, ಸಫಾರಿ ಬೇಕೋ, ಬೇಡವೋ ಎಂಬುದರ ಬಗ್ಗೆ ಸರ್ಕಾರ ಹಾಗೂ ಇಲಾಖೆಯ ಮೇಲಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ.”

ಪ್ರಭಾಕರನ್, ಡಿಸಿಎಫ್‌, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

” ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಿರುವುದರಿಂದ ಸಾವಿರಾರು ಜನರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ, ಸಫಾರಿಯಿಂದ ವನ್ಯಜೀವಿ-ಮಾನವ ಸಂಘರ್ಷದಿಂದ ರೈತ ಕುಟುಂಬಗಳಿಗೂ ಜೀವ ಹಾನಿಯಾಗಿದೆ. ಈ ಬಗ್ಗೆ ಸರ್ಕಾರ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಜೀವ ಹಾನಿಯಾದರೆ ಯಾರು ಹೊಣೆಯಾಗುತ್ತಾರೆ”

ಮಂಜು ಕಿರಣ್, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

” ಬಂಡೀಪುರ ಹಾಗೂ ನಾಗರಹೊಳೆಯ ರೆಸಾರ್ಟ್ ಮತ್ತು ಹೋಮ್‌ಸ್ಟೇಗಳಲ್ಲಿ ಸುಮಾರು ೫,೦೦೦ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಇದೇ ಕೆಲಸವನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಇದೀಗ ಬಂದ್ ಮಾಡಿರುವುದರಿಂದ ಆರ್ಥಿಕವಾಗಿ ತೊಂದರೆಯಾಗಿದೆ. ಆದ್ದರಿಂದ ಸಫಾರಿ ಪುನಾರಂಭ ಮಾಡಬೇಕು.”

ಎಸ್.ಸ್ವಾಮಿ, ಖಾಸಗಿ ರೆಸಾರ್ಟ್ ಕಾರ್ಮಿಕ

ಸಫಾರಿ ಪುನಾರಂಭಕ್ಕೆ ಒತ್ತಾಯ: 

ಪ್ರಸಿದ್ಧ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಬಂಡೀಪುರಕ್ಕೆ ಸಫಾರಿಗೆಂದು ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಸಫಾರಿಗೆ ಟಿಕೆಟ್ ಸಿಗದೆ ಅನೇಕರು ವಾಪಸ್ ಹೋಗಿರುವ ನಿದರ್ಶನಗಳೂ ಇವೆ. ಈಗ ಬಂದ್ ಮಾಡಿರುವುದರಿಂದ ರೆಸಾರ್ಟ್, ಹೋಮ್‌ಸ್ಟೇಗಳಿಗೆ ಹೊಡೆತ ಬಿದ್ದಿದೆ. ಅಲ್ಲದೇ, ಬಂಡೀಪುರಕ್ಕೆ ಹೊಂದಿಕೊಂಡಂತ್ತಿರುವ ಕೆಲವು ಗ್ರಾಮಗಳ ಜನರು ಕೃಷಿಯ ಜತೆಗೆ, ಪ್ರವಾಸೋದ್ಯಮವನ್ನೂ ನಂಬಿದ್ದಾರೆ. ಸ್ಥಳೀಯವಾಗಿ ಬೆಳೆದ ಹಣ್ಣು, ತರಕಾರಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಪ್ರವಾಸಿಗಳು ಖರೀದಿಸುತ್ತಿದ್ದರಿಂದ ಆರ್ಥಿಕವಾಗಿ ಲಾಭವಿತ್ತು. ಈಗ ಸಫಾರಿ ಬಂದ್ ಆಗಿರುವುದರಿಂದ ಈ ಭಾಗದ ಜನರಿಗೆ ನಷ್ಟ ಉಂಟಾಗಿದೆ. ಆದ್ದರಿಂದ ಸಫಾರಿ ಪುನರಾರಂಭ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ.

Tags:
error: Content is protected !!