ಕಾಂಗೀರ ಬೋಪಣ್ಣ
೨.೮ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ; ಸಂಪೂರ್ಣ ಹದಗೆಟ್ಟಿದ ರಸ್ತೆ ಕಾಯಕಲ್ಪದಿಂದ ಸ್ಥಳೀಯರಿಗೆ ಅನುಕೂಲ
ವಿರಾಜಪೇಟೆ: ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ವಿರಾಜಪೇಟೆ-ಮಾಕುಟ್ಟ ರಸ್ತೆ ಸಂಪೂರ್ಣ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಸುಮಾರು ೨.೮ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.
ಮಾಕುಟ್ಟ ರಸ್ತೆ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ತೀವ್ರ ಹಾನಿಗೀಡಾಗಿತ್ತು. ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ, ಮಳೆ ನೀರು ನಿಂತು ಕೆಸರುಮಯವಾಗಿತ್ತು. ಈ ರಸ್ತೆಯಲ್ಲಿ ನೆರೆಯ ಕೇರಳ ರಾಜ್ಯಕ್ಕೆ ಸಂಚರಿಸುವ ವಾಹನಗಳ ಸವಾರರು ಜೀವ ಕೈಯಲ್ಲಿ ಹಿಡಿದು ತೆರಳ ಬೇಕಿತ್ತು. ಇದೀಗ ಮಾಕುಟ್ಟ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ.
ಈ ಹಿಂದೆಯೂ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದಾಗ ವಾಹನ ಸಂಚಾರವೇ ಸ್ಥಗಿತವಾಗಿತ್ತು. ಆಗ ಅನೇಕ ಹೋರಾಟಗಳು ನಡೆದರೂ ಫಲ ಕಾಣದಾದಾಗ ಈಗಿನ ಶಾಸಕ ಎ.ಎಸ್.ಪೊನ್ನಣ್ಣ ಅವರ ತಂದೆ ಎ.ಕೆ. ಸುಬ್ಬಯ್ಯಅವರು ಅಂದಿನ ಸರ್ಕಾರದ ವಿರುದ್ಧ ರಾಜ್ಯಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಈ ರಸ್ತೆ ಸಂಪೂರ್ಣ ಮರು ನಿರ್ಮಾಣವಾಗಿತ್ತು. ಆದರೆ ಅಲ್ಲಿಂದ ಬಹಳ ವರ್ಷಗಳ ಕಾಲ ಈ ರಸ್ತೆಯನ್ನು ದುರಸ್ತಿಗೊಳಿಸದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಮತ್ತೆ ದುಸ್ಥಿತಿಗೆ ಬಂದಿತ್ತು. ಈಗ ಶಾಸಕ ಎ.ಎಸ್. ಪೊನ್ನಣ್ಣ ಅವರ ಅಧಿಕಾರಾವಧಿಯಲ್ಲಿ ಮತ್ತೆ ಈ ರಸ್ತೆ ನಿರ್ಮಾಣ ನಡೆಯುತ್ತಿರುವುದು ವಿಶೇಷ ಎನಿಸಿದೆ.
ಕೊಡಗು ಜಿಲ್ಲೆಗೂ ಕೇರಳ ರಾಜ್ಯಕ್ಕೂ ಹಿಂದಿನಿಂದಲೂ ವ್ಯಾವಹಾರಿಕ ಮತ್ತು ಭಾವನಾತ್ಮಕ ಸಂಬಂಧ ಇದೆ. ಹಾಗಾಗಿ ಈ ರಸ್ತೆಯು ಆ ಬಾಂಧವ್ಯವನ್ನು ಬೆಸೆಯಲು ಅಗತ್ಯವಾಗಿದೆ. ಆದರೆ ಈ ರಸ್ತೆ ಅಭಿವೃದ್ಧಿಗೆ ಅನುದಾನ ಬಂದು ಕಾಮಗಾರಿ ಆರಂಭವಾಗಿದ್ದರೂ ಈ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
” ಈಗಾಗಲೇ ಮಾಕುಟ್ಟ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಮತ್ತೆ ಮಳೆಯಿಂದಾಗಿ ಆಡಚಣೆಯಾಗಿದೆ. ಪ್ರಕೃತಿಯ ಸವಾಲಿನ ಮುಂದೆ ಯಾರು ಏನೂ ಮಾಡಲು ಸಾಧ್ಯವಿಲ್ಲ. ಆದರೂ ವಿರಾಜಪೇಟೆ ಭಾಗದಲ್ಲಿ ಸುಮಾರು ೧೧ ತಂಡಗಳು ರಸ್ತೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿವೆ. ಕೆಲವು ದಿನ ತಾಳ್ಮೆಯಿಂದ ಇದ್ದರೆ ಖಂಡಿತವಾಗಿಯೂ ರಸ್ತೆ ಅಭಿವೃದ್ಧಿಯಾಗಲಿದೆ.”
-ರಂಜಿ ಪೂಣಚ್ಚ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
” ಮಾಕುಟ್ಟ ರಸ್ತೆಯು ಹಂತ ಹಂತವಾಗಿ ಮರು ನಿರ್ಮಾಣವಾಗಲಿದೆ. ಇದಕ್ಕೆ ಸೂಕ್ತಅನುದಾನವನ್ನು ಶಾಸಕ ಎ.ಎಸ್.ಪೊನ್ನಣ್ಣ ಒದಗಿಸಿದ್ದಾರೆ. ಅಗತ್ಯ ಬಿದ್ದರೆ ಹತ್ತಾರು ದಿನ ಮಾಕುಟ್ಟ ರಸ್ತೆಯನ್ನು ಮುಚ್ಚಿ ಕಾಮಗಾರಿ ನಡೆಸಬೇಕಾಗಬಹುದು. ಆದರೆ ಪರಿಸ್ಥಿತಿಯ ಅರಿವಿರಬೇಕು. ಅದನ್ನು ಬಿಟ್ಟು ಪ್ರಚಾರಕ್ಕಾಗಿಟೀಕೆ ಮಾಡಬಾರದು. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಯಾಗಲಿದೆ.”
-ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕರು
” ಎಲ್ಲಾ ಕಡೆ ಕಾಮಗಾರಿ ಆರಂಭವಾಗಿದೆ. ಆದರೆ ಮಳೆಯಿಂದ ಅಡಚಣೆಯಾಗಿದೆ. ಮಾಕುಟ್ಟ ರಸ್ತೆಯ ಆರಂಭ ದ್ವಾರದಲ್ಲಿ ೧.೨ ಕಿ.ಮೀ. ಕಾಮಗಾರಿ ೨೮೦ ಲಕ್ಷ ರೂ. ವೆಚ್ಚದಲ್ಲಿ ಆರಂಭವಾಗಿದೆ. ಉಳಿದ ಕಾಮಗಾರಿಗೆ ೧೧ ಕೋಟಿ ರೂ. ಮಂಜೂರಾಗಿದ್ದು, ಡಿಸೆಂಬರ್ ನಲ್ಲಿ ಕಾಮಗಾರಿ ಅರಂಭವಾಗಲಿದೆ. ಜನರ ಸಹಕಾರ ಅಗತ್ಯ.”
-ಸತೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ.





