Mysore
19
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ಸುವರ್ಣಾವತಿಯಲ್ಲಿ ಇಂದಿನಿಂದ ಜಲಸಾಹಸ ಕ್ರೀಡೋತ್ಸವ

ರಿವರ್ ರಾಫ್ಟಿಂಗ್, ಮೋಟಾರ್ ಬೋಟ್, ಬನಾನಾ ರೈಡ್, ಕಯಾಕಿಂಗ್, ಜೆಟ್ ಸ್ಕೀ ಆಯೋಜನೆ

ಚಾಮರಾಜನಗರ: ಯುವಜನರಲ್ಲಿ ಸಾಹಸ, ಶೌರ್ಯ ಪ್ರವೃತ್ತಿಯನ್ನು ಬೆಳೆಸುವ ದಿಸೆಯಲ್ಲಿ ತಾಲ್ಲೂಕಿನ ಸುವರ್ಣಾವತಿ ಜಲಾಶಯದಲ್ಲಿ ಜಲ ಸಾಹಸ ಕ್ರೀಡೋತ್ಸವವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಫೆ.೫, ೬ರಂದು ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ತಾಲ್ಲೂಕಿನ ಅಟ್ಟು ಗೂಳಿಪುರ ಬಳಿಯ ಸುವರ್ಣಾವತಿ ಜಲಾಶಯದಲ್ಲಿ ಆಯೋಜಿಸಲಾಗಿದೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕ, ಯುವತಿಯರು, ಸಾರ್ವಜನಿಕರ ಸಹಿತ ೩೦ವರ್ಷ ಒಳಪಟ್ಟವರಿಗೆ ಏರ್ಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ವಯೋಮಾನದವರೂ ಭಾಗವಹಿಸಬಹುದು. ಭಾಗವಹಿಸುವ ಸಂಬಂಧ ಈಗಾಗಲೇ ಅರ್ಜಿ ಆಹ್ವಾನಿಸಲಾಗಿತ್ತು. ನೇರವಾಗಿಯೂ ಆಸಕ್ತರು ಭಾಗವಹಿಸಬಹುದಾಗಿದ್ದು ನಿತ್ಯ ೩೦೦-೪೦೦ ಜನರಂತೆ ಎರಡೂ ದಿನ ಕನಿಷ್ಠ

೭೦೦ಮಂದಿ ಭಾಗವಹಿಸಬಹುದು ಎಂದು ಯುವ ಜನಸೇವೆ ಕ್ರೀಡಾ ಇಲಾಖೆ ನಿರೀಕ್ಷೆ ಹೊಂದಿದೆ. ವಾಟರ್ ಫೋಬಿಯಾ, ಆರೋಗ್ಯ ಸಮಸ್ಯೆ ಇರುವವರನ್ನು ಪರಿಗಣಿಸುವುದಿಲ್ಲ. ಪರಿಶೀಲನೆಗಾಗಿ ತಜ್ಞರ ತಂಡವನ್ನು ನಿಯೋಜಿಸಲಾಗಿದೆ. ರಿವರ್ ರಾಪ್ಟಿಂಗ್, ಮೋಟಾರ್ ಬೋಟ್, ಬನಾನ ಬೋಟ್ ರೈಡ್, ಕಯಾಕಿಂಗ್, ಜೆಟ್‌ಸ್ಕೀ ಸಾಹಸ ಕ್ರೀಡೆಗಳನ್ನು ಯುವಕ, ಯುವತಿಯರನ್ನು ಮುಖ್ಯವಾಗಿಟ್ಟು ಕೊಂಡು ನಡೆಸಲಾಗುತ್ತಿದ್ದು, ಇದಕ್ಕೆ ಬೇಕಾದ ೧೫ ತಂತ್ರಜ್ಞರು ಯಂತ್ರಗಳು , ಇನ್ನಿತರ ಪರಿಕರಗಳು ಸಜ್ಜುಗೊಂಡಿವೆ.

ಈ ರೀತಿಯ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವವರು ದೈಹಿಕವಾಗಿ ಫಿಟ್ ಆಗಿ ಇರಬೇಕಾಗುತ್ತದೆ. ಆದಷ್ಟೂ ಅಂಥವರನ್ನೇ ಪರಿಗಣಿಸಲಾಗುತ್ತದೆ. ಸಾಹಸ ಕ್ರೀಡೆಯಲ್ಲಿ ಭಾಗವಹಿಸುವುದು ತರಬೇತಿ ಪಡೆದಂತೆಯೇ ಸರಿ. ಉತ್ತಮ ಸಾಮರ್ಥ್ಯ ತೋರಿದವರು ಭವಿಷ್ಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕೂ ಈ ಕ್ರೀಡೆ ನೆರವಾಗುತ್ತದೆ. ಬಹಳ ಮುಖ್ಯವಾಗಿ ಇದರಲ್ಲಿ ಭಾಗವಹಿಸುವುದರಿಂದ ಧೈರ್ಯ,ಸಾಹಸ ಪ್ರವೃತ್ತಿ ತನಗೆ ತಾನೇ ಬೆಳೆಯುತ್ತದೆ. ಒಬ್ಬರನ್ನು ನೋಡಿ ಇನ್ನೊಬ್ಬರು ಮುಂದೆ ಬರುತ್ತಾರೆ. ಯುವ ಜನರಲ್ಲಿ ಈ ಮೂಲಕ ಮಾನಸಿಕ ಸ್ಥೈರ್ಯ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

ಕಾಳಿ ನದಿ, ದುಬಾರೆ, ಸಾಗರ ಇತ್ಯಾದಿ ಸ್ಥಳಗಳಲ್ಲಿ ಬೋಟಿಂಗ್ ಸೇರಿದಂತೆ ವಿವಿಧ ಜಲಸಾಹಸ ಕ್ರೀಡೆಗಳು ನಿರಂತರವಾಗಿ ನಡೆಯುವಂತೆ ನಮ್ಮಲ್ಲಿಯೂ ಸುವರ್ಣಾವತಿ ಮತ್ತು ಹನೂರಿನ ಗುಂಡಾಲ್ ಜಲಾಶಯಗಳಲ್ಲಿ ಇದನ್ನು ಪರಿಚಯಿಸಬಹುದಾಗಿದೆ. ಯುವ ಜನರು ಹೇಗೆ ಸ್ಪಂದಿಸುತ್ತಾರೆ, ಆಸಕ್ತಿ ತೋರುತ್ತಾರೆ ಎಂಬುದರ ಮೇಲೆ ಭವಿಷ್ಯದಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ೧೦ರಿಂದ ಸಂಜೆ ೫.೩೦ರ ತನಕ ಎರಡೂ ದಿನ ಜಲಸಾಹಸ ಕ್ರೀಡೋತ್ಸವ ನಡೆಯಲಿದ್ದು,  ಸ್ಥಳೀಯ ಶಾಸಕರು, ಅಧಿಕಾರಿಗಳು ಮೋಟಾರ್ ಬೋಟಿಂಗ್ ಚಾಲೂ ಮಾಡಿ ಚಾಲನೆ ನೀಡಲಿದ್ದಾರೆ. ಸಾಹಸ ಕ್ರೀಡೆ ಆಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿದೆ.

೨ನೇ ಬಾರಿಗೆ ಜಲಸಾಹಸ ಕ್ರೀಡೋತ್ಸವ: 

ಜಿಲ್ಲಾ ಮಟ್ಟದ ಜಲಸಾಹಸ ಕ್ರೀಡೋತ್ಸವವನ್ನು ಸುವರ್ಣಾವತಿ ಜಲಾಶಯದಲ್ಲಿ ನಡೆಸುತ್ತಿರುವುದು ಇದು ಎರಡನೇ ಬಾರಿ. ೨೦೨೩ರಲ್ಲಿ ಒಂದು ದಿನಕ್ಕೆ ಸೀಮಿತವಾಗಿ ನಡೆಸಲಾಗಿತ್ತು. ಈ ಬಾರಿ ೨ದಿನಗಳ ಕಾಲ ಆಯೋಜನೆ ಮಾಡಲಾಗಿದೆ.

” ಜಲ ಸಾಹಸ ಕ್ರೀಡೋತ್ಸವವನ್ನು ಯುವ ಜನರಿಗಾಗಿ ಆಯೋಜನೆ ಮಾಡಲಾಗಿದೆ. ಸಾಕಷ್ಟು ಮಂದಿ ಉಚಿತವಾಗಿ ನೋಂದಾಯಿಸಿಕೊಂಡಿದ್ದು, ನೋಂದಣಿ ಮಾಡದೇ ಇರುವ ವಿದ್ಯಾರ್ಥಿಗಳು ಸಹನೇರವಾಗಿ ಭಾಗವಹಿಸಬಹುದು.”

ಸುರೇಶ್, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 

 

 

 

Tags:
error: Content is protected !!