ಕಾಲುವೆಗೆ ಸೇರುತ್ತಿದೆ ಕಲ್ಯಾಣ ಮಂಟಪಗಳ ತ್ಯಾಜ್ಯ
ರಾಸಾಯನಿಕ ನೀರಿನಿಂದ ಬೆಳೆ ಹಾಳು, ಜಾನುವಾರು ಸಾವು
ಈಗಲಾದರೂ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು ಮುಂದಾಗಲಿ
ರಾಸಾಯನಿಕಯುಕ್ತ ನೀರು ರಾಜಕಾಲುವೆಗೆ ಸೇರ್ಪಡೆಯಾಗುತ್ತಿರುವುದರಿಂದ ಸಮೀಪದಲ್ಲಿರುವ ತೋಟಗಳಲ್ಲಿ ಕೃಷಿ ಹಾಗೂ ಹೈನುಗಾರಿಕೆಗೆ ಕೈಗೊಳ್ಳಲು ತೊಂದರೆಯಾಗುತ್ತಿದೆ ಎಂಬ ಕೂಗು ರೈತಾಪಿ ವರ್ಗದಲ್ಲಿ ಕೇಳಿಬರುತ್ತಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗುಳ ಸಮೀಪದ ಅನಗನಹಳ್ಳಿಯಲ್ಲಿ ಹಲವಾರು ವರ್ಷಗಳಿಂದ ಸುಮಾರು ೧೦ ಎಕರೆ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆ ಮಾಡುತ್ತಿರುವ ನಳಿನಿ ‘ಆಂದೋಲನ’ದ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಳಿನಿ ಅವರ ತೋಟದ ಸಮೀಪದಲ್ಲಿ ಸುಮಾರು ಒಂದು ಕಿ.ಮೀ.ನಷ್ಟು ರಾಜಕಾಲುವೆ ಹಾದು ಹೋಗಿದ್ದು, ಇದರ ಅಕ್ಕಪಕ್ಕದಲ್ಲಿರುವ ಕಾರ್ಖಾನೆಗಳು ಹೊರಬಿಡುವ ರಾಸಾಯನಿಕ ತ್ಯಾಜ್ಯ ರಾಜಕಾಲುವೆ ಸೇರುತ್ತಿದೆ. ಇದರಿಂದ ಸಮೀಪದಲ್ಲಿರುವ ತೋಟಗಳಲ್ಲಿ ಕೃಷಿ ಕೈಗೊಳ್ಳಲು ಹೈನುಗಾರಿಗೆ ನಡೆಸಲು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ತೋಟದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕಾರ್ಖಾನೆಗಳು ರಾಸಾಯನಿಕ ಮಿಶ್ರಿತ ನೀರನ್ನು ರಾಜಕಾಲುವೆಗೆ ಬಿಡುವುದರಿಂದ ಅನೇಕ ಸಮಸ್ಯೆಗಳು ಎದುರಾಗಿದ್ದು, ಈ ನೀರನ್ನು ಕುಡಿಯುವ ದನ ಕರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ತೋಟದ ಸುತ್ತಮುತ್ತಲೂ ಸುಮಾರು ನಾಲ್ಕೈದು ಕಲ್ಯಾಣ ಮಂಟಪಗಳಿವೆ.
ಅಲ್ಲಿನ ಆಹಾರ ತ್ಯಾಜ್ಯಗಳನ್ನು ರಾಜಕಾಲುವೆಗೆ ಸುರಿಯುತ್ತಿದ್ದಾರೆ. ಇದನ್ನು ಸೇವಿಸಿದ ದನ ಕರುಗಳು ಸಾವನ್ನಪ್ಪುತ್ತಿವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕೆಐಡಿಬಿ ಅವರನ್ನು ಸಂಪರ್ಕಿಸಿ ದೂರು ನೀಡಲಾಗಿದೆ ನಂತರ ಕೆಆರ್‌ಎಸ್ ಅಧಿಕಾರಿಗಳಿಗೂ ವಿಚಾರ ತಿಳಿಸಲಾಗಿದೆ. ಅದು ಅವರ ವ್ಯಾಪ್ತಿಗೆ ಬಾರದ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೂ ಭೇಟಿ ನೀಡಿ ಸಮಸ್ಯೆಯನ್ನು ವಿವರಿಸಿದ್ದೇನೆ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿದರು.
” ಅನಗನಹಳ್ಳಿ ಸುತ್ತಮುತ್ತಲಿನ ಪ್ರದೇಶವನ್ನು ಕೆಐಡಿಬಿಯವರು ಐಟಿ ಪಾರ್ಕ್ ಎಂದು ಅನುಮೋದಿಸಿ ಪರಿಸರ ಮಾಲಿನ್ಯ ಮಾಡುವ ಕಲ್ಯಾಣ ಮಂಟಪಗಳು ಹಾಗೂ ರಾಸಾಯನಿಕ ತ್ಯಾಜ್ಯ ಹೊರ ಹಾಕುವ ಕಾರ್ಖಾನೆಗಳಿಗೆ ನೀಡಿದ್ದಾರೆ.”
ನಳಿನಿ, ಕೃಷಿಕರು
ಮಲಿನ ನೀರು ಕುಡಿದು ಜಾನುವಾರು ಸಾವು:
ನಾವು ಕೃಷಿ, ತೋಟಗಾರಿಕೆ, ಹೈನುಗಾರಿಕೆಯನ್ನೇ ನಂಬಿಕೊಂಡಿದ್ದು, ತೋಟದಲ್ಲಿ ಸಾಕಣೆ ಮಾಡುತ್ತಿರುವ ಹಂದಿ, ಕೋಳಿ, ಹಸುಗಳು ಹಾಗೂ ಬಾತುಕೋಳಿಗಳು ಮಲಿನ ನೀರನ್ನು ಸೇವಿಸಿ ಅಸ್ವಸ್ಥಗೊಳ್ಳುತ್ತಿವೆ ಎಂದು ನಳಿನಿಬೇಸರ ವ್ಯಕ್ತಪಡಿಸಿದರು. ರಾಜ ಕಾಲುವೆಯಲ್ಲಿ ಹರಿದು ಬರುವ ಕಾರ್ಖಾನೆಗಳ ಕಲುಷಿತ ಹಾಗೂ ರಾಸಾಯನಿಕಯುಕ್ತ ನೀರು ವಿಸಿ ನಾಲೆ ನೀರಿಗೆ ಸೇರಿಕೊಳ್ಳುತ್ತದೆ. ಇಷ್ಟಾದರೂ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುತ್ತಿಲ್ಲ ಎಂದು ನಳಿನಿ ಅವರು ಅಳಲು ತೋಡಿಕೊಂಡಿದ್ದಾರೆ.




