Mysore
23
broken clouds
Light
Dark

ಈ ಅಕ್ರಮ ಕಟ್ಟಡ ತೆರವುಗೊಳಿಸುವವರಾರು?

ನಂಜನಗೂಡು: ಪರವಾನಗಿ ಇಲ್ಲದೆ, ಚರಂಡಿ ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಾಣ: ಆರೋಪ

ನಂಜನಗೂಡು: ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಅಕ್ರಮವಾಗಿದ್ದು, ಇದಕ್ಕೆ ಪರವಾನಗಿಯೇ ಇಲ್ಲ. ಆದರೂ ಕಟ್ಟಡ ನಿರ್ಮಾಣವಾಗುತ್ತಿದೆ. ಅದೂ ಅದೂ ಚರಂಡಿಯನ್ನು ಅತಿಕ್ರಮಿಸಿಕೊಂಡು ಕಟ್ಟಡದ ನಿರ್ಮಾಣ ಕಾರ್ಯ ಎಗ್ಗಿಲ್ಲದೆ ಸಾಗಿದೆ.

ಈ ವಿಚಾರವನ್ನು ನಗರಸಭೆಯ ಆಯುಕ್ತರು, ಇಂಜಿನಿಯರ್ ಸೇರಿದಂತೆ ಎಲ್ಲರೂ ಒಪ್ಪುತ್ತಾರೆ. ಆದರೆ, ಕಟ್ಟಡದ ನಿರ್ಮಾಣ ಮಾತ್ರ ನಿಲ್ಲುತ್ತಿಲ್ಲ. ಹಾಗಾದರೆ ಅಕ್ರಮ ಕಟ್ಟಡದ ವಿರುದ್ಧ ಕ್ರಮ ಯಾರಿಂದ? ಅದನ್ನು ತೆರವುಗೊಳಿಸುವವರಾರು? ಎಂಬ ಪ್ರಶ್ನೆ ನಂಜನಗೂಡು ನಗರಸಭೆಯ ವ್ಯಾಪ್ತಿಯ ನಾಗರಿಕರನ್ನು ಕಾಡತೊಡಗಿದೆ.

ರಾಷ್ಟ್ರಪತಿ ರಸ್ತೆಯ ಆರನೇ ತಿರುವಿನಲ್ಲಿ ಚರಂಡಿಯನ್ನು ಕೂಡ ಸೇರಿಸಿಕೊಂಡು 5 ಮಳಿಗೆಗಳ 2 ಅಂತಸ್ತಿನ ಕಟ್ಟಡದ ನಿರ್ಮಾಣ ಭರದಿಂದ ಸಾಗಿದೆ. ನಿಯಮದ ಪ್ರಕಾರ ನಗರಸಭೆಯ ವ್ಯಾಪ್ತಿಯಲ್ಲಿ ಮನೆ, ಮಳಿಗೆ ನಿರ್ಮಿಸುವುದಾದರೆ ಮುಡಾಕ್ಕೆ ಅರ್ಜಿ ಹಾಗೂ ನಕ್ಷೆ ನೀಡಿ ಅಲ್ಲಿಂದ ಅನುಮತಿ ತಂದು ನಗರಸಭೆಗೆ ನೀಡಿ ಇಲ್ಲಿನವರೂ ಕೂಡ ಒಪ್ಪಿಗೆ ನೀಡಿದ ನಂತರ ಕಟ್ಟಡದ ನಿರ್ಮಾಣ ಆರಂಭಿಸಬೇಕು.

ಆದರೆ ಇಲ್ಲಿರುವ ಶಿಥಿಲ ಹಳೆಯ ಕಟ್ಟಡವನ್ನು ತೆರವುಗೊಳಿಸಲು ಅರ್ಜಿ ಸಲ್ಲಿಸಿ ಅನುಮತಿ ಪಡೆದಿರುವುದನ್ನು ಬಿಟ್ಟರೆ ಕಟ್ಟಡ ನಿರ್ಮಿಸಲು ಮುಡಾದಿಂದಾಗಲಿ, ನಗರಸಭೆಯಿಂದಾಗಲಿ ಅನುಮತಿ ಪಡೆದೇ ಇಲ್ಲ, ಅರ್ಜಿಯನ್ನೂ ಸಲ್ಲಿಸಿಲ್ಲ ಎನ್ನುತ್ತಾರೆ ನಗರಸಭೆಯ ಇಂಜಿನಿಯರ್ ಕುಮಾರ್.

ಹಾಗಾದರೆ ಇದು ಅಕ್ರಮವೋ, ಸಕ್ರಮವೋ ಎಂದಾಗ ಇದು ಖಂಡಿತ ಅಕ್ರಮ ಕಟ್ಟಡ ಚರಂಡಿಯನ್ನು ಒತ್ತುವರಿ ಮಾಡಿ ಯಾವುದೇ ಅನುಮತಿ ಇಲ್ಲದೆ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯನ್ನು ನಿಲ್ಲಿಸಲು ನಾವು ಹಿಂದೆಯೇ ಸೂಚಿಸಿದ್ದೇವೆ. ಆದರೆ ಕಾಮಗಾರಿ ನಿಂತಿಲ್ಲ ಎನ್ನುತ್ತಾರೆ.

ಇದು ಅಕ್ರಮ ಕಟ್ಟಡ ಎಂದು ಗೊತ್ತಿದ್ದೂ ಕಟ್ಟಡ ಎರಡನೇ ಅಂತಸ್ತಿನವರೆಗೂ ನಿರ್ಮಾಣವಾಗಲು ಏನು ಕಾರಣ? ಎಂದು ಪ್ರಶ್ನಿಸಿದರೆ ಅವರಲ್ಲಿ ಉತ್ತರವೇ ಇಲ್ಲ.

ಸಾರ್ವಜನಿಕರು ಈ ವಾರ್ಡಿನ ಮಾಜಿ ಸದಸ್ಯರಾದ ಗಂಗಾಧರ್ ಅವರಿಗೆ ಈ ಅಕ್ರಮ ಕಟ್ಟಡದ ನಿರ್ಮಾಣದ ಕುರಿತು 4 ತಿಂಗಳುಗಳ ಹಿಂದೆಯೇ ಕಟ್ಟಡದ ಆರಂಭದ ಹಂತದಲ್ಲಿ ವಿಚಾರ ತಿಳಿಸಿದ್ದರು. ಆಗಲೇ ಇಂಜಿನಿಯರ್ ಕುಮಾರ್ ಅವರನ್ನು ಕರೆಸಿ ಕಾಮಗಾರಿ ನಿಲ್ಲಿಸಿ ಎಂದು ಸೂಚಿಸಲಾಗಿತ್ತು ಎಂದು ನಗರಸಭೆಯ ಆಯುಕ್ತನಂಜುಂಡಸ್ವಾಮಿ ತಿಳಿಸಿದರು.

ಒಟ್ಟಿನಲ್ಲಿ ಈ ಅಕ್ರಮ ಕಟ್ಟಡ ತೆರವುಗೊಳಿಸುವ ಜವಾಬ್ದಾರಿ ಯಾರದ್ದು? ಎಂಬ ಸಾರ್ವಜನಿಕರ ಪ್ರಶ್ನೆಗೆ ಇಲ್ಲಿನ ಆಡಳಿತಾಧಿಕಾರಿಗಳಾಗಿದ್ದ ಜಿಲ್ಲಾಧಿಕಾರಿಗಳೇ ಉತ್ತರ ನೀಡಬೇಕು ಎಂಬುದು ನಂಜನಗೂಡು ನಾಗರಿಕರ ಮನವಿಯಾಗಿದೆ.

ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಿರುವುದು ಗಮನಕ್ಕೆ ಬಂದಿದೆ. ಈ ಕಟ್ಟಡವನ್ನು ಮುಲಾಜಿಲ್ಲದೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇದು ಅಕ್ರಮ ಕಟ್ಟಡ ಕಟ್ಟುವವರಿಗೆ ಎಚ್ಚರಿಕೆ ಘಂಟೆಯಾಗಲಿದೆ.

-ಶ್ರೀಕಂಠ, ನಗರಸಭೆ ಅಧ್ಯಕ್ಷ

ಯಾವುದೇ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಅಕ್ರಮವಾಗಿ ನಿರ್ಮಿಸ ಲಾಗುತ್ತಿರುವ ಕಟ್ಟಡವನ್ನು ತೆರವುಗೊಳಿಸಲು ಇಂಜಿನಿಯರ್ ಕುಮಾರ್ ಅವರಿಗೆ ಸೂಚಿಸಿದ್ದೇನೆ. ಈಗಲೂ ಅದನ್ನು ಪೂರ್ಣ ವಾಗಿ ತೆರವುಗೊಳಿಸುವಂತೆ ಆದೇಶಿಸಿದ್ದೇನೆ.

-ನಂಜುಂಡಸ್ವಾಮಿ, ಆಯುಕ್ತ, ನಗರಸಭೆ

ಕಾನೂನು ಬಾಹಿರವಾಗಿ ಚರಂಡಿಗಳನ್ನು ಅತಿಕ್ರಮಿಸಿಕೊಂಡು ಯಾವುದೇ ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣವಾಗುತ್ತಿರು ವುದು ನಿಜ. ಆ ಕಾಮಗಾರಿಯನ್ನು ಸ್ಥಗಿತಗೊ ಳಿಸಲು ಇಂದೇ ಸೂಚಿಸಲಾಗುವುದು.

-ಕುಮಾರ್‌, ಇಂಜಿನಿಯರ್‌, ನಗರಸಭೆ

ನಾಲ್ಕು ತಿಂಗಳ ಹಿಂದೆ ಕಟ್ಟಡ ಆರಂಭಿಸಿದಾಗಲೇ ನಗರಾಯುಕ್ತರಿಗೆ ಈ ಅಕ್ರಮ ಕಟ್ಟಡದ ಕುರಿತು ಮಾಹಿತಿ ನೀಡಿದ್ದೆ. ಆದರೆ ಈವರೆಗೂ ಕ್ರಮ ಜರುಗಿ ಸಿಲ್ಲ. ಕಾಮಗಾರಿ ನಿಂತಿಲ್ಲ.

-ಗಂಗಾಧರ್, ವಾರ್ಡಿನ ಮಾಜಿ ಸದಸ್ಯ ನಗರಸಭೆಯ ಹಾಲಿ ಸದಸ್ಯ