Mysore
22
overcast clouds

Social Media

ಬುಧವಾರ, 01 ಜುಲೈ 2026
Light
Dark

ಕೆರೆ ಕಟ್ಟೆ ಸಮೀಪದಲ್ಲಿ ವಾಮಾಚಾರ; ಜನರಲ್ಲಿ ಭೀತಿ

ಮಂಜು ಕೋಟೆ

ಸವ್ವೆ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಕೆರೆಯ ಬಳಿ ಮಾಟ-ಮಂತ್ರ; ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಆಗ್ರಹ

ಎಚ್.ಡಿ.ಕೋಟೆ: ತಾಲ್ಲೂಕಿನ ಕೆರೆಕಟ್ಟೆ ಸಮೀಪದಲ್ಲಿ ವಾಮಾಚಾರಗಳನ್ನು ನಡೆಸುತ್ತಿದ್ದು, ಮಕ್ಕಳು, ವೃದ್ಧರು ಸಾರ್ವಜನಿಕರಲ್ಲಿ ಭಾರಿ ಆತಂಕ ಉಂಟಾಗಿದೆ. ಮಳೆಯ ಅಭಾವದಿಂದಾಗಿ ಜಲಾಶಯಗಳು ಮತ್ತು ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ದಡಗಳಲ್ಲಿ ವಾಮಾಚಾರ ಮಾಡಲು ಅನೇಕರು ಮುಂದಾಗಿದ್ದಾರೆ.

ಪಟ್ಟಣದ ಪುರಸಭೆ ವ್ಯಾಪ್ತಿಯ ಸವ್ವೆ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಕೆರೆಯ ಬಳಿ ಭಾರಿ ಗಾತ್ರದ ಗೊಂಬೆ ನಿರ್ಮಾಣ ಮಾಡಿ ಮಂಡಲ ರೂಪಿಸಿ ಪೂಜೆಗಳನ್ನು ಮಾಡಿ ರಾತ್ರೋರಾತ್ರಿ ವಾಮಾಚಾರವನ್ನು ಮಾಡಿದ್ದಾರೆ.

ಇದೇ ರಸ್ತೆಯಲ್ಲಿ ಓಡಾಡುವ ಸವ್ವೆ, ಪಡುಕೋಟೆ, ಗೂಳಿಕಟ್ಟೆ, ಜಿ.ಜಿ. ಕಾಲೋನಿ ಗ್ರಾಮಗಳ ನೂರಾರು ಮಹಿಳೆಯರು, ವೃದ್ಧರು, ಮಕ್ಕಳು ರಸ್ತೆ ಬಳಿಯೇ ವಾಮಾಚಾರ ನಡೆದಿರುವುದನ್ನು ನೋಡಿ ಭಯಭೀತರಾಗಿದ್ದಾರೆ. ಮತ್ತೆ ಅನೇಕರು ಈ ಮಾರ್ಗದಲ್ಲಿ ಸಂಚರಿಸುವುದನ್ನೇ ಬಿಟ್ಟಿದ್ದಾರೆ.

ರಾಜ್ಯದಲ್ಲಿ ಮೌಢ್ಯ, ವಾಮಾಚಾರ, ಇನ್ನಿತರ ಅನಿಷ್ಟ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿದ್ದರೂ ತಾಲ್ಲೂಕಿನಲ್ಲಿರುವ ಮುಗ್ಧ ಜನರ ಬಳಿ ಹಣ ಕೀಳಲು ಇಂತಹ ಚಟುವಟಿಕೆಗಳನ್ನು ತಾಲ್ಲೂಕಿನ ಅನೇಕ ಭಾಗಗಳಲ್ಲಿ ಕದ್ದು ಮುಚ್ಚಿ ನಡೆಸುತ್ತಿದ್ದಾರೆ. ಇದರಿಂದಾಗಿ ಜನ ಸಾಮಾನ್ಯರಲ್ಲಿ ಭಯ ಉಂಟಾಗಿದೆ.

ಸಂಬಂಧಪಟ್ಟ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿಯವರು ಇತ್ತ ಗಮನಹರಿಸಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿ ಕೊಡಬೇಕಾಗಿದೆ.

” ನಮ್ಮ ಗ್ರಾಮದ ಸಮೀಪದಲ್ಲಿ ಕೆರೆಯ ಬಳಿ ವಾಮಾಚಾರ ಮಾಡಿರುವುದರಿಂದ ಗ್ರಾಮದ ಎಲ್ಲಾ ಜನರಿಗೆ, ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬರಿಗೂ ಭಯ ಉಂಟಾಗಿದೆ. ಸಂಬಂಧಪಟ್ಟವರು ಇದನ್ನು ತೆರವುಗೊಳಿಸುವ ಕಾರ್ಯ ಮಾಡಬೇಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವಾಮಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.”

-ಶಿವು ಜಿಯೋ, ಸವ್ವೆ ಗ್ರಾಮದ ನಿವಾಸಿ

” ಗ್ರಾಪಂ ವ್ಯಾಪ್ತಿಯ ಕೆರೆ ಬಳಿ ಭಾರಿ ಗಾತ್ರದ ಗೊಂಬೆ ನಿರ್ಮಾಣ ಮಾಡಿ ವಾಮಾಚಾರ ಮಾಡಿರುವ ವಿಚಾರ ಗೊತ್ತಾಗಿದೆ. ಸಂಬಂಧಪಟ್ಟ ಪಿಡಿಒ ಮತ್ತು ಪೊಲೀಸ್ ಇಲಾಖೆಯವರಿಗೆ ವಿಚಾರ ತಿಳಿಸಿ ತಕ್ಷಣ ತೆರವುಗೊಳಿಸಲಾಗುವುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ.”

-ರವಿಚಂದ್ರನ್, ಇಒ, ತಾಪಂ

 

 

Tags:
error: Content is protected !!