Mysore
27
few clouds

Social Media

ಬುಧವಾರ, 21 ಜನವರಿ 2026
Light
Dark

ಹಳ್ಳಿಗರ ಬೆಳ್ಳಿ ರೇಖೆಯಾಗುತ್ತಿರುವ ಹೈನುಗಾರಿಕೆ

ಇರುವ ಅಲ್ಪಸ್ವಲ್ಪ ಭೂಮಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿಗಳನ್ನು ಎದುರಿಸಿಕೊಂಡು ಕೃಷಿ ಮಾಡಿ ಪ್ರತಿವರ್ಷವೂ ನಷ್ಟ ಅನುಭವಿಸುತ್ತಿದ್ದ ಅನೇಕ ರೈತಕುಟುಂಬಗಳ ಯುವಕರು ಹಳ್ಳಿಗಳನ್ನು ತೊರೆದು ನಗರಗಳತ್ತ ಮುಖ ಮಾಡುತ್ತಿದ್ದು, ಅಲ್ಲಿ ಸಿಗುವ ಅಲ್ಪ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ.

ಕೃಷಿ ಮಾಡಿ ನಷ್ಟ ಅನುಭವಿಸುವವರಂತೆಯೇ ಕೃಷಿಯಲ್ಲಿ ಲಾಭ ಗಳಿಸಿರುವ ರೈತರೂ ಇದ್ದಾರೆ. ಇವರನ್ನು ಸ್ಫೂರ್ತಿಯಾಗಿ ಪಡೆದ ಕೆಲ ಯುವಕರು ಮರಳಿ ಕೃಷಿಯತ್ತ ಮುಖ ಮಾಡಿದ್ದು, ಉಪ ಕಸುಬುಗಳೊಂದಿಗೆ ಕೃಷಿಯಲ್ಲಿ ಲಾಭ ಕಂಡುಕೊಳ್ಳುತ್ತಿದ್ದು, ಇಂತಹ ಉಪ ಕಸುಬುಗಳಲ್ಲಿ ಹೈನುಗಾರಿಕೆಯೂ ಒಂದು ಪ್ರಮುಖ ಕಸುಬಾಗಿದೆ.

ಹೈನುಗಾರಿಕೆ ಎಂಬುದು ಹಾಲಿನ ದೀರ್ಘಾವಧಿ ಉತ್ಪಾದನೆಗೆ ಸಂಬಂಧಿಸಿದಂತಿರುವ ಒಂದು ಕೃಷಿಯ ಅಥವಾ ಪಶುಸಂಗೋಪನೆಯ ಉದ್ಯಮವಾಗಿದ್ದು, ಇತ್ತೀಚೆಗೆ ನಿತ್ಯದ ಹಾಲು ಸಂಗ್ರಹಣೆಯಲ್ಲಿ ಕರ್ನಾಟಕ ಹಾಲು ಮಹಾಮಂಡಲವು ಒಂದು ಕೋಟಿ ಲೀ. ಹಾಲು ಸಂಗ್ರಹಿಸಿ ದಾಖಲೆ ಸೃಷ್ಟಿಸಿದ್ದು, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ರೈತರ ಪ್ರಮುಖ ಉಪ ಕಸುಬಾಗಿದೆ ಎಂಬುದಕ್ಕೆ ಪುಷ್ಟಿ ಕೊಡುತ್ತದೆ. 2-5 ಹಸುಗಳೊಂದಿಗೆ ಹೈನುಗಾರಿಕೆ ಆರಂಭಿಸಿದ್ದಲ್ಲಿ ತಿಂಗಳಿಗೆ 45-50 ಸಾವಿರ ರೂ.ಗಳ ಆದಾಯ ಪಡೆಯಬಹುದಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಬಹುತೇಕ ಯುವಕರು ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೂ ಬೆಳಿಗ್ಗೆ ಮತ್ತು ಸಂಜೆಯ ಹಾಲು ಉತ್ಪಾದನೆಯನ್ನೂ ಉಪಕಸುಬನ್ನಾಗಿಸಿಕೊಂಡಿದ್ದು, ಪ್ರತಿ ತಿಂಗಳು ಉತ್ತಮ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಎಲ್ಲ ಭಾಗಗಳಲ್ಲಿ ವಿದೇಶಿ ತಳಿಯ ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆ ಆರಂಭಿಸಿರುವ ಯುವ ಕೃಷಿಕರು ಒಂದು ಹಸುವಿನಿಂದ ಕನಿಷ್ಠ 6-10 ಲೀ. ಹಾಲು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಈ ಹಸುಗಳ ನಿರ್ವಹಣೆ ವೆಚ್ಚವೂ ಒಟ್ಟು ಲಾಭದ ಶೇ.30-ಶೇ.40ರಷ್ಟಿದ್ದು, ದೇಶೀಯ ತಳಿಗಳಿಗೆ ಹೋಲಿಸಿದರೆ ಇದು ಲಾಭದಾಯಕ ಎನ್ನುವುದು ಕೃಷಿಕರ ಮಾತು.

ದೇಶೀಯ ತಳಿಗಳಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದ್ದರೂ ಹಾಲಿನ ಗುಣಮಟ್ಟ ಅಧಿಕವಾಗಿರುತ್ತದೆ. ಅಲ್ಲದೆ ಇದರ ನಿರ್ವಹಣಾ ವೆಚ್ಚವೂ ಕಡಿಮೆಯಾಗಿದ್ದು, ಲಾಭದ ಪ್ರಮಾಣವೂ ಕಡಿಮೆ ಇದೆ. ಇದರಿಂದಾಗಿ ಹೆಚ್ಚಾಗಿ ಹೈನುಗಾರಿಕೆ ಮಾಡುವವರು ವಿದೇಶಿ ತಳಿಯ ಹಸುಗಳ ಮೊರೆ ಹೋಗುತ್ತಿದ್ದಾರೆ.

ಸದ್ಯ ರಾಜ್ಯದಲ್ಲಿ ಹಾಲು ಉತ್ಪಾದನೆಯೂ ಏರುಮುಖದಲ್ಲಿದೆ. ಯುವಕರು ಹೆಚ್ಚಾಗಿ ಹೈನುಗಾರಿಕೆಯತ್ತ ಮುಖ ಮಾಡಿರುವುದು ಈ ಉತ್ಪಾದನೆಯನ್ನು ಹೆಚ್ಚಿಸಿದ್ದು, ಸರ್ಕಾರವು ಪ್ರತಿ ಲೀ. ಹಾಲಿಗೆ 33.32 ರೂ. ಜತೆಗೆ ಪ್ರೋತ್ಸಾಹಧನವಾಗಿ 5 ರೂ.ಗಳನ್ನು ಸೇರಿಸಿ ನೀಡುತ್ತಿದೆ. ಇದರಿಂದಾಗಿ ಹೈನುಗಾರಿಕೆ ಮಾಡುವವರಿಗೆ ಉತ್ತಮ ಲಾಭ ಸಿಗುತ್ತಿದೆ. ಇದರಿಂದಾಗಿ ಒಂದೆರಡು ಹಸುಗಳ ಮೂಲಕ ಹೈನುಗಾರಿಕೆ ಆರಂಭಿಸಿ ಇಂದು 10-20 ಹಸುಗಳ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸಿ ಉತ್ತಮ ಬದುಕು ಕಟ್ಟಿಕೊಂಡ ಕೃಷಿಕರಿದ್ದಾರೆ. ಒಂದೆಡೆ ಕೃಷಿಕರು ಹಳ್ಳಿಗಳನ್ನು ಬಿಟ್ಟು ಪಟ್ಟಣ ಸೇರುತ್ತಿದ್ದರೆ ಮತ್ತೊಂದೆಡೆ ಯುವಸಮೂಹ ತಮ್ಮ ಖಾಸಗಿ ಕಂಪೆನಿಗಳ ಕಚೇರಿ ಕೆಲಸಗಳ ಜತೆ ಹೈನುಗಾರಿಕೆಯನ್ನೂ ಮಾಡುತ್ತಾ ಕ್ಷೀರ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. ಹಾಲು ಉತ್ಪಾದಕರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸು ತ್ತಿರುವ ಸ್ಥಳಗಳಲ್ಲಿ ಹಾಲು ಉತ್ಪಾದನೆಯೂ ಹೆಚ್ಚಾಗಿದ್ದು, ಇದರಿಂದಾಗಿ ಹಾಲಿನ ಉತ್ಪನ್ನಗಳೂ ಹೆಚ್ಚಾಗುತ್ತಿರುವುದು ಕೃಷಿ ಕ್ಷೇತ್ರದ ಸಾಧನೆಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು.

ನಾನು ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರೂ ಮೂಲತಃ ಕೃಷಿಕ ಕುಟುಂಬದವನಾಗಿರುವುದರಿಂದ ಹೈನುಗಾರಿಕೆ ನನ್ನ ಉಪಕಸುಬಾಗಿದೆ. 10 ಹಸುಗಳ ಮೂಲಕ ಹೈನುಗಾರಿಕೆ ಮಾಡುತ್ತಿದ್ದೇನೆ. ಉತ್ತಮ ಲಾಭವಿದೆ. ಗುಣಮಟ್ಟದ ಜೀವನ ಸಾಗಿಸುತ್ತಿದ್ದೇನೆ. ಯುವಕರು ಹೆಚ್ಚಾಗಿ ಕೃಷಿಯತ್ತ ಮರಳಬೇಕು. ಉಪಕಸುಬುಗಳನ್ನು ಆಧರಿಸಿಕೊಂಡು ಕೃಷಿ ಮಾಡುವುದು ಒಳಿತು.
-ಭರತ್‌, ಯುವ ಹೈನುಗಾರಿಕೆ ಕೃಷಿಕ.

Tags:
error: Content is protected !!