ದಂಪತಿ ಜೀವನ್ಮರಣದ ಹೋರಾಟ
ಕೆ. ಆರ್. ಪೇಟೆ: ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಕೆ. ಆರ್. ಪೇಟೆ ತಾಲ್ಲೂಕಿನ ಕತ್ತರಘಟ್ಟ ಮೂಲದ ಮಹಿಳೆಯೊಬ್ಬರ ಅತ್ತೆ ಮತ್ತು ಪುತ್ರ ಮೃತಪಟ್ಟಿದ್ದು, ಸ್ವತಃ ಮಹಿಳೆ, ಆಕೆಯ ಪತಿ, ಮಾವ ತೀವ್ರವಾಗಿ ಗಾಯಗೊಂಡಿದ್ದಾರೆ.
ಕತ್ತರಘಟ್ಟ ಗ್ರಾಮದ ಜಗದೀಶ್ ಮತ್ತು ಕುಳ್ಳಮ್ಮ ಅವರ ಪುತ್ರಿ ಜಾನ್ಸಿರಾಣಿ ಅವರನ್ನು ಮೂಲತಃ ನಂಜನಗೂಡು ತಾಲ್ಲೂಕಿನ ಸರಗೂರು ಗ್ರಾಮದ ಅನಿಲ್‌ಕುಮಾರ್‌ರವರಿಗೆ ೨೦೨೦ರಲ್ಲಿ ವಿವಾಹ ಮಾಡಕೊಡಲಾಗಿತ್ತು. ಪ್ರಸ್ತುತ ಕೇರಳದ ಮುಂಡಕ್ಕೈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರ ಅತ್ತೆ ಲೀಲಾವತಿ (೫೫) ಮತ್ತು ಪುತ್ರ ನಿಹಾಲ್ (೨) ದುರಂತದಲ್ಲಿ ಸಾವಿಗೀಡಾಗಿದ್ದಾರೆ.
ಕೇರಳದ ಮುಂಡಕ್ಕೈ ಗ್ರಾಮದಲ್ಲಿ ವಾಸವಿದ್ದ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಘಟನೆಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಝಾನ್ಸಿರಾಣಿ ಮತ್ತು ಅವರ ಗಂಡ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು, ಹೆಚ್ಚಿನ ಚಿಕಿತ್ಸೆಗಾಗಿ ಕೇರಳದ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭೀಕರ ದುರಂತದಿಂದ ತಮ್ಮ ಗ್ರಾಮದ ಮಗಳು ಮತ್ತು ಮೊಮ್ಮಗುವನ್ನು ಕಳೆದುಕೊಂಡಿರುವ ಕತ್ತರಘಟ್ಟ ಗ್ರಾಮದಲ್ಲಿ ದುಃಖ ಮಡುಗಟ್ಟಿತು.
ಶಾಸಕ ಮಂಜು, ತಹಶೀಲ್ದಾರ್ ಭೇಟಿ
ದಂಪತಿ ಜೀವನ್ಮರಣದ ಹೋರಾಟ ಶಾಸಕ ಮಂಜು, ತಹಸಿಲ್ದಾರ್ ಭೇಟಿ ಕೇರಳ ಭೂ ಕುಸಿತ ದುರಂತದಲ್ಲಿ ಸಾವಿಗೀಡಾಗಿರುವ ಲೀಲಾವತಿ ಅವರ ತವರು ಮನೆಗೆ ಶಾಸಕ ಎಚ್. ಟಿ. ಮಂಜು, ಹಾಗೂ ತಹಸಿಲ್ದಾರ್ ನಿಸರ್ಗ ಪ್ರಿಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೇ, ಕೇರಳದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಜಾನ್ಸಿರಾಣಿ ಮತ್ತು ಅನಿಲ್ ಕುಮಾರ್ ದಂಪತಿ ಬಗ್ಗೆ ಮಾಹಿತಿ ಪಡೆದರು.