ಇತ್ತೀಚೆಗೆ ಮೈಸೂರಿನ ವಿವೇಕಾನಂದನಗರ ವೃತ್ತದ ಬಳಿ ಸಾರಿಗೆ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಸಂಚಾರ ಪೊಲೀಸರು ಇಲ್ಲದ ಕಡೆ ಅಥವಾ ಸಿಸಿ ಕ್ಯಾಮೆರಾ ಇಲ್ಲದ ಕಡೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡೆಗಣಿಸುತ್ತಾರೆ. ಇದರಿಂದ ಅಪಾಯ ಉಂಟಾಗಬಹುದು ಎಂಬ ಅರಿವೂ ಅವರಿಗಿರುವುದಿಲ್ಲ. ದಂಡ ಕಟ್ಟಬೇಕಾಗುತ್ತದೆ ಎಂದು ಹೆಲ್ಮೆಟ್ ಧರಿಸುವುದಕ್ಕಿಂತ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸುವುದು ಒಳ್ಳೆಯದು. ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡು ಹೋಗುವಾಗ, ಮನೆಯ ಸಮೀಪದ ಅಂಗಡಿಗಳಿಗೆ ತೆರಳುವಾಗ ಹೆಲ್ಮೆಟ್ ಧರಿಸುವುದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು. ಹಾಗೆಯೇ ವಾಹನ ಚಾಲಕರು ತಮ್ಮನ್ನು ನಂಬಿರುವ, ಪ್ರೀತಿಸುವ ಬಂಧು-ಬಳಗಕ್ಕೋಸ್ಕರ ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ಸಂಚಾರ ನಿಯಮವನ್ನು ಪ್ರತಿಯೊಬ್ಬರೂ ಪಾಲಿಸಬೇಕು.
– ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು





