ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಶಾಲೆಗೆ ಪದೇಪದೇ ಕಾಡಾನೆ ಲಗ್ಗೆ; ಪೋಷಕರು, ಗ್ರಾಮಸ್ಥರಲ್ಲಿ ಭೀತಿ
ಹನೂರು: ಕಾಡಾನೆ ದಾಳಿಯಿಂದ ಪದೇಪದೇ ಶಾಲಾ ಸುತ್ತುಗೋಡೆ ಹಾಗೂ ಗೇಟ್, ಕುಡಿಯುವ ನೀರಿನ ಪೈಪ್‌ಗಳು ಹಾಳಾಗುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆಯ ಅಽಕಾರಿಗಳು ವಿಫಲರಾಗಿದ್ದಾರೆ ಎಂದು ಪಚ್ಚೆದೊಡ್ಡಿ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಪಚ್ಚೆದೊಡ್ಡಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಕಾಡಾನೆ ದಾಳಿ ಮಾಡಿ ಶಾಲಾ ಗೇಟು ಹಾಗೂ ಕುಡಿಯುವ ನೀರಿನ ಪೈಪ್‌ಅನ್ನು ಮುರಿದು ಹಾಕಿದೆ.
ಶಾಲಾ ಗೇಟು ಹಾಗೂ ಪೈಪ್ ಮುರಿತ: ಕಾಡಾನೆ ದಾಳಿ ನಡೆಸಿ ಶಾಲಾ ಮುಂಭಾಗ ಅಳವಡಿಸಿರುವ ಗೇಟು ಹಾಗೂ ಕುಡಿಯುವ ನೀರಿನ ಸಂಪೂರ್ಣ ಪೈಪ್‌ಗಳನ್ನು ಮುರಿದು ಚೆಲ್ಲಾಪಿಲ್ಲಿ ಮಾಡಿದೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಅಲ್ಲಿನ ಶಿಕ್ಷಕರು ಹೇಳಿದ್ದಾರೆ. ಕಾಡಾನೆ ಪದೇಪದೇ ಶಾಲೆಯ ಮೇಲೆ ದಾಳಿ ನಡೆಸುತ್ತಿದೆ. ಇದರಿಂದ ರಿಪೇರಿ ಮಾಡಲು ತೊಂದರೆಯಾಗುತ್ತಿದೆ ಎನ್ನುತ್ತಾರೆ ಅಲ್ಲಿನ ಶಿಕ್ಷಕರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿ ದ್ದಾರೆ.
ಶಾಶ್ವತ ಕ್ರಮ ಕೈಗೊಳ್ಳಿ: ಕಾಡಾನೆ ಆಗಿಂದಾಗ್ಗೆ ಶಾಲೆಯ ಆಸ್ತಿಗೆ ನಷ್ಟ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಡಾನೆ ಗ್ರಾಮದೊಳಗೆ ಹಾಗೂ ಶಾಲೆಯ ಸಮೀಪ ಬಾರದಂತೆ ತಡೆಗಟ್ಟಲು ರೈಲ್ವೆ ಗೇಟ್ ಅಥವಾ ಆನೆ ಕಂದಕವನ್ನು ನಿರ್ಮಾಣ ಮಾಡುವುದರ ಮೂಲಕ ಶಾಶ್ವತ ಪರಿಹಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಗಳಿಗೆ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ಶಾಲೆಗೆ ಕಾಡಾನೆ ದಾಳಿ ಮಾಡುತ್ತಿರುವ ವಿಷಯ ಗೊತ್ತಿದ್ದರೂ ಆನೆಗಳು ಶಾಲೆ ಸಮೀಪ ಬಾರದಂತೆ ತಡೆಗಟ್ಟುವಲ್ಲಿ ಕ್ರಮಕೈಗೊಳ್ಳದೆಮ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನಾದರೂ ಸೂಕ್ತ ಕ್ರಮ ವಹಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಪಚ್ಚೆದೊಡ್ಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
” ಪಚ್ಚೆದೊಡ್ಡಿ ಸರ್ಕಾರಿ ಶಾಲೆ ಮೇಲೆ ಕಾಡಾನೆ ದಾಳಿ ನಡೆಸಿರುವುದು ಇದೇ ಮೊದಲಲ್ಲ. ಕನಿಷ್ಠ ೫ ಬಾರಿಯಾದರೂ ದಾಳಿ ನಡೆಸಿದೆ. ಈಗ ಕುಡಿಯುವ ನೀರಿನ ಪೈಪ್‌ನ್ನು ಸಹ ಹಾನಿಗೊಳಿಸಿದೆ. ನಾಳೆಯಿಂದ ಮಕ್ಕಳಿಗೆ ಕುಡಿಯುವ ನೀರಿನ ತೊಂದರೆಯಾಗಲಿದೆ. ಹಾಗಾಗಿ ಅರಣ್ಯ ಇಲಾಖೆಯ ಅದಿಕಾರಿಗಳು ಕ್ರಮ ವಹಿಸಬೇಕು.
-ಗೋವಿಂದ, ಅಧ್ಯಕ್ಷರು, ಎಸ್‌ಡಿಎಂಸಿ ಸಮಿತಿ, ಪಚ್ಚೆದೊಡ್ಡಿ ಶಾಲೆ





