Mysore
16
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಕೂರ್ಗಳ್ಳಿ ಕೆರೆ ಒತ್ತುವರಿ ಕೂಗು; ಗ್ರಾಮಸ್ಥರಲ್ಲಿ ಹಲವು ಅನುಮಾನ

ಸಾಲೋಮನ್

೨೨.೨೦ ವಿಸ್ತೀರ್ಣದ ಕೆರೆ ಈಗ ಉಳಿದಿರುವುದು ಎಕರೆ!

ಅನೇಕ ವರ್ಷಗಳಿಂದ ದೂರು ನೀಡಿದರೂ ಕ್ರಮ ಜರುಗಿಸಿಲ್ಲ

ಯಾರೇ ಒತ್ತುವರಿ ಮಾಡಿದ್ದರೂ ತೆರವು: ಶಾಸಕ ಜಿಟಿಡಿ

ಮೈಸೂರು: ಸಂತ ಶಿಶುನಾಳ ಷರೀಫರ ಕೋಡಗನ ಕೋಳಿ ನುಂಗಿತ್ತಾ ,,, ಎಂಬ ಗೀತೆಯಂತೆ  ಕೆರೆಯನ್ನು ಭೂಮಿ (ಭೂ ಮಾಫಿಯಾ ) ನುಂಗಿತ್ತಾ… ಎಂದು ಹಾಡಬೇಕಾದ ಸ್ಥಿತಿ ಬಂದಿದೆ. ಸುಮಾರು ೨೨ ಎಕರೆ ವ್ಯಾಪ್ತಿಯಲ್ಲಿದ್ದ ಕೆರೆಯೊಂದು  ೫ ಎಕರೆ ವಿಸ್ತೀರ್ಣಕ್ಕೆ ಬಂದು ನಿಂತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮೈಸೂರು ತಾಲ್ಲೂಕಿನ ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಕೂರ್ಗಳ್ಳಿ ಕೆರೆಗೆ ಈ ದುಸ್ಥಿತಿ ಬಂದೆರಗಿದೆ.  ಕೆರೆ  ಸುತ್ತಲೂ ಒತ್ತುವರಿ ಆಗಿದ್ದು ಇದಕ್ಕೆ  ಆಡಳಿತ ವರ್ಗ ಕಣ್ಣುಮುಚ್ಚಿ ಕುಳಿತಿರುವುದೇ  ಪ್ರಮುಖ ಕಾರಣವಾಗಿದೆ.  ಆರ್‌ಟಿಸಿಯಲ್ಲಿ  ಗುರುತಿಸಿರುವಂತೆ ಕೂರ್ಗಳ್ಳಿಯ ಕೆರೆ ವಿಸ್ತೀರ್ಣ ಸರ್ವೆ ನಂ.೧೬೦ರಲ್ಲಿ ೨೨ ಎಕರೆ ೨೦ ಕುಂಟೆ ಇದೆ.  ಆದರೆ ಕೆರೆಯ ವಿಸ್ತೀರ್ಣ ಈಗ ಎಷ್ಟಿದೆ ಎನ್ನುವ ಬಗ್ಗೆ ಇತ್ತೀಚೆಗೆ ಸರ್ವೆ  ಆಗಿಲ್ಲ. ಆದರೆ ಇದೀಗ ಕೆರೆಯ ವಿಸ್ತೀರ್ಣ  ೫ ಎಕರೆ ಇರಬಹುದು ಎಂದು ಅಂದಾಜಿಸಲಾಗಿದೆ.

ಕೂರ್ಗಳ್ಳಿ ಕೆರೆ ಸುತ್ತಲೂ ಒತ್ತುವರಿ ಆಗಿದ್ದು, ಅದನ್ನು ತೆರವು ಮಾಡಿಸಲು ಯಾವುದೇ ಅಧಿಕಾರಿಗಳು ಮುಂದಾಗಿಲ್ಲ ಎಂದು ಕೂರ್ಗಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮಾತ್ರವಲ್ಲದೆ ಕೆರೆಗೆ ಗ್ರಾಮದ  ಒಳಚರಂಡಿ ನೀರು  ಸೇರುತ್ತಿರುವುದರಿಂದ  ಸಂಪೂರ್ಣ ಕಲುಷಿತವಾಗಿದೆ.

‘ಆಂದೋಲನ’ ದಿನಪತ್ರಿಕೆಯೊಂದಿಗೆ ಮಾತನಾಡಿದ ಕೂರ್ಗಳ್ಳಿ ಗ್ರಾಮಸ್ಥರು. ಹಿಂದೆ ಮೈಸೂರು ಜಿಲ್ಲಾಧಿಕಾರಿಗಳಾಗಿದ್ದ  ಸಿ. ಶಿಖಾ  ಅವರಿಗೂ  ಕೆರೆ ಒತ್ತುವರಿ ಆಗುತ್ತಿರುವ ಬಗ್ಗೆ ಪತ್ರ ಬರೆದು ಮನವಿ ಮಾಡಿzವು. ಆಗಿನಿಂದ ಈವರೆಗೂ ಬಂದ ಯಾವುದೇ ಜಿಲ್ಲಾಧಿಕಾರಿಗಳೂ ಈ ಬಗ್ಗೆ   ಗಮನ ಹರಿಸಿಲ್ಲ. ಸ್ಥಳೀಯ ಪ್ರಭಾವಿಗಳು ಕೆರೆಯ ಸುತ್ತಲಿನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಸ್‌ಆರ್‌ ಫಂಡ್‌ ‌ನಲ್ಲಿ ಅಭಿವೃದ್ಧಿ: ಪ್ರಸ್ತುತ ಕೂರ್ಗಳ್ಳಿ  ಕೆರೆ ಅಭಿವೃದ್ಧಿಗೆ ಸ್ಥಳೀಯ ಆಟೋಮೊಟೀವ್ ಆಕ್ಸೆಲ್ ಸಂಸ್ಥೆ ಮುಂದಾಗಿದೆ. ಕಲುಷಿತಗೊಂಡಿರುವ  ಕೆರೆಯ ನೀರನ್ನು ಶುದ್ಧೀಕರಿಸಿ, ಒಳಚರಂಡಿ ನೀರು ಕೆರೆಗೆ  ಸೇರದಂತೆ ತಡೆಯುವುದು, ಕೆರೆಯ ಸುತ್ತ ಉದ್ಯಾನವನ ನಿರ್ಮಾಣ ಹಾಗೂ ವಾಕಿಂಗ್ ಟ್ರ್ಯಾಕ್ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಸಂಸ್ಥೆ ತನ್ನ ಸಿಎಸ್‌ಆರ್ ನಿಧಿಯಿಂದ ೪ ಕೋಟಿ ರೂ. ವೆಚ್ಚ  ಮಾಡುತ್ತಿದೆ.

ಕೆರೆ ಸುತ್ತಲೂ ಒತ್ತುವರಿ: ಒಂದು ಕಾಲದಲ್ಲಿ ಕೂರ್ಗಳ್ಳಿ ಗ್ರಾಮದವರು ಕುಡಿಯುವ ನೀರಿಗೆ  ಕೂರ್ಗಳ್ಳಿ  ಕೆರೆಯ ನೀರನ್ನೇ  ಅವಲಂಬಿಸಿದ್ದರು. ಯಾವಾಗ ಕೆರೆಗೆ ಒಳಚರಂಡಿ ನೀರು ಹರಿದು ಬಂದು ಕೆರೆ ಕಲುಷಿತಗೊಂಡಿತೋ ಅಲ್ಲಿಂದಾಚೆಗೆ ಇದನ್ನು ಬಳಸುತ್ತಿಲ್ಲ.

ಈ ಬಗ್ಗೆ ಅಂದಿನ ಗ್ರಾಮ ಪಂಚಾಯಿತಿ ಹಾಗೂ ಜಿ ಪಂಚಾಯಿತಿ ಸದಸ್ಯರು ಮಾತ್ರವಲ್ಲದೆ ಶಾಸಕರೂ ಗಮನ ಹರಿಸದೆ ನಿರ್ಲಕ್ಷಿಸಿರುವುದು ಕಂಡು ಬರುತ್ತಿದೆ. ಕೆರೆ ಸಮೀಪ ಸ್ಮಶಾನಕ್ಕೆ ೧ ಎಕರೆ ಜಾಗ ಕಣ್ಣಳತೆಯ ಈ ಕೆರೆಯ ಈಗಿನ ವಿಸ್ತೀರ್ಣ ೪ರಿಂದ ೫ ಎಕರೆ ಇರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ.ಅದರಲ್ಲೂ ಸ್ಮಶಾನಕ್ಕಾಗಿ ೧ ಎಕರೆ ಹಾಗೂ ಕೆರೆ ಮಧ್ಯದಲ್ಲಿ ರಸ್ತೆ ನಿರ್ಮಿಸಲು ೨.೫ ಎಕರೆಯಷ್ಟು ಕೆರೆ ಭೂಮಿ ಬಳಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ೨೨.೨೦ ಎಕರೆ ಕೆರೆ ವಿಸ್ತೀರ್ಣದಲ್ಲಿ ಉಳಿದ ೧೯ ಎಕರೆ ಕೆರೆ ಕಾಣುತ್ತಿಲ್ಲ. ಇದರರ್ಥ ಕೆರೆ ಒತ್ತುವರಿ ಆಗಿದೆ ಎನ್ನುವುದು ಸ್ಪಷ್ಟವಾಗಿಕಾಣುತ್ತದೆ.

ಈ ಬಗ್ಗೆ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್. ಟಿ.ಸೋಮಶೇಖರ್ ಅವರು ಮೈಸೂರು ಜಿಲ್ಲಾಽಕಾರಿಗೆ ಪತ್ರ ಬರೆದು ಕೂರ್ಗಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು , ನೀರು ಕಲುಷಿತಗೊಂಡಿರುವಬಗ್ಗೆ ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದರು. ಈ ಕೆರೆಯ ಬಗ್ಗೆ ಗ್ರಾಮಸ್ಥರು ಹಿಂದಿನ ಸಂಸದ ಪ್ರತಾಪ್ ಸಿಂಹ ಅವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ

ಒತ್ತುವರಿ ತೆರವಿಗೆ ಒತ್ತಾಯ: 

೨೦ ವರ್ಷಗಳಿಂದ ಕೆರೆ ಉಳಿಸಿಕೊಳ್ಳುವ  ನಿಟ್ಟಿನಲ್ಲಿ ಗ್ರಾಮಸ್ಥರು ಹೋರಾಟ ಮಾಡುತ್ತಲೇ ಇದ್ದೇವೆ. ಈ ಹೋರಾಟದ ನಡುವೆಯೂ ಒತ್ತುವರಿ ಮುಂದುವರಿದಿದ್ದು,  ಕೆರೆಯ ಮುಕ್ಕಾಲು ಭಾಗವನ್ನು   ಭೂ ಮಾಫಿಯಾದವರು ನುಂಗಿzರೆ. ಒತ್ತುವರಿ ತೆರವು ಮಾಡಲು ಇರುವ ಮಾರ್ಗವೆಂದರೆ  ಸರ್ವೆ ಒಂದೆ. ಆಗ ಮಾತ್ರ ಯಾರು ಭೂಮಿಯನ್ನು  ಒತ್ತುವರಿ ಮಾಡಿzರೆ ಎಂಬುದು  ಸ್ಪಷ್ಟವಾಗುತ್ತದೆ. ಆಗ ಇದರ ತೆರವು ಹಾಗೂ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯ.  ಆದರೆ ಯಾವುದೇ ಅಧಿಕಾರಿ ಕೂರ್ಗಳ್ಳಿ ಕೆರೆ  ಸರ್ವೆಗೆ ಮುಂದಾಗದ ಕಾರಣ ಈಗಲೂ  ಕೆರೆ ಒತ್ತುವರಿ  ಎಗ್ಗಿ ಲ್ಲದೆ  ನಡೆಯುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

” ನಗರದ ಕೂರ್ಗಳ್ಳಿ ಕೆರೆ ಅಭಿವೃದ್ಧಿ   ಮಾಡಲಾಗುತ್ತದೆ. ಈ ಸಂಬಂಧವಾಗಿ ಈಗಾಗಲೇ  ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ. ಕೆರೆ ಜಾಗವನ್ನು ಯಾರೇ ಒತ್ತುವರಿ ಮಾಡಿದ್ದರು ಸರ್ವೆ ಮಾಡಿಸಿ  ತೆರವು ಮಾಡಲು ಸೂಚಿಸಿದ್ದೇನೆ. ಯಾರೇ ಒತ್ತುವರಿ ಮಾಡಿಕೊಂಡಿದ್ದರೂ  ತೆರವು ಮಾಡಿಸದೆ ಬಿಡುವುದಿಲ್ಲ.”

 -ಜಿ.ಟಿ.ದೇವೇಗೌಡ, ಶಾಸಕರು

” ಕೂರ್ಗಳ್ಳಿ ಕೆರೆ ಒತ್ತುವರಿಯಲ್ಲಿ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಇದೆ. ಕೈಗಾರಿಕೆ, ನಗರ ಅಭಿವೃದ್ಧಿ ಹೆಸರಲ್ಲಿ ಕೆರೆಗಳು ನಾಶವಾಗುತ್ತಿವೆ.  ಮೊದಲು ಕೆರೆಯ ವಿಸ್ತೀರ್ಣ  ೨೨ ಎಕರೆ ೨೦ ಗುಂಟೆ ಇದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಂಡು ಅಭಿವೃದ್ಧಿಗೆ ಮುಂದಾಗಬೇಕಿದೆ. ಅದನ್ನು ಬಿಟ್ಟು ಯಾವುದೋ ಸಂಸ್ಥೆಗೆ ಅಭಿವೃದ್ಧಿಗೆ ಕೊಟ್ಟಿದ್ದೇವೆ ಎನ್ನುವುದು ಸರಿಯಲ್ಲ. ಪಾರಂಪರಿಕ ನಗರ ಮೈಸೂರಿನ ಸಮೀಪದ ಈ ಕೆರೆಯ ಒತ್ತುವರಿ ತೆರವು ಮಾಡಿ ಪರಿಸರ ಉಳಿಸಿಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ.”

 -ಕಮಲ್ ಗೋಪಿನಾಥ್, ಅಧ್ಯಕ್ಷ,  ಪಿಯುಸಿಎಲ್, ಮೈಸೂರು

ಕೆರೆ ಶುದ್ಧೀಕರಿಸಿ ಪಾರ್ಕ್ ನಿರ್ಮಾಣ ಪ್ರಸ್ತುತ ಕೂರ್ಗಳ್ಳಿ ಕೆರೆ ಅಭಿವೃದ್ಧಿಗೆ ಸ್ಥಳೀಯ ಆಟೋಮೊಟೀವ್ ಆಕ್ಸಿಲ್ ಸಂಸ್ಥೆ ಮುಂದಾಗಿದೆ. ಕಲುಷಿತಗೊಂಡ ಕೆರೆಯ ನೀರನ್ನು ಶುದ್ದೀಕರಿಸಿ, ಒಳಚರಂಡಿ ನೀರು ಕೆರೆಗೆ ಹರಿಯದಂತೆ ತಡೆಯುವುದು, ಉದ್ಯಾನವನ ನಿರ್ಮಾಣ ಹಾಗೂ ವಾಕಿಂಗ್ ಟ್ರ್ಯಾಕ್ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಸಂಸ್ಥೆ ತನ್ನ ಸಿಎಸ್‌ಆರ್ ನಿಧಿಯಿಂದ ೪ ಕೋಟಿ ರೂ. ವೆಚ್ಚ ಮಾಡುತ್ತಿದೆ.

” ನಕ್ಷೆಗೆ ಅನುಗುಣವಾಗಿ ಕೆರೆ ಅಭಿವೃದ್ಧಿ ಆಗುತ್ತಿಲ್ಲ. ರಾಜಕಾರಣಿಗಳ ಕೈವಾಡದಿಂದ ನಮ್ಮ ಗ್ರಾಮದ ಕೆರೆಗೆ ಈ ಪರಿಸ್ಥಿತಿ ಒದಗಿದೆ. ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಸ್ಥರ ಒಪ್ಪಿಗೆಯೂ ಇದೆ. ಅನೇಕ ವರ್ಷಗಳಿಂದ ಕೆರೆ ಅಭಿವೃದ್ಧಿಗಾಗಿ ಹೋರಾಡುತ್ತಿದ್ದೇವೆ. ಕೆರೆ ಸುತ್ತಲೂ ಒತ್ತವರಿ ಆಗಿದೆ ಎಂದು ಜಿಲ್ಲಾಧಿಕಾರಿ, ಪೌರಾಯುಕ್ತರಿಗೂ ಮನವಿ ಮಾಡಿದ್ದೇವೆ.”

ಲೋಕೇಶ್, ಸ್ಥಳೀಯರು

” ಒತ್ತುವರಿ ತೆರವು ಮಾಡಿಸಿಯೇ ಅಭಿವೃದ್ಧಿ ಮಾಡುತ್ತೇವೆ. ಮತ್ತೊಮ್ಮೆ ಸರ್ವೆ ಮಾಡಿಸಿ ವರದಿ ಪಡೆದು ಕೆರೆಯನ್ನು ಉಳಿಸಲು ಪ್ರಯತ್ನಿಸುತ್ತೇನೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಯಾವುದೇ ಕಾರಣಕ್ಕೂ ಒತ್ತುವರಿಗೆ ಅವಕಾಶ ನೀಡುವುದಿಲ್ಲ.”

ಎಂ ಚಂದ್ರಶೇಖರ್, ಪೌರಾಯುಕ್ತರು, ಹೂಟಗಳ್ಳಿ ನಗರಸಭೆ, ಮೈಸೂರು

Tags:
error: Content is protected !!