ಲಕ್ಷಿ ಕಾಂತ್ ಕೊಮಾರಪ್ಪ
ಮಳೆಯ ನಡುವೆ ರೈತರಿಗೆ ಮತ್ತೊಂದು ಸಂಕಷ್ಟ; ಕೃಷಿ ಚಟುವಟಿಕೆಗಳಿಗೆ ತೊಡಕು
ಸೋಮವಾರಪೇಟೆ: ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯ ನಡುವೆ ರೈತರ ಬದುಕಿಗೆ ಮತ್ತೊಂದು ಸಂಕಷ್ಟದ ಎದುರಾಗಿದ್ದು, ತಾಲ್ಲೂಕು ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಮಳೆಯ ಜೊತೆಗೆ ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿಕರು ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ತಾಲ್ಲೂಕಿನ ಮೀಸಲು ಅರಣ್ಯ ಪಕ್ಕದಲ್ಲಿರುವ ಗ್ರಾಮಗಳಲ್ಲಿ ಕಾಡುಕೋಣ, ಹಂದಿ, ಮುಳ್ಳುಹಂದಿ ಹಾಗೂ ನವಿಲುಗಳು ದಿನನಿತ್ಯ ಕೃಷಿ ಭೂಮಿಗಳಿಗೆ ದಾಳಿಯಿಟ್ಟು ಬೆಳೆ ಹಾನಿಯನ್ನುಂಟು ಮಾಡುತ್ತಿವೆ. ಕಾಳುಮೆಣಸಿನ ಫಸಲು ತೆಗೆದುಕೊಳ್ಳಲು ಕೃಷಿಕನಿಗೆ ನಾಲೈದು ವರ್ಷಗಳು ಬೇಕಾಗುತ್ತದೆ. ಆದರೆ ಮುಳ್ಳು ಹಂದಿಗಳು ಕಾಳುಮೆಣಸಿನ ಬಳ್ಳಿಗಳ ಬುಡವನ್ನೇ ತಿಂದು ಹಾಕುತ್ತಿವೆ.
ಕಾಡುಕೋಣಗಳು ಕಾಫಿ ತೋಟದೊಳಗೆ ನುಗ್ಗಿ ಗಿಡಗಳಿಗೆ ಹಾನಿ ಮಾಡುತ್ತಿವೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕೂತಿ, ತೋಳೂರುಶೆಟ್ಟಳ್ಳಿ, ಯಡೂರು, ಹರಗ, ಕುಂದಳ್ಳಿ, ಬಾಚಳ್ಳಿ, ಮಲ್ಲಳ್ಳಿ, ಹೆಗ್ಗಡಮನೆ, ಕೊಪ್ಪಳ್ಳಿ, ಕುಡಿಗಾಣ ಮುಂತಾದ ಕಡೆಗಳಲ್ಲಿಯೂ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಗರ್ವಾಲೆ ಗ್ರಾಪಂ ವ್ಯಾಪ್ತಿಯ ಸೂರ್ಲಬ್ಬಿ, ಕಿಕ್ಕರಹಳ್ಳಿ, ಕುಂಬಾರಗಡಿಗೆ, ಮುಟ್ಟು ಮಂಕ್ಯಾ ಗ್ರಾಮಗಳಲ್ಲಿ ಕಾಡಾನೆ, ಕಾಡುಕೋಣ ಕಾಡುಹಂದಿಗಳ ಹಾವಳಿ ಮಿತಿಮೀರಿದೆ. ಕೆಸದಗೆಡ್ಡೆ, ಸಿಹಿಗೆಣಸು, ತರಕಾರಿ ಬೆಳೆಗಳು ಕಾಡು ಹಂದಿಗಳ ಪಾಲಾಗುತ್ತಿವೆ. ಚೊಲ್ಲಂಡ ಕಾಳಪ್ಪ, ಕನ್ನಗಂಡ ಕುಶಾಲಪ್ಪ ಎಂಬವರಿಗೆ ಸೇರಿದ ಬಾಳೆ, ಭತ್ತ ಸಸಿಮಡಿಗಳನ್ನು ಹಾನಿಪಡಿಸಿವೆ ಎಂದು ಉದಿಯಂಡ ಮನು ಕೃಷಿಕರ ಸಂಕಷ್ಟವನ್ನು ವ್ಯಕ್ತಪಡಿಸಿದರು.
ಕುಂಬಾರಗಡಿಗೆ ಗ್ರಾಮದಲ್ಲಿ ಕನ್ನಿಗಂಡ ಕುಟ್ಟಪ್ಪ ಎಂಬವರ ಭತ್ತದ ಸಸಿ ಮಡಿಗಳನ್ನು ಕಾಡಾನೆಗಳ ಹಿಂಡು ನಾಶಪಡಿಸಿವೆ. ಭತ್ತ ಸಸಿ ನಾಟಿಗೆ ಸಿದ್ಧತೆ ಮಾಡಿಕೊಂಡು ಸ್ವಲ್ಪ ಪೈರನ್ನು ಕಿತ್ತು ಇಟ್ಟಿದ್ದರು. ಆದರೆ, ದಾಳಿ ಮಾಡಿರುವ ಕಾಡಾನೆಗಳು ಸಂಪೂರ್ಣ ತಿಂದು ತುಳಿದು ಹಾನಿಪಡಿಸಿವೆ.
ಈಗಾಗಲೇ ೧೪೦ ಇಂಚು ಮಳೆ ಸುರಿದಿದೆ. ಭತ್ತ ಬೆಳೆದರೆ ಮಾತ್ರ ವರ್ಷವಿಡಿ ಊಟ ಮಾಡಬಹುದು. ಇನ್ನು ಕೇಸರಿ ಭತ್ತದ ಸಸಿಮಡಿ ಮಾಡಿ ನಾಟಿ ಮಾಡಲು ಅಸಾಧ್ಯದ ಮಾತು ಎಂದು ಕೃಷಿಕ ಕನ್ನಗಂಡ ಕುಟ್ಟಪ್ಪ ನೋವು ತೋಡಿಕೊಂಡರು.ದಾಖಲಾತಿ ಸಮಸ್ಯೆಯಿಂದ ಸರ್ಕಾರದಿಂದ ಪರಿಹಾರವೂ ಸಿಗುವುದಿಲ್ಲ, ೨ ಲಕ್ಷ ರೂ. ನಷ್ಟವಾಗಿದ್ದಲ್ಲಿ ೨ ಸಾವಿರ ರೂ. ಪರಿಹಾರ ಕೊಟ್ಟರೆ ಪ್ರಯೋಜನವಿಲ್ಲ. ಮಳೆಹಾನಿ, ಕಾಡುಪ್ರಾಣಿಗಳಿಂದ ಕೃಷಿ ಫಸಲಿನ ಹಾನಿಗೆ ಬಹುತೇಕ ಬಡ ರೈತರಿಗೆ ಇದೂವರೆಗೆ ಪರಿಹಾರ ಸಿಕ್ಕಿಲ್ಲ. ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು ಎಂದು ಅಳಲುತೋಡಿಕೊಂಡರು.
” ಕುಂಬಾರಗಡಿಗೆ, ಮುಟ್ಟು, ಕಿಕ್ಕರಹಳ್ಳಿ, ಸೂರ್ಲಬ್ಬಿ, ಮೂವತ್ತೊಕ್ಲು, ಹಮ್ಮಿಯಾಲ, ಮಂಕ್ಯಾ ಗ್ರಾಮಗಳ ಕೃಷಿಕರ ಬದುಕು ಶೋಚನೀಯವಾಗಿದೆ. ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿಯುತ್ತದೆ. ಕೃಷಿ ಫಸಲು ಹಾನಿಯಾಗುತ್ತದೆ. ಫಸಲು ಕೊಯ್ಲು ಮಾಡುವ ಸಂದರ್ಭದಲ್ಲೂ ಕಾಡು ಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ಕೃಷಿಕರು ತೆಗೆದುಕೊಳ್ಳಬೇಕು. ಆಸ್ತಿ ದಾಖಲಾತಿ ಸರಿಯಿಲ್ಲದ ಕಾರಣ ಯಾವುದೇ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ.”
-ಉದಿಯಂಡ ಮನು, ಕೃಷಿಕ, ಮುಟ್ಟು ಗ್ರಾಮ
” ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಫಸಲು ನಷ್ಟ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಕಾಡುಕೋಣ, ಕಾಡಾನೆಗಳು, ಕಾಡು ಹಂದಿಗಳು ಬೆಳೆನಷ್ಟ ಪಡಿಸಿದ್ದರೆ, ರೈತರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರೆ, ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿದ ನಂತರ ಸೂಕ್ತ ಪರಿಹಾರ ನೀಡಲಾಗುತ್ತದೆ. ಕೃಷಿಕರ ಹೆಸರಿನಲ್ಲಿರುವ ಆರ್‌ಟಿಸಿ, ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಸಲ್ಲಿಸಬೇಕು.”
-ಶೈಲೇಂದ್ರ ಕುಮಾರ್, ಆರ್‌ಎಫ್‌ಒ, ಸೋಮವಾರಪೇಟೆ





