Mysore
24
haze

Social Media

ಶನಿವಾರ, 10 ಜನವರಿ 2026
Light
Dark

ವಿರಾಜಪೇಟೆ ವ್ಯಾಪ್ತಿಯಲ್ಲಿ ವನ್ಯಜೀವಿ ಉಪಟಳ

ಕಾಡಾನೆ, ಹುಲಿ ದಾಳಿಯಿಂದ ಹೈರಾಣಾದ ರೈತರು; ಶಾಶ್ವತ ಪರಿಹಾರಕ್ಕೆ ಒತ್ತಾಯ

ಕಾಂಗೀರ ಬೋಪಣ್ಣ
ವಿರಾಜಪೇಟೆ: ಸಮೀಪದ ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು, ಕೂಕ್ಲೂರು ಭಾಗದಲ್ಲಿ ರೈತರು ವನ್ಯಮೃಗಗಳ ಹಾವಳಿಯಿಂದ ಬೆಳೆಗಳನ್ನು ಕಳೆದುಕೊಂಡು ಹೈರಾಣಾತ್ತಿದ್ದಾರೆ.

ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಬೆಳೆಗಳು ಹಾನಿಗೊಳಗಾಗುತ್ತಿವೆ. ಅಲ್ಲದೆ, ಹುಲಿ ದಾಳಿ ಕೂಡ ಹೆಚ್ಚಾಗುತ್ತಿದ್ದು, ರೈತರು ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಇತ್ತೀಚೆಗೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆಯ ತಂಡ ಈ ಭಾಗದಲ್ಲಿ ಹುಲಿಯನ್ನು ಸೆರೆಹಿಡಿ ಯುವ ಕಾರ್ಯಾಚರಣೆ ನಡೆಸಿತ್ತು. ಆದರೆ ಹುಲಿ ಕಾಡು ಸೇರಿದೆ ಎಂದು ಹೇಳಿ ಕೈತೊಳೆದುಕೊಂಡಿದ್ದು, ಅರಣ್ಯ ಇಲಾಖೆ ಕಾರ್ಯ ವೈಖರಿಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಭತ್ತದ ಕೃಷಿ ಮಾಡು ವವರ ಸಂಖ್ಯೆ ಕಡಿಮೆಯಾಗಿದೆ. ಕಾರ್ಮಿಕರ ಕೊರತೆ, ಕಾಡಾನೆ ಹಾವಳಿ, ಕಾಡು ಹಂದಿಗಳ ದಾಂದಲೆಯಿಂದ ರೈತರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಬೆಳೆ ಕೈಗೆ ಬಂದಾಗ ವನ್ಯಜೀವಿಗಳು ದಾಂಗುಡಿ ಇಟ್ಟು ಬೆಳೆಯನ್ನು ನಾಶ ಮಾಡುತ್ತಿವೆ. ಕ್ರಮ ಕೈಗೊಳ್ಳಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಕಾಟಾ ಚಾರಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಡುಪ್ರಾಣಿಗಳಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಫಸಲು ಕಳೆದುಕೊಂಡು ಖರ್ಚು ಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇಲಾಖೆಯ ಪರಿಹಾರ ಗಗನ ಕುಸುಮವಾಗಿದ್ದು, ಸಿಕ್ಕಿದರೆ ಸಿರುಂಡೆ ಎನ್ನುವಂತಾಗಿದೆ. ಆನೆ ಗಳು ಪ್ರತ್ಯೇಕ ಗುಂಪಾಗಿ ಬಂದು ಕೃಷಿ ಹಾನಿ ಮಾಡುತ್ತವೆ. ಇನ್ನೊಂದೆಡೆ ಹುಲಿ ಆಗಾಗ ಬಂದು ಜನರಿಗೆ ಜೀವ ಭಯ ಮೂಡಿಸುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರು ಕೇವಲ ಪ್ರಚಾರಕ್ಕಾಗಿ ಮಾತ್ರ ಬರುತ್ತಾರೆ. ಆನೆ-ಮಾನವ ಸಂಘರ್ಷ ಕೆಲವು ಬಾರಿ ಮಾನವ ಜೀವಕ್ಕೂ ಕುತ್ತು ತರುತ್ತದೆ. ಯಾವುದೇ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಮತ್ತು ಸ್ಥಳಿಯ ಶಾಸಕರು ಸಂಪೂರ್ಣ ವಿಫಲವಾಗಿದ್ದಾರೆ.
-ಬೊಳ್ಳಚಂಡ ಪ್ರಕಾಶ್, ಚೆಂಬೆಬೆಳ್ಳೂರು, ಕೃಷಿಕರು

ಕಾಡಾನೆಗಳ ಹಾವಳಿ ಇರುವ ಕಡೆ ಟಾಸ್ಕ್ ಪೋರ್ಸ್ ಕಾರ್ಯಾಚರಣೆ ನಡೆಸುತ್ತದೆ. ದೂರು ಬಂದ ತಕ್ಷಣ ಕಾರ್ಯಾಚರಣೆ ಮಾಡುತ್ತಿದ್ದೇವೆ. ಆದರೆ ಕಾಡಾನೆಗಳು ನಿರ್ದಿಷ್ಟ ಸ್ಥಳವನ್ನು ವಾಸಸ್ಥಾನವಾಗಿ ಮಾಡಿಕೊಡು ಅಲ್ಲಿಯೆ ಇರುತ್ತವೆ. ಓಡಿಸಿದರೆ ಮತ್ತೆ ಅಲ್ಲಿಗೆ ಬರುತ್ತವೆ. ಆದ್ದರಿಂದ ಅರಣ್ಯದಂಚಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಆನೆ ಹಾವಳಿ ನಿಯಂತ್ರಣಕ್ಕೆ ಬರಬಹುದು.
-ಶಿವರಾಂ, ವಲಯ ಅರಣ್ಯಧಿಕಾರಿ, ವಿರಾಜಪೇಟೆ.

 

Tags:
error: Content is protected !!