Mysore
24
few clouds

Social Media

ಶನಿವಾರ, 10 ಜನವರಿ 2026
Light
Dark

‘ಫುಟ್‌ಪಾತ್ ಆಕ್ರಮಿಸಿದ ವಾಹನಗಳು; ತಪ್ಪದ ಗೋಳು’

ಪ್ರಶಾಂತ್ ಎಸ್.

ಮೈಸೂರು: ವಾಹನಗಳು ರಸ್ತೆಯ ಮೇಲೆ ಸಂಚರಿಸಿದರೆ, ಪಾದಚಾರಿಗಳು ಫುಟ್‌ಪಾತ್ ಮೇಲೆ ಸಂಚರಿಸಬೇಕೆನ್ನುವುದು ಸಾಮಾನ್ಯ ಸಂಗತಿ. ಆದರೆ,ನಗರದ ಹೃದಯ ಭಾಗ ಮತ್ತು ಜನನಿಬಿಡ ಪ್ರದೇಶ ಗಳಾದ ನಾರಾಯಣಶಾಸ್ತ್ರಿ ರಸ್ತೆ, ಅಶೋಕ ರಸ್ತೆ, ಸುಣ್ಣದಕೇರಿ, ಅಶೋಕ ವೃತ್ತ, ಆರ್‌ಟಿಒ ವೃತ್ತ, ಸರಸ್ವತಿಪುರಂ (ಹೊಂಡಾ ಷೋ ರೂಂ ಆಸು ಪಾಸು), ಸೇರಿದಂತೆ  ಫುಟ್ ಪಾತ್ ಮೇಲೆ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು ಸಾರ್ವಜನಿಕರು ರಸ್ತೆಯ ಮಧ್ಯೆಯೇ ಸಂಚರಿಸ ಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಇದು ನಗರದ ಬಹಳ ಕಡೆ ಹಲವು ವರ್ಷಗಳಿಂದಲೂ ಇರುವ ಸಮಸ್ಯೆಯಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಅಂಗಡಿಗಳ ಮಾಲೀಕರಿಂದಲೇ ಸಮಸ್ಯೆ: ರಸ್ತೆಯ ಅಕ್ಕ ಪಕ್ಕದಲ್ಲಿರುವ ಅಂಗಡಿಗಳ ಮಾಲೀಕರು, ತಮ್ಮ ಅಂಗಡಿ ಮಳಿಗೆಗಳ ಮುಂದಿನ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಅಲ್ಲಿ ಅವರ ಮಾರಾಟ ವಸ್ತುಗಳು, ಜಾಹೀರಾತು ಫಲಕಗಳನ್ನು ಇರಿಸಲೋ ಅಥವಾ ವಾಹನ ಗಳನ್ನು ನಿಲ್ಲಿಸಿಕೊಳ್ಳಲೋ ಬಳಕೆ ಮಾಡಿಕೊಳ್ಳುವುದು ಪರಿಪಾಠವಾಗಿದೆ. ಅಂಗಡಿ ಮಳಿಗೆ ಎದುರಿನ ಜಾಗ ತಮ್ಮದೆಂಬಂತೆ ಮಾಲೀಕರು ವರ್ತಿಸುತ್ತಿದ್ದಾರೆ ಎಂಬ ಆರೋಪ ಕೆಲವು ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬರುತ್ತಿದೆ.

ಹೀಗಾಗಿ ಪಾದಚಾರಿ ಮಾರ್ಗದಲ್ಲಿ ಸಂಚರಿಸಬೇಕಾದ ಸಾರ್ವ ಜನಿಕರು ವಿಧಿಯಿಲ್ಲದೆ ರಸ್ತೆಗೆ ಇಳಿದು ನಡೆದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರು ನಗರದ ಬಹುತೇಕ ಕಡೆ ಇಂತಹ ದೃಶ್ಯಗಳು ಕಾಣಸಿಗುತ್ತವೆ. ಫುಟ್ ಪಾತ್‌ನಂತೆ ರಸ್ತೆಯ ಬಳಕೆ: ಹೆಚ್ಚು ಜನಸಂದಣಿ ಇರುವ ಸಮಯವಾದ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ನಗರದ ಪ್ರಮುಖ ರಸ್ತೆಗಳು ಗಿಜಿಗುಡುತ್ತವೆ. ನಡೆದು ಹೋಗು ವಾಗ ಸಾರ್ವಜನಿಕರಿಗೆ ವಾಹನಗಳು ತಾಗುವುದು, ವಾಹನ ಸವಾರರು ಹಾಗೂ ಪಾದಚಾರಿಗಳ ನಡುವೆ ಜಟಾಪಟಿ ನಿತ್ಯ ಸಾಮಾನ್ಯ ವಾಗಿದೆ.ಸಾರ್ವ ಜನಿಕರೂ ಕೂಡ ವ್ಯವಸ್ಥೆಗೆ ಹೊಂದಿಕೊಂಡು, ತಮಗೆ ಅರಿವಿಲ್ಲದಂತೆಯೇ ರಸ್ತೆಗಳನ್ನೇ ಫುಟ್‌ಪಾತ್‌ಗಳಂತೆ ಬಳಸುತ್ತಿದ್ದಾರೆ. ಆದರೆ ಅಪಾಯ ವನ್ನು ತಮ್ಮ ಮೈಮೇಲೆಳೆದು ಕೊಳ್ಳುತ್ತಿರುವುದರ ಅರಿವು ಹಲವರಿಗೆ ಇಲ್ಲದಾಗಿದೆ.

ಕಿತ್ತು ಹೋದ ರಸ್ತೆಗಳು: ಅಶೋಕ ವೃತ್ತ, ಶ್ರೀರಾಂಪುರ, ಕುವೆಂಪುನಗರ, ವಿಜಯ ಬ್ಯಾಂಕ್ ಸರ್ಕಲ್ ಸೇರಿದಂತೆ ಕೆಲವು ಕಡೆಪಾದಚಾರಿ ಮಾರ್ಗಕ್ಕೆ ಹಾಕಲಾಗಿರುವ ಕಲ್ಲುಗಳು ಅಥವಾ ಸಿಮೆಂಟ್ ಬ್ಲಾಕ್‌ಗಳು ಕಿತ್ತು ಹೋಗಿವೆ. ಇಲ್ಲಿ ಸಂಚರಿಸುವಾಗ ಪಾದಚಾರಿಗಳು ಲಾಂಗ್ ಜಪ್ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕಾಲು ಚರಂಡಿಯೊಳಗೆ ಹೋಗಿಬಿಟ್ಟಿರುತ್ತದೆ. ಅಥವಾ ಎಡವಿ  ಬೀಳಬೇಕಾಗುತ್ತದೆ. ಅಂಗಡಿಯ ಜಾಹೀರಾತು ಫಲಕಗಳನ್ನು ಪಾದಚಾರಿ ಮಾರ್ಗ ಗಳಿಗೆ ಅಡ್ಡಲಾಗಿ ಇಡುವುದರಿಂದ ಪಾದಚಾರಿಗಳುಕಿರಿಕಿರಿ ಅನುಭವಿಸುವಂತಾಗಿದೆ. ಈ ರಸ್ತೆಗಳಲ್ಲಿರುವ ಸಣ್ಣಪುಟ್ಟ ಹೋಟೆಟ್‌ಗಳವರು ಪಾದಚಾರಿ ಮಾರ್ಗವನ್ನು ಟೇಬಲ್ ಇಡಲು ಬಳಸಿಕೊಳ್ಳುತ್ತಿದ್ದಾರೆ. ರಾಜಾರೋಷವಾಗಿ ಫುಟ್ ಪಾತ್ ಗಳ ಅತಿಕ್ರಮಣ ನಡೆಯುತ್ತಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಅಸಹಾಯಕ ರಾಗಿ ಕುಳಿತಿರುವುದಕ್ಕೆ ನಾಗರಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ

” ಹೆಚ್ಚು ಜನದಟ್ಟಣೆಇರುವ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಹೆಚ್ಚು ಜನದಟ್ಟಣೆ ಉಂಟಾಗುವುದರಿಂದ ವೃದ್ಧರು, ಮಹಿಳೆಯರು, ಮಕ್ಕಳು ವಿದ್ಯಾರ್ಥಿ,ವಿದ್ಯಾರ್ಥಿನಿಯರು ಓಡಾಡುವುದೇ ದುಸ್ತರವಾಗುತ್ತದೆ. ಫುಟ್ ಪಾತ್‌ಗಳ ಮೇಲೆ ನಿಲ್ಲಿಸಲಾಗುವ ವಾಹನಗಳನ್ನು ತೆರವುಗೊಳಿಸಿದರೆ ಸುಗಮವಾಗಿ ನಡೆದು ಹೋಗಬಹುದು. ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ನಿರ್ವಹಣೆ ಸರಿಯಾಗಿಲ್ಲ”

-ಮಂಜುಪ್ರಕಾಶ್, ಆಲನಹಳ್ಳಿ

” ನಗರಪಾಲಿಕೆ ವತಿಯಿಂದ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಭೆ ನಡೆಸಿ ಅಂಗಡಿ ಬೋರ್ಡ್ಗಳನ್ನು ಸ್ವಲ್ಪ ಹಿಂದಕ್ಕೆ ಹಾಕಿಕೊಳ್ಳಲು ಸೂಚಿಸುವುದರ ಜೊತೆಗೆ ವಾಹನ ಗಳನ್ನುಫುಟ್ ಪಾತ್ ಮೇಲೆ ನಿಲ್ಲಿಸದಂತೆ ಸೂಚನೆ ನೀಡಿ, ಪಾದಚಾರಿಗಳ ಸುಗಮ ಓಡಾಡಕ್ಕೆ ಅನುವು ಮಾಡಿಕೊಡಲಾಗುತ್ತದೆ.”

-ಶೇಖ್ ತನ್ವೀರ್ ಆಸಿಫ್‌, ಆಯುಕ್ತರು, ನಗರ ಪಾಲಿಕೆ

Tags:
error: Content is protected !!