ಹೇಮಂತ್ ಕುಮಾರ್
ಜಿಲ್ಲೆಯಲ್ಲಿ ೨೫ ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ: ಎಣ್ಣೆ ಕಾಳುಗಳ ಬಿತ್ತನೆಯೂ ಹೆಚ್ಚು
ಮಂಡ್ಯ: ಕಾಲಕಾಲಕ್ಕೆ ಮಳೆಯಾಗಿ ಬೆಳೆ ಕೈಗೆ ಬಂದರಷ್ಟೇ ರೈತರ ಮುಖದಲ್ಲಿ ಮಂದಹಾಸ. ಅತಿವೃಷ್ಟಿ, ಅನಾವೃಷ್ಟಿಗಳಿಂದ ಸಾಕಷ್ಟು ಪಾಡುಪಟ್ಟಿದ್ದ ಜಿಲ್ಲೆಯ ರೈತರು ಈ ಬಾರಿ ಮುಂಗಾರಿನ ವರ್ಷಧಾರೆಯಿಂದ ಮತ್ತು ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವುದರಿಂದ ಕೃಷಿ ಕೆಲಸಗಳಲ್ಲಿ ತೊಡಗಿದ್ದಾರೆ.
ವಿಶ್ವೇಶ್ವರಯ್ಯ ನಾಲೆ ಹಾಗೂ ಜಿಲ್ಲೆಯಲ್ಲಿನ ಎಲ್ಲ ನಾಲೆಗಳಲ್ಲಿಯೂ ನೀರು ಹರಿಯುತ್ತಿದ್ದು, ಜೀವ ಕಳೆ ಬಂದಿದೆ. ಹಾಗಾಗಿ ಕೃಷಿ ಇಲಾಖೆಯು ರೈತರಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಔಷಧಿಗಳ ದಾಸ್ತಾನು ಮಾಡಿದ್ದು, ರೈತರಿಗೆ ವಿತರಿಸಲು ಸಜ್ಜಾಗಿದೆ.
೨೫ ಸಾವಿರ ಹೆ.ನಲ್ಲಿ ಬಿತ್ತನೆ: ಕೃಷಿ ಇಲಾಖೆಯಿಂದ ಈ ಬಾರಿ ೧,೯೨,೧೦೩ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಈಗಾಗಲೇ ೨೪,೫೮೩ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ೧,೯೨,೬೯೩ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಈ ಬಾರಿ ೫೯೨ ಹೆಕ್ಟೇರ್ ಕಡಿಮೆಯಾಗಿದೆ. ಕೂಳೆ ಕಬ್ಬಿನದೇ ಪ್ರಾಬಲ್ಯ ಜಿಲ್ಲೆಯಲ್ಲಿ ಈ ಬಾರಿ ೫೫,೬೦೫ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲು ಗುರಿ ಹೊಂದಲಾಗಿದ್ದು, ಇದುವರೆಗೂ ಬಿತ್ತನೆಯಾಗಿಲ್ಲ. ೫೩,೪೩೬ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ, ೪೨,೧೩೦ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆ ಗುರಿ ಇದ್ದು, ಈಗಾಗಲೇ ೯,೨೮೬ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆ ಮಾಡಲಾಗಿದೆ. ಅದರಲ್ಲೂ ಕೂಳೆ ಕಬ್ಬು ೨೩,೭೬೫ ಹೆಕ್ಟೇರ್ ಪ್ರದೇಶದ ಪೈಕಿ ೫,೩೩೪ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದೆ. ೧೮,೩೬೫ ತನಿ ಕಬ್ಬು ಬಿತ್ತನೆಯ ಪೈಕಿ ೩,೯೫೨ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.
೧೮,೯೭೪ ಹೆ.ನಲ್ಲಿ ಏಕದಳ, ದ್ವಿದಳ ಧಾನ್ಯ ಮೇ ತಿಂಗಳಲ್ಲಿ ಸುರಿದ ಪೂರ್ವ ಮುಂಗಾರು ಮಳೆಗೆ ಜಿಲ್ಲೆಯಲ್ಲಿ ೮೧ ಹೆಕ್ಟೇರ್ ಪ್ರದೇಶದಲ್ಲಿ ನವಣೆ, ಸಾವೆ, ಹರಕ, ಬರಗು, ಊದಲು, ಕೊರಲೆ ಬೆಳೆಗಳ ಬೆಳೆಯಲು ಗುರಿ ಹೊಂದಲಾಗಿತ್ತು. ಆದರೆ ಯಾವ ಬೆಳೆಯೂ ಬಿತ್ತನೆಯಾಗಿಲ್ಲ. ಮುಸುಕಿನ ಜೋಳ ೧,೮೨೧ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸ್ಥಳೀಯ ಸಾಮಾನ್ಯ ಜೋಳ ಬಿತ್ತನೆಯಾಗಿಲ್ಲ. ಅದರಂತೆ ದ್ವಿದಳ ಬೆಳೆಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಆಲಸಂದೆ, ಅವರೆ ಬೆಳೆಗಳನ್ನು ೩೦,೧೬೩ ಹೆಕ್ಟೇರ್ ಪರದೇಶದಲ್ಲಿ ಬೆಳೆಯಲು ಗುರಿ ಇದ್ದು, ಈಗಾಗಲೇ ೧೮,೯೭೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಎಣ್ಣೆಕಾಳು ಹೆಚ್ಚು ಬಿತ್ತನೆ: ಪೂರ್ವ ಮುಂಗಾರಿನಲ್ಲಿಯೇ ಜಿಲ್ಲೆಯಲ್ಲಿ ಶೇ.೯೬.೨ರಷ್ಟು ಎಣ್ಣೆಕಾಳು ಬಿತ್ತನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ೬,೦೧೭ ಹೆಕ್ಟೇರ್ ಪ್ರದೇಶ ಗುರಿ ಪೈಕಿ ೫,೭೮೮ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ನೆಲಗಡಲೆ ೭೪ ಹೆಕ್ಟೇರ್, ಎಳ್ಳು ೫,೬೪೭ ಹೆಕ್ಟೇರ್, ಹರಳು ೬೨ ಹೆಕ್ಟೇರ್, ಹುಚ್ಚೆಳ್ಳು ೫ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಒಟ್ಟಾರೆ ಪ್ರಸ್ತುತ ವರ್ಷ ಜು.೧೧ರ ವೇಳೆಗೆ ಶೇ.೧೮.೭ರಷ್ಟು ಹೆಚ್ಚು ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ.೧೨.೮ರಷ್ಟು ಮಾತ್ರ ಬಿತ್ತನೆಯಾಗಿತ್ತು. ಆದರೆ ಈ ಬಾರಿ ಶೇ.೬.೧ರಷ್ಟು ಹೆಚ್ಚು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಭತ್ತ ನಾಟಿಗೆ ಸಿದ್ಧತೆ: ಈಗಾಗಲೇ ಜಿಲ್ಲೆಯಲ್ಲಿ ಭತ್ತ ನಾಟಿಗೆ ಒಟ್ಲು ಹಾಕಲಾಗಿದೆ. ೫೫,೬೦೫ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಗೆ ಸಿದ್ಧತೆ ನಡೆದಿದ್ದು, ಜು.೨೧ರ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿನ ತೀರ್ಮಾನದಂತೆ ಎಲ್ಲಾ ನಾಲೆಗಳಿಗೆ ಅಧಿಕ ಪ್ರಮಾಣದ ನೀರು ಬಿಡಲಾಗುತ್ತಿದೆ. ಇದರಿಂದ ಭತ್ತ ನಾಟಿಗೆ ರೈತರು ಮುಂದಾಗಿದ್ದಾರೆ. ಪರಿಣಾಮ ಎಲ್ಲೆಡೆ ನಾಟಿ ಕಾರ್ಯದಲ್ಲಿ ಆಳುಗಳು ತೊಡಗಿಸಿಕೊಂಡಿರುವಂತೆ ಯಂತ್ರಗಳೂ ಪೈಪೋಟಿಗೆ ಇಳಿದಿವೆ.
ಶೀಘ್ರವಾಗಿ ಬೆಳೆ ಬಿತ್ತನೆಗೆ ಕೃಷಿ ಇಲಾಖೆ ಸೂಚನೆ: ಕೆಆರ್‌ಎಸ್ ಅಣೆಕಟ್ಟೆಯಿಂದ ಎಲ್ಲಾನಾಲೆಗಳಿಗೂ ನೀರು ಹರಿಸುತ್ತಿರುವುದರಿಂದ ರೈತರು ಬೇಗನೆ ಬಿತ್ತನೆಗೆ ಮುಂದಾಗಿದ್ದಾರೆ. ಇದರಿಂದ ರೋಗ, ಕೀಟಬಾಧೆಗಳು ಕಡಿಮೆಯಾಗಲಿದೆ. ಅಲ್ಲದೆ ಹೆಚ್ಚು ಇಳುವರಿ ಬರಲಿದ್ದು, ಬೆಳೆಯೂ ಬಹುಬೇಗನೆ ಕೈ ಸೇರಲಿದೆ. ಇದರಿಂದ ರೈತರು ನಷ್ಟ,ಹಾನಿಯಿಂದ ಪಾರಾಗಬಹುದು. ಬೇಸಿಗೆ ಬೆಳೆಗೂ ನೀರು ಸಿಗುವುದರಿಂದ ಎರಡು ಬೆಳೆಯಲ್ಲೂ ಉತ್ತಮ ಫಸಲು ಪಡೆಯಬಹುದು ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
” ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿದ್ದಾರೆ. ಆದರೆ, ಭತ್ತಕ್ಕೆ ಏಕಾ ಏಕಿ ಒಂದು ಸಾವಿರ ರೂ. ಕಡಿಮೆಯಾಗಿದೆ. ರೈತರೇಮಧ್ಯವರ್ತಿಗೆ ನಮ್ಮ ಭತ್ತ ತಗೊಳ್ಳಪ್ಪ ಎಂಬ ಸ್ಥಿತಿಗೆ ಬಂದಿದೆ. ಹಾಗಾಗಿ ಏಕ ಬೆಳೆಯಿಂದ ಪ್ರಯೋಜನವಾಗದು. ಬಹುಬೆಳೆ ಪದ್ಧತಿಯಿಂದ ರೈತ ಸುಧಾರಣೆ ಕಾಣಬಹುದಷ್ಟೆ. ಭತ್ತ-ಕಬ್ಬಿಗೆ ಸಾಲ ಮಾಡಿ ಬಂಡವಾಳ ಹೂಡಿ ಮನೆಯವರೆಲ್ಲ ಶ್ರಮಪಡುತ್ತಿದ್ದಾರೆ. ಅವರ ಕೂಲಿ ಉಳಿಯುತ್ತಿದೆ ಅಷ್ಟೆ. ಇದರಿಂದ ಸಾಲ ಮಾಡಿದ ರೈತನ ಸ್ಥಿತಿ ಬಹಳ ಕಷ್ಟಕರವಾಗಿದೆ.”
-ಮಂಜುನಾಥ್, ರೈತ, ಮಂಡಿಬೆಟ್ಟಹಳ್ಳಿ
” ೨೦೨೩ನೇ ಅವಧಿಯಲ್ಲಿ ಅಣೆಕಟ್ಟೆಯಲ್ಲಿ ನೀರಿಲ್ಲದ ಪರಿಣಾಮ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ತೀವ್ರ ಸಮಸ್ಯೆ ಎದುರಿಸಿದ್ದರು. ಆಗ ನಾಲೆ ಅಭಿವೃದ್ಧಿ ಕೆಲಸಗಳೂ ಆರಂಭಗೊಂಡಿದ್ದರಿಂದ ರೈತರ ಜಮೀನುಗಳು ಒಣಗಿನಿಂತಿದ್ದವು. ಇದೀಗ ಮಳೆಯೂ ಆಗಿ, ಕಟ್ಟೆಯಲ್ಲೂ ನೀರು ತುಂಬಿರುವ ಪರಿಣಾಮ ಎಲ್ಲ ನಾಲೆಗಳಿಗೂ ನೀರು ಹರಿಯುತ್ತಿದ್ದು, ರೈತರು ಭತ್ತಕ್ಕಿಂತ ಹೆಚ್ಚು ಕಬ್ಬು ಬೆಳೆಗೆ ಮುಂದಾಗಿದ್ದಾರೆ.”
-ಬೊಮ್ಮೇಗೌಡ, ರೈತ, ಬಿ.ಯರಹಳ್ಳಿ
” ಇವತ್ತು ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಆದರೆ ಬೆಳೆಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ಕಳೆದ ಬಾರಿ ಕ್ವಿಂಟಾಲ್ ಭತ್ತಕ್ಕೆ ೩,೦೦೦ ರೂ. ಸಿಗುತ್ತಿತ್ತು. ಈಗ ೨,೦೦೦ ರೂ.ಗಳಿಗೂ ಕಡಿಮೆ ಕೇಳುತ್ತಾರೆ. ಹೀಗಾಗಿ ರೈತರ ಶ್ರಮಕ್ಕೆ, ಅವರು ಹೂಡುವ ಬಂಡವಾಳಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿಲ್ಲ. ಸರ್ಕಾರದ ಅವಗಣನೆಯಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.”
-ಎ.ಎಲ್.ಕೆಂಪೂಗೌಡ, ರೈತಸಂಘದ ಜಿಲ್ಲಾಧ್ಯಕ್ಷ





