Mysore
26
haze

Social Media

ಬುಧವಾರ, 31 ಡಿಸೆಂಬರ್ 2025
Light
Dark

ನೀರಿನ ಕರ, ಆಸ್ತಿ ತೆರಿಗೆ ಬಾಕಿ ವಸೂಲಿಗೆ ‘ಸ್ತ್ರೀ ಶಕ್ತಿ ’

ಕೆ.ಬಿ.ರಮೇಶನಾಯಕ

೮ ಸಂಘಗಳಿಗೆ ವಸೂಲಿ ಜವಾಬ್ದಾರಿ

೬ ಸಂಘಗಳಿಗೆ ಪಾರ್ಕ್ ನಿರ್ವಹಣೆ ಹೊಣೆ

ಉದ್ಯಾನವನ ನಿರ್ವಹಣೆಯೂ ಮಹಿಳಾ ಸಂಘಗಳ ಮಡಿಲಿಗೆ

ಸ್ತ್ರೀ ಶಕ್ತಿ ಸಂಘಗಳಿಗೆ ಶೇ.೫ರಷ್ಟು ಕಮಿಷನ್

ಮೈಸೂರು: ನಗರದಲ್ಲಿ ಆದಾಯ ಸಂಪನ್ಮೂಲ ಕ್ರೋಡೀಕರಣಕ್ಕೆ ಹೊಸ ಹೊಸ ಮಾರ್ಗಗಳನ್ನು ಬಳಸುತ್ತಿರುವ ನಗರಪಾಲಿಕೆ ನೀರಿನ ಕರ ಮತ್ತು ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ನೂತನ ಪ್ರಯೋಗಕ್ಕೆ ಮುಂದಾಗಿದೆ.

ನೀರಿನ ಕರ ಹಾಗೂ ಆಸ್ತಿ ತೆರಿಗೆ ಬಾಕಿ ವಸೂಲಿಯ ಹೊಣೆಗಾರಿಕೆಯನ್ನು ಸ್ತ್ರೀ ಶಕ್ತಿ ಸಂಘಗಳಿಗೆ ವಹಿಸಲಾಗಿದೆ. ಗ್ರಾಹಕರು ಬಾಕಿ ಉಳಿಸಿಕೊಂಡಿರುವ ಶುಲ್ಕದ ಬಗ್ಗೆ ಮಾಹಿತಿ ನೀಡಿ, ವಸೂಲಿ ಕಾರ್ಯವನ್ನು ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಮಾಡಲಿದ್ದಾರೆ.

ನಗರದ ೯ ವಲಯ ಕಚೇರಿಗಳ ವ್ಯಾಪ್ತಿಯಲ್ಲಿರುವ ೬೫ ವಾರ್ಡ್‌ಗಳಲ್ಲಿ ಆಸ್ತಿ ತೆರಿಗೆಯೊಂದಿಗೆ ನೀರಿನ ಶುಲ್ಕ ವಸೂಲಿ ಮಾಡಲು ಎಂಟು ಸಂಘಗಳನ್ನು ಆಯ್ಕೆ ಮಾಡಲಾಗಿದೆ. ಎಂಟರ ಪೈಕಿ ಐದು ಸಂಘಗಳಿಗೆ ನೀರಿನ ತೆರಿಗೆ ಸಂಗ್ರಹಕ್ಕೆ, ಮೂರು ಸಂಘಗಳಿಗೆ ಆಸ್ತಿ ತೆರಿಗೆ ವಸೂಲಿ ಜವಾಬ್ದಾರಿಯನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ವಸೂಲಿ ಕಾರ್ಯ ಆರಂಭವಾಗಲಿದೆ.

ಮಹಾ ನಗರಪಾಲಿಕೆಯು ಪ್ರತಿ ವರ್ಷ ಆಸ್ತಿ ತೆರಿಗೆ ಸಂಗ್ರಹವಾಗಬೇಕು ಎಂಬ ಉದ್ದೇಶದಿಂದ ಆನ್‌ಲೈನ್ ಮೂಲಕ ತೆರಿಗೆ ಪಾವತಿಗೆ ವ್ಯವಸ್ಥೆ ಮಾಡಿದ್ದರೂ, ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ಹೀಗಾಗಿ ತೆರಿಗೆ ವಸೂಲಿಗೆ ಮಹಿಳಾ ಸ್ವ ಸಹಾಯ ಸಂಘಗಳ ನೆರವನ್ನು ಪಡೆಯಲು ನಿರ್ಧರಿಸಿದೆ. ಜತೆಗೆ ನೀರಿನ ತೆರಿಗೆ ವಸೂಲಿ ಜವಾಬ್ದಾರಿ ಯನ್ನು ಮಹಿಳಾ ಶಕ್ತಿಗೆ ಪಾಲಿಕೆ ನೀಡಿದೆ.

ಮಹಿಳೆಯರ ತಂಡ ಮನೆಮನೆಗೆ ಭೇಟಿ ನೀಡಿ ಕರ ಬಾಕಿ ಎಷ್ಟಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಕಲೆಹಾಕಿ, ಸಕಾಲದಲ್ಲಿ ಗ್ರಾಹಕರಿಂದ ಹಣ ವಸೂಲಿ ಮಾಡಿ ಪಾಲಿಕೆಗೆ ನೀಡಲಿದೆ.‘ಪಾಲಿಕೆ ವತಿಯಿಂದ ಅಮೃತ್ ೨.೦’ ಯೋಜನೆಯಡಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕ ವಸೂಲಿಗೆ ಡೇ-ನಲ್ಮ್ ಯೋಜನೆಯಡಿ ರಚಿಸಲಾದ ಮಹಿಳಾ ಸ್ವ-ಸಹಾಯ ಸಂಘಗಳು ಅರ್ಹವಾಗಿವೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಶೇ. ೫ರಷ್ಟು ಕಮಿಷನ್: ತೆರಿಗೆ ಮತ್ತು ನೀರಿನ ಶುಲ್ಕ ವಸೂಲಿ ಮಾಡಿಕೊಡುವ ಸಂಘಗಳಿಗೆ ಪಾಲಿಕೆ ಶೇ.೫ ರಷ್ಟು ಕಮಿಷನ್ ನೀಡಲಿದ್ದು, ಸಂಘದ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಗ್ರಾಹಕರು ಹಣವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಲು ಅವಕಾಶವಿದ್ದು, ಸಂಘಗಳ ಸದಸ್ಯರು ಪಾಲಿಕೆಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುವಂತೆ ಮಾಡಲಿದ್ದಾರೆ. ನಗದು ವ್ಯವಹಾರಕ್ಕೆ ಅವಕಾಶ ಕಲ್ಪಿಸದೇ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ.

ಉದ್ಯಾನ ನಿರ್ವಹಣೆ ಜವಾಬ್ದಾರಿ: ತೆರಿಗೆ ವಸೂಲಿ ಯೊಂದಿಗೆ ಉದ್ಯಾನ ನಿರ್ವಹಣೆ ಜವಾಬ್ದಾರಿಯನ್ನು ಸ್ತ್ರೀಸಂಘಗಳಿಗೆ ನೀಡಲಾಗಿದ್ದು, ಆರು ಸಂಘಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂಘಗಳಿಗೆ ವಾರ್ಷಿಕ ೨ರಿಂದ ೧೦ ಲಕ್ಷ ರೂ.ವರೆಗೆ ಹಣವನ್ನು ನಿಗದಿ ಪಡಿಸ ಲಾಗಿದ್ದು, ಅದನ್ನು ನೀಡುವ ಮೂಲಕ ಉದ್ಯಾನದ ಜವಾಬ್ದಾರಿಯನ್ನು ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗಿದೆ.

ಅನ್ನಪೂರ್ಣೇಶ್ವರಿ, ಲಕ್ಷ್ಮೀ, ಸರಸ್ವತಿ, ಸಮ್ಮತಿ, ಯಾ ಹಬೀಬ್, ಗುಲ್ಷನ್ ಮತ್ತು ನೂರ್ ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಉದ್ಯಾನ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ.

ನೀರಿನ ಶುಲ್ಕ ವಸೂಲಿ ಹೊಣೆಯ ಸಂಘಗಳು

* ಆಲನಹಳ್ಳಿಯ ಚಾಮುಂಡೇಶ್ವರಿ

* ವಿದ್ಯಾರಣ್ಯಪುರಂನ ದಾನೇಶ್ವರಿ

* ಸರಸ್ವತಿಪುರಂನ ಶರಧಿ

* ಜನತಾ ಬಡಾವಣೆಯ ಅಂಕಾಳಪರಮೇಶ್ವರಿ

* ಅಗ್ರಹಾರದ ಅರೋರ ಮಹಿಳಾ ಸ್ವ ಸಹಾಯ ಸಂಘ ಆಸ್ತಿ ತೆರಿಗೆ ವಸೂಲಿಗಾಗಿ ಸಂಘಗಳು

* ಅಜೀಜ್ ಸೇಠ್ ನಗರದ ಸ್ಛೂರ್ತಿ

* ರಾಜೀವ ನಗರದ ಸಂಜೀವಿನಿ

* ಕುವೆಂಪು ನಗರದ ಮಲ್ಲಿಗೆ

” ಮೈಸೂರಿನಲ್ಲಿ ಕಂದಾಯ ವಸೂಲಿ ಜವಾಬ್ದಾರಿಯನ್ನು ಕೆಲ ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗಿದ್ದು, ಸೂಕ್ತ ತರಬೇತಿ ನೀಡುವ ಮೂಲಕ ವಸೂಲಿ ಜವಾಬ್ದಾರಿ ನೀಡಲಾಗಿದೆ. ಶೀಘ್ರದಲ್ಲಿಯೇ ವಸೂಲಿ ಕಾರ್ಯ ನಡೆಸಲಿದ್ದಾರೆ.”

-ಜಿ.ಎಸ್.ಸೋಮಶೇಖರ್, ಉಪ ಆಯುಕ್ತರು, ನಗರಪಾಲಿಕೆ.

” ನಗರಪಾಲಿಕೆಯ ಆಸ್ತಿ ತೆರಿಗೆ ವಸೂಲಿ ಮಾಡುವ ಅವಕಾಶ ಸಿಕ್ಕಿರುವುದು ಸಂಘಕ್ಕೆ ಪರ್ಯಾಯ ಆದಾಯದ ಮೂಲವಾಗಿದೆ. ಇದರಿಂದ ಸಂಘದ ಸದಸ್ಯರಿಗೆ ಅನುಕೂಲವಾಗಲಿದೆ. ಜತೆಗೆ ನಮ್ಮ ಸಾರ್ವಜನಿಕ ಸಂಪರ್ಕ ಕೂಡ ಹೆಚ್ಚಾಗಲಿದೆ.”

-ರೇಷ್ಮಾ, ಅಧ್ಯಕ್ಷರು, ಸ್ಛೂರ್ತಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ.

Tags:
error: Content is protected !!