Mysore
21
broken clouds

Social Media

ಸೋಮವಾರ, 16 ಮಾರ್ಚ್ 2026
Light
Dark

ಮಧ್ಯಾಹ್ನದ ಬಿಸಿಯೂಟಕ್ಕೂ ತಟ್ಟಲಿದೆ ಗ್ಯಾಸ್ ಬಿಸಿ?

ಗಿರೀಶ್ ಹುಣಸೂರು

ಸಿಲಿಂಡರ್ ರೀಫಿಲ್ಲಿಂಗ್‌ಗೆ ೨೫ ದಿನಗಳ ಅವಧಿ ನಿಗದಿ; ವಸತಿ ಶಾಲೆಗಳು, ಹಾಸ್ಟೆಲ್‌ಗಳಿಗೆ ಬಿಸಿ ತಟ್ಟುವ ಸಂಭವ

ಮೈಸೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಸರ್ಕಾರಿ ಶಾಲೆಗಳು, ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲ ಯಗಳಿಗೂ ಬಿಸಿ ತಟ್ಟುವ ಸಂಭವ ಹೆಚ್ಚಿದೆ.

ಕೊಲ್ಲಿಯಿಂದ ಇಂಧನ ಪೂರೈಕೆ ವ್ಯತ್ಯಯವಾಗುತ್ತಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಅಭಾವದಿಂದ ಹೋಟೆಲ್ ಉದ್ಯಮ ಸೇರಿದಂತೆ ವಾಣಿಜ್ಯ ಕ್ಷೇತ್ರಕ್ಕೆ ಈಗಾಗಲೇ ಬಿಸಿ ತಟ್ಟಿದೆ. ಆದರೆ, ಗೃಹ ಬಳಕೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಅಂತಹ ವ್ಯತ್ಯಯವಾಗದಿರುವುದರಿಂದ ಸಮಸ್ಯೆ ಉಲ್ಬಣಿಸಿಲ್ಲ. ಆದರೆ, ಸಿಲಿಂಡರ್ ರೀಫಿಲ್ಲಿಂಗ್ ಅವಽಯನ್ನು ತೈಲ ಕಂಪೆನಿಗಳು ೨೫ ದಿನಗಳಿಗೆ ನಿಗದಿಪಡಿಸಿರುವುದರಿಂದ ಡಬಲ್ ಸಿಲಿಂಡರ್ ಹೊಂದಿರುವ ಮನೆಗಳಿಗೆ ಸದ್ಯ ಯಾವುದೇ ಸಮಸ್ಯೆ ಕಂಡುಬರುತ್ತಿಲ್ಲ. ಆದರೆ, ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ, ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳ ಅಡುಗೆ ಮನೆಗಳಿಗೆ ಇದರ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಏ.೧೦ರಂದು ಶೈಕ್ಷಣಿಕ ವರ್ಷದ ಕೊನೆಯ ದಿನ. ಹೀಗಾಗಿ ಅಲ್ಲಿಯವರೆಗೂ ಸರ್ಕಾರಿ ಶಾಲೆಗಳಲ್ಲಿ ೧ರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನಗಳ ಕಾಲ ಮಧ್ಯಾಹ್ನ ಬಿಸಿಯೂಟ, ಪೂರಕ ಪೌಷ್ಠಿಕ ಆಹಾರವಾಗಿ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು, ಕ್ಷೀರ ಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನಗಳು ೧೫೦ ಎಂಎಲ್ ಬಿಸಿ ಹಾಲು, ಮೂರು ದಿನ ರಾಗಿ ಹೆಲ್ತ್ ಮಿಕ್ಸ್ ನೀಡಲಾಗುತ್ತಿದೆ. ಇನ್ನು ವಸತಿ ಶಾಲೆ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಬೇಕಿದೆ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಶಾಲೆ, ವಿದ್ಯಾರ್ಥಿನಿಲಯಗಳಿಗೆ ತಿಂಗಳಿಗೆ ನಾಲ್ಕಾರು ಸಿಲಿಂಡರ್ಗಳ ಅವಶ್ಯಕವಿದೆ. ಆದರೆ, ಪೂರೈಕೆ ವ್ಯತ್ಯಯದಿಂದಾಗಿ ತೈಲ ಕಂಪೆನಿಗಳು ೨೫ ದಿನಗಳ ಮಿತಿ ಹೇರಿರುವುದರಿಂದ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಸಿಲಿಂಡರ್ ಹೊಂದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಯುದ್ಧದ ಸಂದರ್ಭವಲ್ಲ, ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾದ ದಿನಗಳಿಂದಲೂ ಅಡುಗೆ ಅನಿಲ ಸಿಲಿಂಡರ್ ಸಮಸ್ಯೆ ಇದ್ದೇ ಇದೆ. ಸಿಲಿಂಡರ್ ಖಾಲಿಯಾಗಿ ಭರ್ತಿಗೆ ಬುಕ್ ಮಾಡಿದ ಮೂರ‍್ನಾಲ್ಕು ದಿನಗಳ ನಂತರ ಏಜೆನ್ಸಿಗಳವರು ಸಿಲಿಂಡರ್ ಪೂರೈಸುವುದರಿಂದ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಮನೆಯಿಂದಲೋ, ಅಡುಗೆ ಸಿಬ್ಬಂದಿಯ ಮನೆಯಿಂದಲೋ ಸಿಲಿಂಡರ್ ತಂದು ಬಿಸಿಯೂಟ ಮಾಡಿ ವಿತರಿಸಲಾಗುತ್ತಿದೆ. ಬಿಸಿಯೂಟದ ಜೊತೆಗೆ ಹಾಲು, ಮೊಟ್ಟೆಯನ್ನೂ ಕೊಡಬೇಕಿರುವುದರಿಂದ ಬಹಳ ಬೇಗ ಸಿಲಿಂಡರ್ ಖಾಲಿಯಾಗುತ್ತದೆ.

ಶೈಕ್ಷಣಿಕ ವರ್ಷದ ಕೊನೆಯ ದಿನದವರೆಗೂ ಮಧ್ಯಾಹ್ನದ ಬಿಸಿಯೂಟ ನೀಡಬೇಕು ಎನ್ನುವ ಸರ್ಕಾರ ತಾಂತ್ರಿಕ ಕಾರಣಗಳಿಗಾಗಿ ಬಿಸಿಯೂಟದ ಅಡುಗೆ ಸಿಬ್ಬಂದಿಯನ್ನು ಮಾರ್ಚ್ ಕೊನೆಯ ವಾರದಲ್ಲೇ ಕರ್ತವ್ಯದಿಂದ ಬಿಡುಗಡೆ ಮಾಡಿ ಬಿಡುತ್ತದೆ. ಜೊತೆಗೆ ಪರೀಕ್ಷೆಗಳು ಮುಗಿದ ನಂತರ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗುವುದರಿಂದ ಅಂತಹ ಸಮಸ್ಯೆ ಎದುರಾಗಲಾರದು. ಇನ್ನೊಂದು ವಾರ ಇದೇ ಪರಿಸ್ಥಿತಿ ಮುಂದುವರಿದು, ಸಿಲಿಂಡರ್ ಬುಕ್ಕಿಂಗ್ ಮಾಡಲು ಮುಂದಾದಾಗ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದ ತೀವ್ರತೆ ಗೊತ್ತಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಶಿಕ್ಷಕರೊಬ್ಬರು.

” ಪಿಎಂ ಪೋಷಣ್ ಯೋಜನೆಯಡಿ ಶಾಲೆಗಳ ಬಿಸಿಯೂಟ ತಯಾರಿಕೆಗೆ ಅಗತ್ಯವಾದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಽ ಕಾರಿಗಳು ಮತ್ತು ಜಿಪಂ ಸಿಇಒಗಳಿಗೆ ಪತ್ರ ಬರೆದು ಕೋರಲಾಗಿದೆ.”

-ವಿಕಾಸ್ ಕಿಶೋರ್ ಸುರಳ್ಕರ್, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ

” ಸದ್ಯಕ್ಕೆ ಶಾಲೆಗಳ ಬಿಸಿಯೂಟಕ್ಕೆ ಸಿಲಿಂಡರ್ ಕೊರತೆ ಎದುರಾಗಿಲ್ಲ. ಜಿಲ್ಲಾಧಿಕಾರಿಗಳು ತೈಲ ಕಂಪೆನಿಗಳವರ ಸಭೆ ನಡೆಸಿ ಶಾಲೆಗಳಿಗೆ ಸಿಲಿಂಡರ್ ಪೂರೈಕೆ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ.”

-ಡಾ. ಬಿ.ಸಿ.ದೊಡ್ಡೇಗೌಡ, ಜಿಲ್ಲಾ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ ಯೋಜನೆ

” ಪಿಎಂ ಪೋಷಣ್ ಶಕ್ತಿ ನಿರ್ಮಾಣ್ (ಮಧ್ಯಾಹ್ನ ಉಪಾಹಾರ ಯೋಜನೆ) ಯೋಜನೆಯು ಸರ್ಕಾರದ ಪ್ರತಿಷ್ಠಿತ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದಕ್ಕೆ ನಿರಂತರವಾಗಿ ಎಲ್‌ಪಿಜಿ ಪೂರೈಕೆಯ ಅಗತ್ಯವಿರುತ್ತದೆ. ೧೦.೦೪.೨೦೨೬ ಶೈಕ್ಷಣಿಕ ವರ್ಷದ ಕೊನೆಯ ದಿನವಾಗಿದ್ದು, ಅಲ್ಲಿಯವರೆಗೂಬಿಸಿಯೂಟ ಯೋಜನೆಗೆ ತೊಂದರೆಯಾಗದಂತೆ ಇದನ್ನು ಅಗತ್ಯ ವಸ್ತು ಕಾಯ್ದೆಯಡಿ ಪರಿಗಣಿಸಿ ಶಾಲೆಗಳಿಗೆ ಎಲ್‌ಪಿಜಿ ಇಂಧನವನ್ನು ಅದ್ಯತೆಯ ಮೇರೆಗೆ ಪೂರೈಸುವಂತೆ ತಮ್ಮ ವ್ಯಾಪ್ತಿಯ ಎಲ್ಲಾ ವಿತರಕರಿಗೆ ಸೂಚಿಸುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳಿಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಕೋರಿದ್ದಾರೆ.”

Tags:
error: Content is protected !!