ದಾ.ರಾ.ಮಹೇಶ್
ಕೆಜಿಗೆ ೧೦ ರೂ. ಇದ್ದುದು ಈಗ ೩ ರೂ.ಗೆ ಕುಸಿತ; ಖರೀದಿಗೆ ಬಾರದ ಆಂಧ್ರಪ್ರದೇಶದ ಮಧ್ಯವರ್ತಿಗಳು
ವೀರನಹೊಸಹಳ್ಳಿ: ಹನಗೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಲ್ಲಂಗಡಿ ಬೆಳೆದ ರೈತರು ಬೆಲೆ ಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೆರೆಯ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕಲ್ಲಂಗಡಿಯನ್ನು ಕೇಳುವವರೇ ಇಲ್ಲದಂತಾಗಿದೆ. ಇದರಿಂದ ಬಹುತೇಕ ಬೆಳೆಗಾರರು ಕಲ್ಲಂಗಡಿ ಹಣ್ಣು ಕಟಾವು ಮಾಡದೇ ಜಮೀನಿನಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆ.
ಫೆಬ್ರವರಿಯಲ್ಲಿ ನಾಟಿ ಮಾಡಿದ್ದ ಕಲ್ಲಂಗಡಿ ಈಗ ಕಟಾವಿಗೆ ಬಂದಿದೆ. ಪ್ರತಿ ಬಾರಿ ಒಂದು ಕೆಜಿಗೆ ೧೦ ರೂ.ನಂತೆ ಮಾರಾಟ ಆಗುತ್ತಿತ್ತು. ಎಲ್ಲೆಡೆ ಇಳುವರಿ ಚೆನ್ನಾಗಿ ಬಂದಿದೆ. ಆದರೆ, ಈಗ ಪ್ರತಿ ಕೆಜಿಗೆ ಕೇವಲ ೩ ರೂ.ನಂತೆ ಮಾರಾಟ ಆಗುತ್ತಿದೆ. ಇದರಿಂದ ಕಲ್ಲಂಗಡಿ ಬೆಳೆಗಾರರು ನಷ್ಟ ಅನುಭ ವಿಸುತ್ತಿದ್ದಾರೆ ಎಂದು ರೈತ ಕೃಷ್ಣೇಗೌಡ ಅಲವತ್ತುಕೊಂಡರು.
ಇಲ್ಲಿಯ ರೈತ ಮಂಜು ತಮ್ಮ ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಉತ್ತಮ ಇಳುವರಿ ಕೂಡ ಬಂದಿದೆ. ಈ ಬಾರಿ ದುಪ್ಪಟ್ಟು ಪ್ರಮಾಣದಲ್ಲಿ ಲಾಭ ಪಡೆಯಬಹುದು ಎಂಬ ಅವರ ನಿರೀಕ್ಷೆಗೆ ಬೆಲೆ ಕುಸಿತ ತಣ್ಣೀರು ಎರಚಿದೆ. ಉತ್ತಮ ಬೆಲೆ ಸಿಕ್ಕಿದ್ದರೆ ಕನಿಷ್ಠ ೩ ಲಕ್ಷ ರೂ. ಆದಾಯ ಆಗುತ್ತಿತ್ತು. ಖರ್ಚು ಕಳೆದು ಲಾಭವೂ ಸಿಗುತ್ತಿತ್ತು. ಆದರೆ ಈಗ ನಯಾಪೈಸೆ ಸಿಕ್ಕಿಲ್ಲ. ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ರೈತ ಮಂಜು ಒತ್ತಾಯಿಸಿದರು.
ಜಿಲ್ಲೆಯಾದ್ಯಂತ ಕಲ್ಲಂಗಡಿ ಬೆಳೆದ ರೈತರು ಸಾಮಾನ್ಯವಾಗಿ ಹೈದರಾಬಾದ್ ಮಾರುಕಟ್ಟೆಗೆ ಕಳುಹಿಸುತ್ತಾರೆ. ಆದರೆ, ಹೈದರಾಬಾದ್‌ನಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಹಣ್ಣು ಖರೀದಿಸಲು ಮಧ್ಯವರ್ತಿಗಳು ಮುಂದೆ ಬರುತ್ತಿಲ್ಲ ಎಂದು ರೈತ ರಾಜೇಗೌಡ ಬೇಸರದಿಂದ ಹೇಳುತ್ತಾರೆ.
ತೋಟಗಾರಿಕೆ ಇಲಾಖೆ ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕಲ್ಲಂಗಡಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.
” ಕಲ್ಲಂಗಡಿ ಹಣ್ಣಿನ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ಘೋಷಿಸುವ ಮೂಲಕ ರೈತರಿಗೆ ನೆರವಾಗಬೇಕು.”
-ಸುರೇಶ್, ಕಲ್ಲಂಗಡಿ ಬೆಳೆಗಾರ
” ಬೆಳೆ ಬೆಳೆಯುವ ಪ್ರದೇಶ ವಿಸ್ತಾರವಾಗಿದೆ. ಆದರೆ, ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವರು ಹಣ್ಣಿಗೆ ಇಂಜೆಕ್ಷನ್‌ನಿಂದ ಬಣ್ಣ ಬರಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿಸಿದ್ದರಿಂದ ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ. ಇದು ಬೆಲೆ ಕುಸಿತಕ್ಕೆ ಕಾರಣವಾಗಿದೆ.”
–ನಾಗರಾಜ್, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ