Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ; ಕಚೇರಿಗಳು ಖಾಲಿ

ಮಹೇಶ ಕೋಗಿಲವಾಡಿ

ಪಿರಿಯಾಪಟ್ಟಣ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇ ರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆಯು ತಾಲ್ಲೂಕು ಮಟ್ಟದಿಂದ ಜಿಲ್ಲಾಧಿಕಾರಿ ಕಚೇರಿ ಬಳಿಗೆ ತಲುಪಿದ್ದು, ಇತ್ತ ತಾಲ್ಲೂಕಿನಲ್ಲಿ ರೈತರು ತಮ್ಮ ದಾಖಲಾತಿಗಳಿಗೆ ಪ್ರತಿನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ.

ರೈತರು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ಬರಿಗೈಯಲ್ಲಿ ಸಾರ್ವಜನಿಕರು ತಮ್ಮ ಮೂಲ ಆಗುತ್ತಿದ್ದಾರೆ. ರೈತರಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವಂತಹ ಪಹಣಿ, ವಿವಿಧ ಇಲಾಖೆಗಳಿಗೆ ಬೇಕಾಗಿರುವ ದಾಖಲಾತಿಗಳ ಪ್ರಮಾಣಪತ್ರಗಳು, ವಿದ್ಯಾರ್ಥಿಗಳಿಗೆ ಬೇಕಾದ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗೆ ಅಧಿಕಾರಿಯ ಸಹಿ ಮುಂತಾದ ಅನೇಕ ಕೆಲಸಗಳು ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆಯ ಪರಿಣಾಮ ಸ್ಥಗಿತವಾಗಿವೆ.

ಸಾರ್ವಜನಿಕರು ತಮ್ಮ ಮೂಲ ದಾಖಲಾತಿಗಳಿಗೆ ಮತ್ತು ಸಹಿಗಳಿಗಾಗಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪ್ರತಿನಿತ್ಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಹುಡುಕಿಕೊಂಡು ಅವರನ್ನು ಭೇಟಿ ಮಾಡಲು ಬಂದರೆ ಕಚೇರಿಗಳು ಖಾಲಿ ಹೊಡೆಯುತ್ತಿದ್ದು, ಬರಿಗೈಯಲ್ಲಿ ವಾಪಸ್ ಆಗುತ್ತಿರುವುದು ಕಂಡುಬರುತ್ತಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಚೇರಿಗಳಲ್ಲಿ ಬರೀ ಖಾಲಿ ಕುರ್ಚಿಗಳು ಮತ್ತು ಕಂಪ್ಯೂಟರ್‌ಗಳು ಮಾತ್ರ ಕಂಡುಬರುತ್ತಿದ್ದು, ಬಿಕೋ ಎನ್ನುತ್ತಿದೆ.

ಆದ್ದರಿಂದ ಸರ್ಕಾರ ಶೀಘ್ರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ಬಗ್ಗೆ ಗಮನಹರಿಸಿ ಅವುಗಳಿಗೆ ಪರಿಹಾರ ಸೂಚಿಸಿ ಸಾರ್ವಜನಿಕರಿಗೆ ಕೆಲಸ ಕಾರ್ಯ ಗಳು ಸುಗಮವಾಗಿ ನಡೆಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

 

Tags: