Mysore
30
clear sky

Social Media

ಗುರುವಾರ, 05 ಮಾರ್ಚ್ 2026
Light
Dark

ಮೋದಿ ಸರ್ಕಾರದ ‘ಇರಾನ್ ನೀತಿ’ ಬದಲಾದದ್ದೇಕೆ?

* ಪ್ರಧಾನಿ ಮೋದಿ ಆರಂಭದ ವರ್ಷಗಳಲ್ಲಿ ಇಸ್ರೇಲ್ -ಇರಾನ್ ಜೊತೆಗೆ ಉತ್ತಮ ಸಂಬಂಧವನ್ನೇ ಮುಂದುವರಿಸಿದ್ದರು

* ಈಗ ಧಿಡೀರ್‌ನೇ ಯೂ ಟರ್ನ್ ಮಾಡಿ ಇಸ್ರೇಲ್ ಪರ ಸಮರ್ಥನೆಗೆ ಇಳಿದಿದ್ದು, ಇಡೀ ವಿಶ್ವವನ್ನೇ ಆಶ್ಚರ್ಯಚಕಿತಗೊಳಿಸಿದೆ

* ಅನೇಕ ಕ್ಲಿಷ್ಟಕರ ಸಂದರ್ಭಗಳಲ್ಲಿ ಸದಾ ಭಾರತದ ಪರವಾಗಿ ಇರಾನ್ ನಿಂತುಕೊಂಡಿದೆ

* ಶಾಂತಿ ಸ್ಥಾಪನೆಯೇ ನಮ್ಮ ಮೊದಲ ಆದ್ಯತೆಯಾಗಬೇಕು ಎನ್ನುವ ಪ್ರಧಾನಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ

ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧದಲ್ಲಿ ಭಾರತ ಸ್ಪಷ್ಟವಾಗಿ ಇಸ್ರೇಲ್ ಪರವಾಗಿ ನಿಲ್ಲಲು ನಿರ್ಧರಿಸಿದಂತಿದೆ. ಈ ಸಂಬಂಧ ಬಹಿರಂಗ ಘೋಷಣೆ i ವಾದಗಳನ್ನೂ ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕ ಕ್ರಮಗಳ ಮೂಲಕವೇ ಇತ್ಯರ್ಥಪಡಿಸಬೇಕು, ಶಾಂತಿ ಸ್ಥಾಪನೆಯೇ ನಮ್ಮ ಮೊದಲ ಆದ್ಯತೆಯಾಗಬೇಕು ಎಂಬುದು ಭಾರತದ ಬಲವಾದ ಆಶಯ ವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆದರೆ, ಇರಾನ್ ಸಾರ್ವಭೌಮತ್ವದ ವಿರುದ್ಧ ಅಪ್ರಚೋ ದಿತವಾಗಿ ಇಸ್ರೇಲ್-ಅಮೆರಿಕ ನಡೆಸುತ್ತಿರುವ ದಾಳಿಯ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಹೇಳಿಕೆಗಳಲ್ಲಿ ಇರಾನ್ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ. ಇರಾನ್ ಮೇಲೆ ದಾಳಿ ಆರಂಭವಾಗುವುದಕ್ಕಿಂತ ಕೇವಲ ೨೪ ಗಂಟೆಗಳ ಮೊದಲು ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿ, ‘ಭಾರತ ಇಸ್ರೇಲ್ ಜೊತೆಗೆ ಹಿಂದೆಯೂ ಇತ್ತು, ಇಂದೂ ಇದೆ ಮತ್ತು ಮುಂದೆಯೂ ಇರುತ್ತದೆ’ ಎಂದು ಘೋಷಣೆ ಮಾಡಿರುವುದು ಹಾಗೂ ಯುದ್ಧದ ಮೊದಲ ದಿನವೇ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲ ಅಲಿ ಖಮೇನಿ ಹತ್ಯೆಯಾದರೂ ಪ್ರಧಾನಿ ಮೋದಿ ಇಲ್ಲಿಯ ವರೆಗೆ ಅವರ ಹತ್ಯೆಯ ಬಗ್ಗೆ ಏನೂ ಮಾತನಾಡದೇ ಮೌನವಹಿಸಿರುವುದು ಭಾರತದ ಒಲವು ಮತ್ತು ನಿಲುವು ಏನು, ಎತ್ತ ಎಂಬುದನ್ನು ಯಾವುದೇ ಸಂಶಯಕ್ಕೆಡೆ ಇಲ್ಲದಂತೆ ಸ್ಪಷ್ಟಪಡಿಸಿದಂತಾಗಿದೆ.

ದಶಕಗಳ ಕಾಲ ಭಾರತದ ಮಿತ್ರರಾಗಿದ್ದ ಮತ್ತು ಕಾಶ್ಮೀರ ಕುರಿತಂತೆ ಸಂಯುಕ್ತ ರಾಷ್ಟ್ರ ಸಂಘಟನೆಯಲ್ಲಿ ಪಾಕಿಸ್ತಾನವನ್ನು ವಿರೋಧಿಸಿ ಭಾರತದ ಪರ ಸ್ಪಷ್ಟ ನಿಲುವು ತಳೆದಿದ್ದ ಖಮೇನಿ ಹತ್ಯೆಯನ್ನು ಖಂಡಿಸುವುದು ದೂರದ ಮಾತು, ಅವರ ಸಾವಿಗೆ ಶ್ರದ್ಧಾಂಜಲಿಯನ್ನೂ ಭಾರತ ಸಲ್ಲಿಸದಿರುವುದು ವಿಶ್ವದ ಹುಬ್ಬೇರಿಸಿದೆ.

ತಟಸ್ಥ ನೀತಿಗೆ ಎಳ್ಳು ನೀರು: ಇಸ್ರೇಲ್ ಮತ್ತು ಇರಾನ್ ಸಂಘರ್ಷದಲ್ಲಿ ಯಾವುದೇ ಒಂದು ರಾಷ್ಟ್ರದ ಜೊತೆ ಗುರುತಿಸಿಕೊಳ್ಳದೇ ಎರಡೂ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧ ಹೊಂದುವುದು ಮತ್ತು ಎರಡೂ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವುದು ಸದಾ ಭಾರತದ ನೀತಿಯಾಗಿದೆ. ಅಮಾನವೀಯ ದಾಳಿಗಳನ್ನು ಯಾರೇ ಮಾಡಿದರೂ ಅದನ್ನು ನೇರವಾಗಿ, ನಿಷ್ಠುರ ವಾಗಿ, ನಿಷ್ಪಕ್ಷಪಾತ ವಾಗಿ ಖಂಡಿಸುವುದು, ಶಾಂತಿ- ಸೌಹಾರ್ದತೆ ಸ್ಥಾಪನೆಗಾಗಿ ಸಂಘರ್ಷ ನಿರತ ರಾಷ್ಟ್ರ ಗಳು ಪರಸ್ಪರ ಮಾತುಕತೆ ನಡೆಸುವಂತೆ ಪ್ರೋತ್ಸಾ ಹಿಸುವ ತಟಸ್ಥ ನೀತಿಯನ್ನೇ ಕಳೆದ ೮೦ ವರ್ಷ ಗಳಿಂದ ಭಾರತ ಪಾಲಿಸಿಕೊಂಡು ಬಂದಿದೆ. ಆ ಮೂಲಕ ಇಡೀ ವಿಶ್ವಕ್ಕೆ ನೈತಿಕ ನಾಯಕತ್ವವನ್ನು ಒದಗಿಸುವುದು ಹಾಗೂ ಬುದ್ಧನ ಭೂಮಿ ಯಾದ ಭಾರತದಿಂದ ಹಿಂಸೆ, ಸಂಘರ್ಷ, ಯುದ್ಧಗಳಿಗೆ ಎಂದೂ ಪ್ರೋತ್ಸಾಹ ಸಿಗುವುದಿಲ್ಲ ಎಂಬುದನ್ನು ಸಾರುವುದೇ ಇಲ್ಲಿಯವರೆಗೆ ನಮ್ಮ ವಿದೇಶ ನೀತಿಯಾಗಿತ್ತು.

ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಆರಂಭಗೊಂಡು ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿರುವವರೆಗೂ ಭಾರತ ಇದೇ ನೀತಿಯನ್ನು ಅನುಸರಿಸುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಆರು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದ್ದಾಗಲೂ ಈ ನೀತಿಯಲ್ಲಿ ಯಾವುದೇ ಬದಲಾ ವಣೆ ಆಗಿರಲಿಲ್ಲ. ಹಾಲಿ ಪ್ರಧಾನಿ ಮೋದಿ ಅವರು ಆರಂಭದ ವರ್ಷಗಳಲ್ಲಿ ಇಸ್ರೇಲ್ ಮತ್ತು ಇರಾನ್ ಎರಡೂ ರಾಷ್ಟ್ರಗಳ ಜೊತೆಗೆ ಉತ್ತಮ ಸಂಬಂಧವನ್ನೇ ಮುಂದುವರಿಸಿದ್ದರು. ಅದೇ ಕಾರಣಕ್ಕೆ ಅನೇಕ ಕ್ಲಿಷ್ಟಕರ ಸಂದರ್ಭಗಳಲ್ಲಿ ಸದಾ ಭಾರತದ ಪರವಾಗಿ ಇರಾನ್ ನಿಂತುಕೊಂಡಿದೆ. ಇರಾನ್‌ನಿಂದ ರೂಪಾಯಿಯಲ್ಲೇ ಕಚ್ಚಾ ತೈಲ ಖರೀದಿ ಮಾಡಿ ಭಾರತ ದೊಡ್ಡ ಪ್ರಮಾಣದ ಉಳಿತಾಯವನ್ನು ಮಾಡಿ ಕೊಂಡಿದೆ. ವ್ಯಾಪಾರ ವಹಿವಾಟು ಕ್ಷೇತ್ರದಲ್ಲೂ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮಧುರವಾಗಿಯೇ ಇತ್ತು.

ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟಿನಲ್ಲಿ ಭಾರೀ ಅನುಕೂಲವಾಗುವ ಇರಾನ್‌ನ ಚಾಬಹಾರ್ ಬಂದರು ನಿರ್ಮಾಣ ಯೋಜನೆಯಲ್ಲಿ ಭಾರತದ ಸಹಭಾಗಿತ್ವಕ್ಕೂ ಅಯತೊಲ್ಲ ಅಲಿ ಖಮೇನಿ ಆಡಳಿತ ಅನುಮತಿ ನೀಡಿದ್ದು ಇದಕ್ಕೆ ಸಾಕ್ಷಿ. ಇರಾನ್‌ಗೆ ಭೇಟಿಯನ್ನೂ ನೀಡಿದ್ದ ಪ್ರಧಾನಿ ಮೋದಿ, ಚಾಬಹಾರ್ ಬಂದರು ನಿರ್ಮಾಣ ಒಪ್ಪಂದಕ್ಕೆ ಸಹಿ ಹಾಕಿರುವುದು ತಮ್ಮ ಸರ್ಕಾರದ ಬಹುದೊಡ್ಡ ಸಾಧನೆ, ಅದೊಂದು ಮೈಲಿಗಲ್ಲು ಎಂದೂ ಹೇಳಿಕೊಂಡಿದ್ದರು. ಇಷ್ಟೆಲ್ಲ ಇದ್ದರೂ ಈಗ ಧಿಡೀರನೇ ಯೂ ಟರ್ನ್ ಮಾಡಿ ಇಸ್ರೇಲ್ ಪರ ಸಮರ್ಥನೆಗೆ ಭಾರತ ಇಳಿದಿದ್ದು, ಇರಾನ್ ಜೊತೆ ಅಂತರ ಕಾಯ್ದುಕೊಳ್ಳುತ್ತಿರುವುದು ಇಡೀ ವಿಶ್ವವನ್ನೇ ಆಶ್ಚರ್ಯಚಕಿತಗೊಳಿಸಿದೆ. ಇದಕ್ಕೆ ಕಾರಣಗಳೇನು? ಈ ಬದಲಾದ ವಿದೇಶ ನೀತಿಯ ಪರಿಣಾಮಗಳೇನು? ಭಾರತಕ್ಕೆ ಇದರಿಂದ ಲಾಭವಾಗುವುದೋ ಅಥವಾ ಭವಿಷ್ಯದಲ್ಲಿ ನಷ್ಟ ಆಗಬಹುದೋ ಎಂಬ ಚರ್ಚೆಗಳು, ವಿಶ್ಲೇಷಣೆಗಳು ನಡೆದಿವೆ.

ಪ್ರಧಾನಿ ಸ್ಪಷ್ಟವಾಗಿ ಇಸ್ರೇಲ್ ಪರವಾಗಿ ನಿಲ್ಲಲು ನಿರ್ಧರಿಸಿದಂತಿದೆ :  ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲ ಅಲಿ ಖಮೇನಿ ಭಾರತದ ಆಂತರಿಕ ವಿಷಯಗಳ ಬಗ್ಗೆ ಹಲವು ಬಾರಿ ಪ್ರತಿಕ್ರಿಯೆ ನೀಡಿದ್ದರು. ೨೦೨೦ರ ಮಾರ್ಚ್ ತಿಂಗಳಲ್ಲಿ ದಿಲ್ಲಿಯಲ್ಲಿ ನಡೆದ ದಂಗೆಯನ್ನು ಮುಸ್ಲಿಮರ ನರಸಂಹಾರ ಎಂದು ಕರೆದಿದ್ದ ಖಮೇನಿ, ‘ಜಗತ್ತಿನ ಎಲ್ಲ ಮುಸ್ಲಿಮರು ಭಾರತದಲ್ಲಿ ನಡೆದಿರುವ ಮುಸ್ಲಿಮರ ನರಸಂಹಾರದಿಂದ ದುಃಖಿತರಾಗಿದ್ದಾರೆ. ಭಾರತದ ಸರ್ಕಾರ ಕಟ್ಟರ್ ಹಿಂದೂಗಳು ಹಾಗೂ ಕಟ್ಟರ್ ಹಿಂದೂಗಳ ಪಕ್ಷಗಳನ್ನು ನಿಯಂತ್ರಿಸಬೇಕು ಮತ್ತು ಮುಸ್ಲಿಮರ ರಕ್ಷಣೆ ಮಾಡಬೇಕು. ಇಲ್ಲದೇ ಹೋದರೆ ಭಾರತ ಇಸ್ಲಾಂ ಜಗತ್ತಿನಿಂದ ದೂರವಾಗಬಹುದು’ ಎಂದಿದ್ದರು. indianMuslimsindanger ಎಂಬ ಹ್ಯಾಷ್ ಟ್ಯಾಗ್ ಕೂಡ ಅಳವಡಿಸಿದ್ದರು. ೨೦೧೭ರಲ್ಲಿ ಕಾಶ್ಮೀರಿಗಳ ಪರಿಸ್ಥಿತಿಯ ಬಗ್ಗೆಯೂ ಖಮೇನಿ ಟೀಕೆ ಮಾಡಿದ್ದರು. ಕಾಶ್ಮೀರ ಮುಸ್ಲಿಮರ ದೌರ್ಜನ್ಯದ ವಿರುದ್ಧ ಜಗತ್ತಿನ ಮುಸ್ಲಿಮರೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದ್ದರು. ಈ ಹೇಳಿಕೆ ಕಾಶ್ಮೀರ ಕುರಿತ ಪಾಕಿಸ್ತಾನದ ನಿಲುವನ್ನೇ ಹೋಲುತ್ತದೆ ಎಂದು ಭಾರತ ಆಗ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತ ದಲ್ಲಿನ ಇರಾನ್ ರಾಯಭಾರಿಯನ್ನು ಕರೆಯಿಸಿ ಕೊಂಡು ಸರ್ಕಾರ ಅಸಮಾಧಾನವನ್ನೂ ದಾಖಲಿಸಿತ್ತು. ೨೦೧೯ರ ಆಗಸ್ಟ್ ತಿಂಗಳಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ ೩೭೦ ರದ್ದುಗೊಳಿಸಿದಾಗಲೂ, ‘ಕಾಶ್ಮೀರದ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ನಾವು ಚಿಂತಿತರಾಗಿದ್ದೇವೆ, ನಾವು ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದ್ದೇವೆ. ಆದರೆ, ಕಾಶ್ಮೀರದ ಜನರ ಜೊತೆಗೆ ಭಾರತ ಸರ್ಕಾರ ನ್ಯಾಯಪೂರ್ಣ ನೀತಿ ಅನುಸರಿಸಲಿ ಎಂದು ನಿರೀಕ್ಷೆ ಮಾಡುತ್ತೇವೆ. ಈ ಕ್ಷೇತ್ರದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಯಬೇಕು’ ಎಂದು ಖಮೇನಿ ಟ್ವೀಟ್ ಮಾಡಿದ್ದರು.

ಸೆಪ್ಟೆಂಬರ್ ೨೦೨೪ರಲ್ಲಿ ಅಯತೊಲ್ಲ ಅಲಿ ಖಮೇನಿ ಮಾಡಿದ್ದ ಗಿ ಪೋಸ್ಟ್ ನಲ್ಲಿ ಭಾರತವನ್ನು ಮ್ಯಾನ್ಮಾರ್ ಮತ್ತು ಗಾಜಾ ಜೊತೆ ಹೋಲಿಸಿದ್ದರು. ‘ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಜಗತ್ತಿನ ಇತರ ರಾಷ್ಟ್ರಗಳಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡದವರನ್ನು ಮುಸ್ಲಿಮರೆಂದು ಕರೆಯಲಾಗದು’ ಎಂದು ಹೇಳಿದ್ದರು. ಭಾರತ ಸರ್ಕಾರದ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ) ಕೂಡ ಇರಾನ್ ಸಂಸತ್ತಿನಲ್ಲಿ ಟೀಕೆಗೆ ಒಳಗಾಗಿತ್ತು. ೧೯೯೨ರಲ್ಲಿ ಬಾಬ್ರಿ ಮಸೀದಿ ಧ್ವಂಸ ಕುರಿತು ಹಾಗೂ ೨೦೦೨ರ ಗುಜರಾತ್ ದಂಗೆಯ ನಂತರವೂ ಇರಾನ್ ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಈ ಎಲ್ಲ ಹೇಳಿಕೆಗಳೂ ಭಾರತದ ಆಂತರಿಕ ವಿಷಯದಲ್ಲಿ ಇರಾನ್‌ನ ಹಸ್ತಕ್ಷೇಪ ಎಂಬುದು ಭಾರತದ ಸ್ಪಷ್ಟ ಅಭಿಪ್ರಾಯವಾಗಿತ್ತು. ಅದೇ ಕಾರಣಕ್ಕೆ ಈಗ ಇರಾನ್ ಪರ ನಿಲ್ಲದೇ, ತಟಸ್ಥ ನೀತಿಯನ್ನೂ ಅನುಸರಿಸದೇ ಇಸ್ರೇಲ್ – ಅಮೆರಿಕ ಪಾಳೆಯದಲ್ಲಿ ಗುರುತಿಸಿಕೊಳ್ಳಲು ಮೋದಿ ಸರ್ಕಾರ ನಿರ್ಧರಿಸಿರಬಹುದು ಎಂದು ಅಂತರ ರಾಷ್ಟ್ರೀಯ ವಿಷಯಗಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಖಚಿತ ಕಾರಣ ಹೇಳಲಾಗದು ಇಂಥವೇ ನಿರ್ದಿಷ್ಟ ಕಾರಣಗಳಿಗಾಗಿ ಭಾರತ ಈಗ ಇಸ್ರೇಲ್ ಪರ ನಿಲುವು ತಳೆದಿದೆ ಎಂದು ಖಚಿತವಾಗಿ ಹೇಳುವುದೂ ಕಷ್ಟವೇ. ಏಕೆಂದರೆ, ೨೦೨೪ರ ಮೇ ೧೯ರಂದು ಇರಾನ್ ರಾಷ್ಟ್ರಪತಿ ಇಬ್ರಾಹಿಂ ರಹಿಸಿ ಹೆಲಿ ಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾಗ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿ, ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸು ವಲ್ಲಿ ಇಬ್ರಾಹಿಂ ರಹಿಸಿ ಅವರ ಕೊಡುಗೆಯನ್ನು ಶ್ಲಾಸಿದ್ದರು. ಅಷ್ಟೇ ಅಲ್ಲದೇ ಭಾರತದಲ್ಲಿ ಒಂದು ದಿನ ರಾಷ್ಟ್ರೀಯ ಶೋಕವನ್ನೂ ಘೋಷಿಸಲಾಗಿತ್ತು.

ವಿವಿಧ ಸಂದರ್ಭಗಳಲ್ಲಿ ಅಯತೊಲ್ಲ ಅಲಿ ಖಮೇನಿ ನೀಡಿದ ಹೇಳಿಕೆಗಳಿಂದಾಗಿಯೇ ಇರಾನ್ ಕುರಿತ ಭಾರತದ ನಿಲುವು ಬದಲಾಗಿದ್ದರೆ, ಇಬ್ರಾಹಿಂ ರಹಿಸಿ ಸಾವಿನನಂತರ ಒಂದು ದಿನದ ಶೋಕಾಚರಣೆಯನ್ನೂ ಭಾರತ ಮಾಡುತ್ತಿರಲಿಲ್ಲ.ಹೀಗಿರುವಾಗ ಭಾರತದ ಬದಲಾದ ನೀತಿಗೆ ಕಾರಣಗಳೇನು? ಕಳೆದೊಂದು ವರ್ಷದಲ್ಲಿ ಭಾರತ-ಇರಾನ್ ನಡುವೆ ಅಂಥದ್ದೇನು ನಡೆದಿದೆ? ಎಂಬುದು ಈಗಲೂ ರಹಸ್ಯವಾಗಿಯೇ ಇದೆ. ಬೇರೆ ಏನಾದರೂ ಕಾರಣಗಳು, ಸಂದರ್ಭಗಳು ಅಥವಾ ಬಾಹ್ಯ ಶಕ್ತಿಗಳು ಭಾರತ ತನ್ನ ನಿಲುವು ಬದಲಿಸುವುದಕ್ಕೆ ಕಾರಣಗಳಾಗಿವೆಯೇ ಎಂಬ ಪ್ರಶ್ನೆಗಳೂ ಇವೆ. ಈ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕು.

Tags:
error: Content is protected !!