ಹೆಚ್.ಎಸ್.ದಿನೇಶ್ ಕುಮಾರ್
ಮೈಸೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಂದ ಅಂಚೆ ಮೂಲಕ ದಂಡ ವಸೂಲು ಮಾಡುವ ಕಾರ್ಯಕ್ಕೆ ಕೊಂಚ ಹಿನ್ನಡೆಯಾಗುತ್ತಿರುವುದರಿಂದ ಪೊಲೀಸ್ ಆಯುಕ್ತರು ವಿಶೇಷ ತಪಾಸಣೆ ಕೈಗೊಳ್ಳಲು ನಿರ್ಧರಿಸಿದ್ದು, ಈ ಮೂಲಕ ಸ್ಥಳದಲ್ಲಿಯೇ ದಂಡ ವಸೂಲು ಕಾರ್ಯಕ್ಕೆ ಮುಂದಾಗಿದ್ದಾರೆ.
ಇದು ವಾಹನ ಸವಾರರ ನಿರ್ಲಕ್ಷ ವೋ ಅಥವಾ ನಾವು ತಪ್ಪೇ ಮಾಡಿಲ್ಲ ಎಂಬ ಮನೋ ಭಾವನೆಯೋ ಒಟ್ಟಾರೆಯಾಗಿ ನೋಟಿಸ್ ಪಡೆದ ಬಹುತೇಕ ವಾಹನ ಮಾಲೀಕರು ದಂಡ ಪಾವತಿಸಲು ಮುಂದಾಗುತ್ತಿಲ್ಲ. ಹೀಗಾಗಿ ದಂಡ ವನ್ನು ವಸೂಲು ಮಾಡಿಯೇ ತೀರಬೇಕೆಂದು ನಿರ್ಧರಿಸಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ವಿಶೇಷ ತಪಾಸಣಾ ಕಾರ್ಯವನ್ನು ಆರಂಭಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರತೀ ದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ತಪಾಸಣಾ ಕಾರ್ಯ ಕೈಗೊಳ್ಳಲಾಗುತ್ತದೆ. ಈ ಮೊದಲು ವಾಹನ ಸವಾರರು ಶಿರಸ್ತ್ರಾಣ ಧರಿಸಿದವರ ವಾಹನಗಳನ್ನು ತಪಾಸಣೆ ಮಾಡುತ್ತಿರಲಿಲ್ಲ. ಕೆಲ ಸಂದರ್ಭಗಳಲ್ಲಿ ಮಾತ್ರ ಹೆಲ್ಮೆಟ್ ಧರಿಸಿದ್ದರೂ ಕೂಡ ವಾಹನಗಳ ದಾಖಲೆಗಳನ್ನು ಪರಿಶೀಲಿಸಲು ತಡೆದು ನಿಲ್ಲಿಸುತ್ತಿದ್ದರು.
ಆದರೆ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರ ಸೂಚನೆ ಮೇರೆಗೆ ಇನ್ನು ಮುಂದೆ ಹೆಲ್ಮೆಟ್ ಧರಿಸಿರಲಿ, ಧರಿಸಿಲ್ಲದಿರಲಿ ಎಲ್ಲ ವಾಹನಗಳನ್ನೂ ಪೊಲೀಸರು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.
ಕಾರ್ಯಾಚರಣೆ ಹೇಗೆ…?
ಸಂಚಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ಸೇರಿದಂತೆ ನಗರ ವ್ಯಾಪ್ತಿಯ ಎಲ್ಲ ಠಾಣೆಗಳ ಪೊಲೀಸರು ಪ್ರತೀ ದಿನ ಬೆಳಿಗ್ಗೆ ಹಾಗೂ ಸಂಜೆ ಕಾರ್ಯಾಚರಣೆ ನಡೆಸಲಿದ್ದಾರೆ. ರಸ್ತೆಯಲ್ಲಿ ಸಾಗುವ ಎಲ್ಲ ದ್ವಿಚಕ್ರ ವಾಹನಗಳನ್ನೂ ತಡೆದು ನಿಲ್ಲಿಸುವ ಪೊಲೀಸರು, ಅವರ ವಾಹನಗಳ ಸಂಖ್ಯೆಯನ್ನು ಉಪಕರಣಕ್ಕೆ ನೀಡುತ್ತಾರೆ. ವಾಹನ ಸವಾರರು ಈ ಹಿಂದೆ ಎಲ್ಲಿಯಾದರೂ ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲಿ ಅದು ಯಂತ್ರದಲ್ಲಿ ದಾಖಲಾಗಿರುತ್ತದೆ. ಹೀಗಾಗಿ ವಾಹನದ ಸಂಖ್ಯೆಯನ್ನು ಉಪಕರಣಕ್ಕೆ ನೀಡಿದಲ್ಲಿ ವಾಹನ ಸವಾರರು ಎಷ್ಟು ಬಾರಿ ಹಾಗೂ ಯಾವ ಸ್ಥಳದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಎಂಬ ಮಾಹಿತಿ ಹಾಗೂ ಎಷ್ಟು ದಂಡ ಪಾವತಿ ಬಾಕಿ ಇದೆ ಎಂಬುದನ್ನು ತೋರಿಸುತ್ತದೆ. ಪೊಲೀಸರು ದಂಡದ ಹಣವನ್ನು ಸ್ಥಳದಲ್ಲಿಯೇ ಪಾವತಿಸುವಂತೆ ಸೂಚನೆ ನೀಡಲಿದ್ದಾರೆ.
ಒಟ್ಟಾರೆ ನಿಯಮ ಉಲ್ಲಂಘಿಸಿದ್ದಲ್ಲದೆ, ದಂಡವನ್ನೂ ಪಾವತಿಸದೇ ವಾಹನ ಚಾಲನೆ ಮಾಡುವವರಿಗೆ ಪೊಲೀಸರು ಕಾನೂನಿನ ಪಾಠ ಹೇಳುವುದರ ಜೊತೆಗೆ ಬಾಕಿ ಉಳಿಸಿಕೊಂಡಿರುವ ದಂಡವನ್ನೂ ವಸೂಲಿ ಮಾಡುವ ಮೂಲಕ ಸವಾರರಿಗೆ ಚುರುಕು ಮುಟ್ಟಿಸಲು ಸಿದ್ಧತೆ ನಡೆಸಿದ್ದಾರೆ.
” ಸಂಚಾರ ನಿಯಮ ಉಲ್ಲಂಘಿಸುವುದು ತಪ್ಪು. ನೋಟಿಸ್ ಪಡೆದೂ ದಂಡ ಪಾವತಿಸದಿರುವುದು ಎರಡನೇ ತಪ್ಪು. ಸಂಚಾರ ನಿಯಮ ಉಲ್ಲಂಘಿಸಿದವರು ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಮುಂದಿನ ದಿನಗಳಲ್ಲಿ ಸಂಚಾರ ತಪಾಸಣೆಯನ್ನು ಮತ್ತಷ್ಟು ಹೆಚ್ಚಿಸಿ ಬಾಕಿ ಉಳಿದಿರುವ ದಂಡವನ್ನು ಪಾವತಿಸಿಕೊಳ್ಳಲಾಗುವುದು. ದಂಡ ಪಾವತಿಸಲು ನಿರಾಕರಿಸಿದಲ್ಲಿ ವಾಹನವನ್ನು ವಶಕ್ಕೆ ಪಡೆಯಲಾಗುವುದು.”
-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು