Mysore
17
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ

ಆತಂಕದಲ್ಲೇ ದಿನದೂಡುತ್ತಿರುವ ಗ್ರಾಮಸ್ಥರು; ಶಾಶ್ವತ ಕ್ರಮಕ್ಕೆ  ಸ್ಥಳೀಯ ನಿವಾಸಿಗಳ ಒತ್ತಾಯ

ಸುಂಟಿಕೊಪ್ಪ: ಸಮೀಪದ ೭ನೇ ಹೊಸಕೋಟೆ, ಕೆದಕಲ್, ಹೊರೂರು, ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ಭಾಗಗಳಲ್ಲಿ ಕಾಡಾನೆಗಳ ಜೊತೆಗೆ ಹುಲಿಯ ಓಡಾಟ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕಾರ್ಮಿಕರು ತೋಟಗಳಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವ್ಯಾಪ್ತಿಯಲ್ಲಿ ದಿನನಿತ್ಯ ಆನೆಗಳ ಹಾವಳಿ ವರದಿಯಾಗುತ್ತಿದ್ದು, ಅನಾಹುತಗಳೂ ಸಂಭವಿಸಿವೆ. ಇದರೊಂದಿಗೆ ಹುಲಿ ಸಂಚರಿಸಿರುವ ಹೆಜ್ಜೆ ಗುರುತುಗಳೂಕಂಡು ಬರುತ್ತಿದೆ. ವನ್ಯಪ್ರಾಣಿಗಳ ಹಾವಳಿಯಿಂದ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ಗ್ರಾಮಸ್ಥರು ಪ್ರಾಣಭಯದಿಂದಾಗಿ ಆತಂಕದಲ್ಲೇ ದಿನಕಳೆಯುವಂತಾಗಿದೆ.

ಕಾಡಾನೆ ಹಾವಳಿ ಹೆಚ್ಚಿರುವ ಕೊಡಗರಹಳ್ಳಿ, ಕೆದಕಲ್, ಹೊರೂರು, ಮೊದ್ದೂರು, ಕಂಬಿಬಾಣೆ, ಚಿಕ್ಲಿಹೊಳೆ, ೭ನೇ ಹೊಸಕೋಟೆ ಭಾಗಗಳಲ್ಲಿ ಶಾಲೆಗಳಿದ್ದು, ಸಾವಿರಾರು ಮಕ್ಕಳು ವಿವಿಧ ಭಾಗಗಳಿಂದ ಆಗಮಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವನ್ಯಪ್ರಾಣಿಗಳ ಹಾವಳಿಯಿಂದ ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ಸದ್ದುಮಾಡಿದ ಹುಲಿ ದಾಳಿಯ ನಡುವೆಯೇ ಇದೀಗ ಕೆದಕಲ್ ಮೂಲಕ ಆನೆಗಳು ದಾಳಿಯಿಡುತ್ತಿವೆ. ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಓಡಿಸುವುದನ್ನು ಹೊರತುಪಡಿಸಿದರೆ ಶಾಶ್ವತ ಕ್ರಮ ಕೈಗೊಂಡಿಲ್ಲದಿರುವುದು ದುರದೃಷ್ಟಕರ. ಈ ವ್ಯಾಪ್ತಿಯಲ್ಲಿ ೧೦ರಿಂದ ೧೫ ಕಾಡಾನೆಗಳು ಓಡಾಡುತ್ತಿದ್ದು, ಅವುಗಳನ್ನು ಸೆರೆಹಿಡಿದು ಪಳಗಿಸಬೇಕೆನ್ನುವ ಒತ್ತಾಯ ಕೇಳಿ ಬಂದಿದೆ.

ಸರ್ಕಾರ ಅರಣ್ಯ ಇಲಾಖೆಯ ಮೂಲಕ ಪರಿಹಾರ ಒದಗಿಸುವುದು ಮತ್ತು ಹಿರಿಯ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ ಮಾತ್ರಕ್ಕೆ ಆನೆ ಮಾನವ-ಸಂಘರ್ಷ ಮುಗಿಯುವುದಿಲ್ಲ. ಏಕಕಾಲಕ್ಕೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟವೆಂಬುದು ಎಲ್ಲರಿಗೂ ಗೊತ್ತಿದೆ. ಆದರೆ ದೀರ್ಘಕಾಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

” ಈಗಾಗಲೇ ಕಾಡಾನೆ ಹಾವಳಿಯಿಂದ ಹೈರಾಣಾಗಿದ್ದೇವೆ. ಇದೀಗ ನಮ್ಮ ವ್ಯಾಪ್ತಿಯಲ್ಲಿ ಹುಲಿ ಓಡಾಟದಿಂದ ಮತ್ತಷ್ಟು ಆತಂಕ ಹೆಚ್ಚಾಗಿದೆ. ಹವಾಮಾನ ವೈಪರೀತ್ಯ, ಅಕಾಲಿಕ ಮಳೆಯಿಂದಾಗಿ ವರ್ಷಕ್ಕೊಮ್ಮೆ ಬರುವ ಫಸಲನ್ನು ನಂಬಿ ಬದುಕುವ ನಾವು, ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.”

-ಮುಕ್ಕಾಟ್ಟೀರ ಸಂಜುಪೊನ್ನಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ

” ಹುಲಿ ಹೆಜ್ಜೆ ಗುರುತು ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಹುಲಿ ಹೊರೂರು ಭಾಗದಿಂದ ಮಡಿಕೇರಿ ಕಡೆ ಸಂಚಾರ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಕಾಡಾನೆ ಹಾವಳಿ ಬಗ್ಗೆಯೂ ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಽಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.”

-ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ

Tags:
error: Content is protected !!