Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮುಸುಕಿನ ಜೋಳದ ಬೆಳೆಗೆ ಬಿಳಿ ಸುಳಿ ರೋಗ ಬಾಧೆ

ಮಂಜು ಕೋಟೆ

ಕೋಟೆ, ಸರಗೂರು ಭಾಗದ ರೈತರಲ್ಲಿ ಆತಂಕ; ಅಧಿಕಾರಿಗಳಿಂದ ನಿಯಂತ್ರಣ ಸಲ

ಎಚ್.ಡಿ.ಕೋಟೆ: ರೈತರ ಆರ್ಥಿಕ ಬೆಳೆಯಾದ ಮುಸುಕಿನಜೋಳದ ಬೆಳೆಗೆ ಬಿಳಿ ಸುಳಿ ರೋಗ ಕಾಣಿಸಿಕೊಂಡು ಬೆಳೆ ನಾಶವಾಗುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ಈ ಬಾರಿ ರೈತರು ಬೆಳೆದ ಮುಸುಕಿನ ಜೋಳದ ಬೆಳೆಗೆ ಕೀಟ ಮತ್ತು ರೋಗ ಬಾಧೆ ಕಾಣಿಸಿಕೊಂಡು ರೈತರು ಔಷಧಿ ಸಿಂಪಡಣೆ ಮಾಡಲು ಮುಂದಾಗಿದ್ದಾರೆ.

ಹಂಪಾಪುರ, ಬಿ.ಮಟಕೆರೆ, ಅಂತರಸಂತೆ, ಸರಗೂರು, ಎಚ್.ಡಿ.ಕೋಟೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಹಾಗೂ ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜಗಳನ್ನು ಪಡೆದಿದ್ದ ರೈತರು ಕೋಟೆ ತಾಲ್ಲೂಕಿನಲ್ಲಿ ೧೧,೫೦೦ ಹೆಕ್ಟೇರ್, ಸರಗೂರು ತಾಲ್ಲೂಕಿನಲ್ಲಿ ೯,೮೫೦ ಹೆಕ್ಟೇರ್ ಸೇರಿದಂತೆ ಒಟ್ಟು ೨೧,೩೫೦ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆದಿದ್ದಾರೆ.

ಬಿತ್ತನೆ ಮಾಡಿದ ಒಂದು ತಿಂಗಳ ಒಳಗಾಗಿ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ರೋಗ ತಗುಲಿದ ಗಿಡಗಳ ಎಲೆಗಳ ಕೆಳಗೆ ಹಾಗೂ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಶಿಲೀಂಧ್ರದ ಪುಡಿಗಳಂತೆ ಕಾಣಿಸಿಕೊಂಡ ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಗಿಡದ ಬೆಳವಣಿಗೆ ಕುಗ್ಗಿ ೮೦-೯೦ರಷ್ಟು ಇಳುವರಿ ಕುಂಠಿತವಾಗುತ್ತಿದೆ.

ಕೀಟಬಾಧೆಯಿಂದ ಕಂಗಾಲಾಗಿರುವ ನಾಗನಹಳ್ಳಿ, ಹೆಗಡಾಪುರ, ಹಿರೇಹಳ್ಳಿ, ಮೇಟಿಕುಪ್ಪೆ, ಬೆಳಗನಹಳ್ಳಿ, ಹೊಸತೊರವಳ್ಳಿ, ಕೊಲ್ಲೇಗೌಡನಹಳ್ಳಿ, ಗುಜ್ಜಪ್ಪನಹುಂಡಿ, ಚಾಕಹಳ್ಳಿ, ಸಿದ್ದರಾಮನಹುಂಡಿ, ರಾಮೇನಹಳ್ಳಿ, ಕಂದಲಿಕೆ ಸೇರಿದಂತೆ ಹಲವು ಗ್ರಾಮಗಳ ರೈತರು ಪ್ರಸ್ತುತ ಬೆಳೆದಿರುವ ಮೆಕ್ಕೆಜೋಳದ ಬೆಳೆಯನ್ನು ಬೇರು ಸಮೇತ ನಾಶ ಮಾಡಿ, ರಾಗಿ, ದ್ವಿದಳಧಾನ್ಯ ಬೆಳೆಗಳಾದ ಅಲಸಂದೆ, ಅವರೆ ಬೆಳೆಗಳನ್ನು ಬಿತ್ತನೆ ಮಾಡಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ತಾಲ್ಲೂಕಿನ ರೈತರಿಗೆ ಪ್ರತಿ ಸಾಲಿನಲ್ಲಿ ಬೆಳೆಗಳಿಗೆ ರೋಗ ಬಾಧೆ, ಕೀಟಬಾಧೆ ಕಂಡುಬಂದು ಕಡಿಮೆ ಇಳುವರಿ ಬರುವುದು, ಬೆಳೆ ಚೆನ್ನಾಗಿ ಬಂದರೂ ಉತ್ತಮ ಬೆಲೆ ಸಿಗದೇ ಇರುವುದು ಕಂಗಾಲಾಗಿಸಿದೆ.

” ರೈತರು ಮೆಕ್ಕೆಜೋಳ ಬೆಳೆದು ಕಟಾವಾದ ಬಳಿಕ ಜಮೀನಿನಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಬೇಕು. ಜೋಳ ಬೆಳೆದ ಭೂಮಿಯಲ್ಲಿ ನೀರು ಹೆಚ್ಚಾಗಿ ನಿಲ್ಲದಂತೆ ನೋಡಿಕೊಳ್ಳಬೇಕು. ಗಿಡಗಳಿಗೆ ರೋಗ ಬರುವ ಮುನ್ಸೂಚನೆ ತಿಳಿದ ನಂತರ ರೋಗ ಬಂದ ಗಿಡಗಳನ್ನು ಕಿತ್ತು ಹಾಕಬೇಕು. ಮೆಕ್ಕೆಜೋಳ ಬಿತ್ತನೆ ಮಾಡಿದ ೨೦ ರಿಂದ ೨೫ ದಿನಗಳ ನಂತರ ಮೆಟಾಲಾಕ್ಸಿ ೪ ಡಬ್ಲ್ಯುಪಿ ಜೊತೆಗೆ ಮ್ಯಾಂಕೊಜೆಬ್ ೬೪ ಡಬ್ಲ್ಯುಪಿ ಎರಡು ಗ್ರಾಂ ಮಿಶ್ರಣವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿದರೆ ರೋಗ ಮತ್ತು ಕೀಟಬಾಧೆಯನ್ನು ನಿಯಂತ್ರಿಸಬಹುದು.”

-ಜಯರಾಮಯ್ಯ, ಸಹಾಯಕ ಕೃಷಿ ನಿರ್ದೇಶಕರು, ಎಚ್.ಡಿ.ಕೋಟೆ

” ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಕಳೆದ ವಾರದಿಂದ ರೋಗ ಮತ್ತು ಕೀಟಬಾಧೆ ಕಾಣಿಸಿಕೊಂಡಿದ್ದು ಕಂಗಳಾಗಿದ್ದೇವೆ. ಅಂಗಡಿಗಳಲ್ಲಿ ಔಷಧಿಗಳನ್ನು ತಂದು ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾವಿರಾರು ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಮುಂದೆ ಏನಾಗುತ್ತದೆಯೋ ಎಂಬ ಆತಂಕ ಉಂಟಾಗಿದೆ.”

-ಚಂದ್ರು, ರೈತ, ಹೆಗಡಾಪುರ

Tags:
error: Content is protected !!