Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ಹುಲಿ ದಾಳಿಯಿಂದ ಬಚಾವಾಗಲು ಮುಖವಾಡದ ಮೊರೆ!

ಅರಣ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ; ಕಾಡಂಚಿನ ಜನರಿಗೆ ಮಾಸ್ಕ್ ವಿತರಣೆ

ಪಶ್ಚಿಮ ಬಂಗಳಾದ ಸುಂದರಬನ ಮಾದರಿ ಮಾಸ್ಕ್ ವ್ಯವಸ್ಥೆ

ಈಗಾಗಲೇ ಕಾಡಂಚಿನ ನಿವಾಸಿಗಳಿಗೆ ೫ ಸಾವಿರ ಮಾಸ್ಕ್ ವಿತರಣೆ

ಇನ್ನೂ ೫ ಸಾವಿರ ಮಾಸ್ಕ್ ಮುದ್ರಣ ಹಂತದಲ್ಲಿ

ಮೈಸೂರು: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಡಂಚಿನ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಇದೀಗ ಜನರಿಗೆ ಮಾಸ್ಕ್ ವಿತರಣೆ ಕಾರ್ಯ ನಡೆಯುತ್ತಿದೆ.

ಬಂಡೀಪುರ ಹುಲಿ ರಕ್ಷಿತಾರಣ್ಯ ವ್ಯಾಪ್ತಿಗೆ ಬರುವ ಸರಗೂರು, ಹೆಡಿಯಾಲ ಮುಂತಾದ ಕಡೆಗಳಲ್ಲಿ ಹಲವು ತಿಂಗಳುಗಳಿಂದ ಮಾನವ ಹಾಗೂ ಜಾನುವಾರುಗಳ ಮೇಲೆ ಹುಲಿಗಳ ದಾಳಿ ನಿರಂತರವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕಾಡಂಚಿನ ಪ್ರದೇಶದಲ್ಲಿರುವ ಗ್ರಾಮಗಳ ಜನರಿಗೆ ಮುಂಜಾಗ್ರತಾ ದೃಷ್ಟಿಯಿಂದ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಇದರ ಭಾಗವಾಗಿ ಮಾಸ್ಕ್ ವಿತರಣೆಯನ್ನೂ ಮಾಡ ಲಾಗುತ್ತಿದೆ.

ಹುಲಿಯ ವರ್ತನೆಯನ್ನು ತಿಳಿದುಕೊಂಡಿರುವ ತಜ್ಞರ ಅಭಿಪ್ರಾಯದ ಪ್ರಕಾರ, ಹುಲಿಯು ಮನುಷ್ಯ ಎದುರು ನಿಂತಿರುವಾಗ ದಾಳಿ ಮಾಡುವುದಿಲ್ಲ ಹಾಗೂ ಎತ್ತರದಲ್ಲಿ ಇದ್ದರೂ ಹತ್ತಿರ ಬರುವುದಿಲ್ಲ. ಮನುಷ್ಯರು ನಡೆದು ಹೋಗು ತ್ತಿದ್ದಾಗ, ಜಮೀನುಗಳಲ್ಲಿ ಕುಳಿತುಕೊಂಡು ಕೆಲಸ ಮಾಡುವಾಗ ಹುಲಿ ಆ ಜಾಗಕ್ಕೆ ಬಂದರೆ ಹಿಂಬದಿಯಿಂದ ದಾಳಿ ಮಾಡುತ್ತದೆ.

ಹೀಗಾಗಿ ಮನುಷ್ಯನ ಮುಖವನ್ನೇ ಹೋಲುವ ಮುಖವಾಡ ವನ್ನು ತಲೆಯಹಿಂಬದಿಗೆ ಧರಿಸಿಕೊಂಡರೆ ದಾಳಿಯಿಂದ ಬಚಾವಾಗಬಹುದು ಎನ್ನ ಲಾಗಿದೆ. ಈ ಹಿನ್ನೆಲೆಯಲ್ಲಿ ಕಾಡಂಚಿನ ರೈತರಿಗೆ, ಜಮೀನುಗಳಲ್ಲಿ ಕೆಲಸ ಮಾಡು ವವರೂ ಸೇರಿದಂತೆ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ಈ ಮಾಸ್ಕ್ ಬಳಸಿಕೊಂಡು ರೈತರು ತಮ್ಮ ಜಮೀನುಗಳಲ್ಲಿ ದೈನಂದಿನ ಕೆಲಸ ಮಾಡಬಹುದಾಗಿದೆ.

ಈಗಾಗಲೇ ೫ ಸಾವಿರ ಮಾಸ್ಕ್ ವಿತರಣೆ ಮಾಡಲಾಗಿದೆ. ಇನ್ನೂ ಐದು ಸಾವಿರ ಮಾಸ್ಕ್ ಮುದ್ರಣ ಕಾರ್ಯ ನಡೆಯುತ್ತಿದೆ. ನಿತ್ಯವೂ ಅರಣ್ಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿಜನರಿಗೆ ಅರಿವು ಮೂಡಿಸುವುದರ ಜೊತೆಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ, ಬೆಳಗಿನ ಜಾವ ಹಾಗೂ ರಾತ್ರಿ ಸಮಯದಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚಾಗಿ ಒಬ್ಬರೇ ಓಡಾಡಬಾರದು. ಸಾಧ್ಯವಾದಷ್ಟು ಗುಂಪು ಗುಂಪಾಗಿ ಸಂಚರಿಸುವುದರಿಂದ ಅಪಾಯದ ಪ್ರಮಾಣವನ್ನು ನಿಯಂತ್ರಿಸಬಹುದು ಎಂದು ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ.

” ಹುಲಿ ಮನುಷ್ಯ ಎದುರಿಗೆ ನಿಂತಿರುವಾಗ ದಾಳಿ ಮಾಡುವುದಿಲ್ಲ ಹಾಗೂ ಎತ್ತರದಲ್ಲಿ ಇದ್ದರೂ ಹತ್ತಿರ ಬರುವುದಿಲ್ಲ. ಇದು ಪಶ್ಚಿಮ ಬಂಗಾಳದಲ್ಲಿ ವರ್ಕೌಟ್ ಆಗಿದೆ. ಹೀಗಾಗಿ ಸಫಾರಿ ಸಿಬ್ಬಂದಿಯನ್ನು ಬಳಸಿಕೊಂಡು ಮಾಸ್ಕ್ ವಿತರಿಸಲಾಗುತ್ತಿದೆ. ಕಾಡು ಪ್ರಾಣಿಗಳು ಊರಿಗೆ ಬಂದಿವೆ ಎನ್ನುವ ಮಾಹಿತಿ ಗೊತ್ತಾದ ತಕ್ಷಣ ಸಹಾಯವಾಣಿಗೆ ಕರೆ ಮಾಡುವಂತೆ ಜನರಿಗೆ ಮನವರಿಕೆ ಮಾಡಲಾಗುತ್ತಿದೆ.”

– ಎಸ್.ಪ್ರಭಾಕರನ್, ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ

ಸಫಾರಿ ಸಿಬ್ಬಂದಿಗಳಿಂದ ಮಾಸ್ಕ್‌ ಹಂಚಿಕೆ

ಮೈಸೂರು: ಹುಲಿಗಳ ದಾಳಿಯಿಂದಾಗಿ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ನಿತ್ಯ ನಡೆಯುತ್ತಿದ್ದ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ. ಈ ಸಫಾರಿ ಕೆಲಸಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ, ಪ್ರಕೃತಿ ಮಾರ್ಗದರ್ಶಕರು, ಚಾಲಕರನ್ನು ಈಗ ಮಾಸ್ಕ್ ವಿತರಣೆ, ಜಾಗೃತಿ ಕಾರ್ಯಕ್ರಮ ಮತ್ತು ಗ್ರಾಮಗಳಲ್ಲಿ ಸಭೆಯನ್ನು ಆಯೋಜಿಸಿ ತಿಳಿವಳಿಕೆ ನೀಡುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಪಶ್ಚಿಮ ಬಂಗಳಾದ ಸುಂದರಬನ ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ಗ್ರಾಮಗಳು ದ್ವೀಪದಂತೆ ಇವೆ. ಇಲ್ಲಿ ಹುಲಿ ಯಾವ ಕಡೆಯಿಂದ ಬಂದು ದಾಳಿ ಮಾಡುತ್ತದೆ ಎನ್ನುವುದನ್ನು ಊಹಿಸುವುದೂ ಕಷ್ಟ. ಅಲ್ಲಿ ಈ ರೀತಿಯ ಮಾಸ್ಕ್ ಧರಿಸಿಕೊಂಡು ಜನರು ಓಡಾಡುತ್ತಾರೆ ಎಂಬುದನ್ನು ಅರಿತುಕೊಂಡು ನಮ್ಮ ರಾಜ್ಯದಲ್ಲೂ ಅರಣ್ಯದಂಚಿನ ಗ್ರಾಮಗಳ ಜನರಿಗೂ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ.

Tags:
error: Content is protected !!