Mysore
17
clear sky

Social Media

ಶನಿವಾರ, 20 ಡಿಸೆಂಬರ್ 2025
Light
Dark

ಶೀಘ್ರದಲ್ಲೇ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆ

೪೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಅನುಕೂಲ

ನವೀನ್ ಡಿಸೋಜ

ಮಡಿಕೇರಿ: ೨೪೦ ಹಾಸಿಗೆಗಳ ಸಾಮರ್ಥ್ಯವುಳ್ಳ ವಿರಾಜಪೇಟೆ ತಾ. ಆಸ್ಪತ್ರೆಯನ್ನು ಶೀಘ್ರದಲ್ಲಿಯೇ ೪೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಇದರಿಂದ ದಕ್ಷಿಣ ಕೊಡಗಿನ ಜನಸಾಮಾನ್ಯರಿಗೆ ಅನುಕೂಲವಾಗಲಿದೆ.

ವಿರಾಜಪೇಟೆ ಆಸ್ಪತ್ರೆಗೆ ನಿತ್ಯ ೫೦೦ರಿಂದ ೬೦೦ ಮಂದಿ ಹೊರ ರೋಗಿಗಳು ಭೇಟಿ ನೀಡುತ್ತಿದ್ದು, ಈ ಸಂಖ್ಯೆಗೆ ಈಗಿರುವ ೨೪೦ ಹಾಸಿಗೆಗಳ ಆಸ್ಪತ್ರೆಯಲ್ಲಿನ ಸೌಲಭ್ಯಗಳು ಸಾಲುತ್ತಿರಲಿಲ್ಲ. ಹೀಗಾಗಿ ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆ ಗೇರಿಸಬೇಕೆಂಬ ಬೇಡಿಕೆ ಹಿಂದಿನಿಂದಲೂ ಇತ್ತು. ಈ ಬಾರಿ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದಿಂದ ಅದು ಸಾಕಾರಗೊಳ್ಳುತ್ತಿದೆ. ಆಸ್ಪತ್ರೆಯ ಸಾಮರ್ಥ್ಯವನ್ನು ೪೦೦ ಹಾಸಿಗಳಿಗೆ ಹೆಚ್ಚಿಸುವುದರೊಂದಿಗೆ ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ನೀಡಲು ಸರ್ಕಾರ ಸಮ್ಮತಿಸಿದ್ದು, ಈಗಾಗಲೇ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ದಕ್ಷಿಣ ಕೊಡಗಿನ ವಿರಾಜಪೇಟೆ, ಪೊನ್ನಂ ಪೇಟೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಹಾಡಿ ಗಳಿವೆ. ಗಿರಿಜನರು, ಬುಡಕಟ್ಟು ಸಮುದಾಯ ಗಳ ಸಾವಿರಾರು ಮಂದಿ ಈ ವ್ಯಾಪ್ತಿಯ ಸಣ್ಣ ಸಣ್ಣ ಮನೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಕಾಫಿ ತೋಟದ ಕಾರ್ಮಿಕರ ಸಂಖ್ಯೆಯೂ ಈ ಭಾಗದಲ್ಲಿ ಹೆಚ್ಚಾಗಿದೆ. ಬಹು ತೇಕ ಜನರು ಆರೋಗ್ಯ ಸೇವೆಗೆ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.

ಈಗ ಸರ್ಕಾರ ವಿರಾಜಪೇಟೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿರುವುದರಿಂದ ಇವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸಿಗುವ ಬಹುತೇಕ ಆರೋಗ್ಯ ಸೇವೆಗಳು ವಿರಾಜಪೇಟೆಯಲ್ಲಿಯೇ ಲಭ್ಯವಾಗಲಿದೆ.

ಸದ್ಯ ವಿರಾಜಪೇಟೆ ತಾ. ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆಯಿದ್ದ ಕಾರಣ ಮಡಿಕೇರಿ ಅಥವಾ ಮೈಸೂರಿನ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾದ ಪರಿಸ್ಥಿತಿಯಿತ್ತು. ಆದರೆ ಇದೀಗ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆಇತರ ವೈದ್ಯಕೀಯ ಸೇವೆಗಳು ಕೂಡ ಲಭ್ಯ ವಾಗಲಿರುವುದರಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ.

ಭಾರತೀಯ ಸಾರ್ವಜನಿಕ ಆರೋಗ್ಯ ಮಾನ ದಂಡಗಳ ಪ್ರಕಾರ ೪೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಇಂತಿಷ್ಟೇ ವೈದ್ಯಕೀಯ ಸೇವೆಗಳನ್ನು ಒಳಗೊಂಡಿರಬೇಕು, ಅಲ್ಲಿ ತಜ್ಞ ವೈದ್ಯರ ಸಂಖ್ಯೆ, ವೈದ್ಯಕೀಯ ಸಿಬ್ಬಂದಿ, ರಕ್ತ ನಿಽ ಕೇಂದ್ರ, ಲ್ಯಾಬ್ ಸೇರಿ ಇತರೆ ಸೌಲಭ್ಯಗಳು ಹೀಗೆಯೇ ಇರಬೇಕೆಂಬ ಮಾನದಂಡವಿದೆ. ಅದರಂತೆ ೪೦೦ ಹಾಸಿಗೆಗಳ ಆಸ್ಪತ್ರೆ ಎಂದರೆ ಅಲ್ಲಿ ಜಿಲ್ಲಾಸ್ಪತ್ರೆಯಲ್ಲಿರುವಷ್ಟೇ ಸೇವೆಗಳು ಲಭ್ಯವಿರುತ್ತವೆ. ಹೀಗಾಗಿ ವಿರಾಜಪೇಟೆ ಆಸ್ಪತ್ರೆ ಮೇಲ್ದರ್ಜೆಗೇರಿದ ಬಳಿಕ ಸದ್ಯ ಅಲ್ಲಿ ಲಭ್ಯವಿಲ್ಲದ ಹಲವು ಆರೋಗ್ಯ ಸೇವೆಗಳು ಹೊಸದಾಗಿ ಆರಂಭವಾಗುವುದರೊಂದಿಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಇತರೆ ಆರೋಗ್ಯ ಸಿಬ್ಬಂದಿಯ ಸಂಖ್ಯೆಯೂ ಹೆಚ್ಚಾಗಲಿದೆ.

ಸ್ಕ್ಯಾನಿಂಗ್ ಸೇವೆ, ಹೃದ್ರೋಗ ಘಟಕ, ರಕ್ತನಿಧಿ ಕೇಂದ್ರ, ಐಸಿಯು ಘಟಕ ಹಾಗೂ ಡಯಾಲಿಸಿಸ್ ಘಟಕವನ್ನು ಕೂಡ ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ.

ವೈದ್ಯರ ಸಂಖ್ಯೆಯೂ ಹೆಚ್ಚಳ: 

ಸದ್ಯ ವಿರಾಜಪೇಟೆ ಆಸ್ಪತ್ರೆಯಲ್ಲಿ ಒಟ್ಟು ೧೧ ಮಂದಿ ತಜ್ಞ ವೈದ್ಯರಿದ್ದಾರೆ. ಈ ಸಂಖ್ಯೆ ೩೮ಕ್ಕೆ ಏರಿಕೆಯಾಗಲಿದೆ. ಜೊತೆಗೆ ಕೆಲವು ವಿಭಾಗಗಳಲ್ಲಿ ಬೇರೆಡೆಯ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದ್ದು, ಮುಂದೆ ಖಾಯಂ ವೈದ್ಯರ ಲಭ್ಯತೆ ಇರಲಿದೆ. ಅಲ್ಲದೇ ವಿರಾಜಪೇಟೆ ಮೈಸೂರಿಗೆ ಹತ್ತಿರವಾಗುವುದರಿಂದ ಜಿಲ್ಲೆಯ ಬೇರೆಡೆಯಂತೆ ವೈದ್ಯರು ಬರಲು ಹಿಂಜರಿಯುವ ಪರಿಸ್ಥಿತಿ ಕಡಿಮೆಯಿದ್ದು, ಹೆಚ್ಚಿನ ತಜ್ಞ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಾಗಲಿದ್ದಾರೆ. ಇದಲ್ಲದೆ, ೨೬ ಆಡಳಿತ ಅಧಿಕಾರಿಗಳು, ೨೬೧ ನರ್ಸ್ ಮತ್ತು ಪ್ಯಾರಾ ಮೆಡಿಕಲ್ ಸೇರಿದಂತೆ ಒಟ್ಟು ಸಿಬ್ಬಂದಿಗಳ ಸಂಖ್ಯೆ ೩೧೯ಕ್ಕೆ ಏರಿಕೆಯಾಗಲಿದೆ.

” ಸದ್ಯ ವಿರಾಜಪೇಟೆ ಆಸ್ಪತ್ರೆಗೆ ಪ್ರತಿದಿನ ೫೦೦ ರಿಂದ ೬೦೦ ಹೊರರೋಗಿಗಳು ಭೇಟಿ ನೀಡುತ್ತಾರೆ. ಹೀಗಾಗಿ ಈಗಿರುವ ೨೪೦ ಹಾಸಿಗೆಗಳ ಆಸ್ಪತ್ರೆಯಲ್ಲಿನ ಸೇವೆಗಳು ಸಾಕಾಗುತ್ತಿರಲಿಲ್ಲ. ೪೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಾರ್ಯಾರಂಭಿಸಿದರೆ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ಬಹುತೇಕ ಸೇವೆಗಳು ಅಲ್ಲಿಯೂ ಲಭಿಸಲಿವೆ. ಇದರಿಂದ ಆ ಭಾಗದಲ್ಲಿ ಹೆಚ್ಚಾಗಿರುವ ಕಾರ್ಮಿಕರು, ಹಾಡಿ ನಿವಾಸಿಗಳಿಗೆ ಅನುಕೂಲವಾಗಲಿದೆ.

-ಡಾ. ಕೆ.ಎಂ.ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Tags:
error: Content is protected !!