ನವೀನ್ ಡಿಸೋಜ
ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ
ಮಡಿಕೇರಿ: ಬೇಸಿಗೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಬೆಂಕಿ ರೇಖೆ ನಿರ್ಮಾಣ ಕಾರ್ಯ ಮಾಡಿಕೊಂಡಿರುವ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.
ಚಳಿ ಕಡಿಮೆಯಾಗುತ್ತಿದ್ದಂತೆ ಬಿಸಿಲಿನ ತೀವ್ರತೆ ಹೆಚ್ಚಾಗಲಿದ್ದು, ಅಲ್ಲಲ್ಲಿ ಕಾಡ್ಗಿಚ್ಚು ಕಾಣಿಸಿ ಕೊಳ್ಳುವ ಸಾಧ್ಯತೆ ಇದೆ. ಬೆಂಕಿಯಿಂದ ಅರಣ್ಯ ವನ್ನು ರಕ್ಷಿಸಲು ಈಗಾಗಲೇ ಹಲವು ಯೋಜನೆ ಗಳನ್ನು ಹಮ್ಮಿಕೊಂಡಿರುವ ಅರಣ್ಯ ಇಲಾಖೆ ಜಾಗೃತಿಯ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕಳೆದ ಬೇಸಿಗೆಯಲ್ಲಿ ಬೆಂಕಿಯಿಂದ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗದಂತೆ ತಡೆಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ಯಾವುದೇ ಕಾಡ್ಗಿಚ್ಚು ಪ್ರಕರಣಗಳಿಲ್ಲದಂತೆ ಎಚ್ಚರ ವಹಿಸಲಾಗಿದ್ದು, ಈ ಬಾರಿಯೂ ಇಂತಹ ಸಮಸ್ಯೆಗಳಾಗದಂತೆ ಕ್ರಮ ವಹಿಸಲು ಅರಣ್ಯ ಸಂರಕ್ಷಣಾಕಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇತ್ತೀಚೆಗೆ ಮಡಿಕೇರಿಯ ಅರಣ್ಯ ಭವನದಲ್ಲಿ ಈ ಸಂಬಂಧ ಸಭೆ ನಡೆಸಲಾಗಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಈಗಾಗಲೇ ಜಿಲ್ಲೆಯಾದ್ಯಂತ ಅರಣ್ಯದಂಚಿನಲ್ಲಿ ಬೆಂಕಿ ರೇಖೆ(ಫೈರ್ ಲೈನ್) ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಮುಖ್ಯವಾಗಿ ಹೈವೇ ಬದಿಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡರೂ ಅದು ಕಾಡಿಗೆ ಹರಡದಂತೆಕ್ರಮ ವಹಿಸಲಾಗುತ್ತಿದೆ. ಇದಲ್ಲದೆ ಅರಣ್ಯದ ಒಳಭಾಗದಲ್ಲಿಯೂ ಅಲ್ಲಲ್ಲಿ ಗಡಿಗಳನ್ನು ನಿರ್ಮಾಣ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಒಂದು ಭಾಗಕ್ಕೆ ಬೆಂಕಿ ತಗುಲಿದರೂ ಅದು ಅರಣ್ಯದೊಳಗಿನ ಇತರ ಭಾಗಗಳಿಗೆ ಹರಡದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ಮಡಿಕೇರಿ ಡಿಸಿಎಫ್ ಅಭಿಷೇಕ್ ಮಾಹಿತಿ ನೀಡಿದ್ದಾರೆ.
ಕೊಡಗಿನಲ್ಲಿ ಹುಲ್ಲುಗಾವಲಿನಲ್ಲಿ ಹೊಸ ಚಿಗುರು ಬೆಳೆಯಬೇಕೆಂದು ಬೆಂಕಿ ಹಚ್ಚುವ ಪ್ರಕರಣಗಳು ವರ್ಷದಲ್ಲಿ ೨, ೩ ವರದಿಯಾಗುತ್ತಲೇ ಇದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಬೇಸಿಗೆಯಲ್ಲಿ ಯಾವ ರೀತಿ ಎಚ್ಚರ ವಹಿಸಬೇಕು ಎಂಬುದರ ಕುರಿತಾ ಗಿಯೂ ಜಿಲ್ಲೆಯ ನಾನಾ ಕಡೆ ಬೀದಿ ನಾಟಕ ಗಳ ಮೂಲಕ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ.
ತಂತ್ರಜ್ಞಾನದ ಬಳಕೆ, ೨೪ ಗಂಟೆಯೂ ನಿಗಾ…:ರಾಜ್ಯದ ಅರಣ್ಯಗಳಲ್ಲಿ ಎಲ್ಲಿಯೇ ಬೆಂಕಿ ಕಾಣಿಸಿಕೊಂಡರೂ ಸ್ಯಾಟಲೈಟ್ ಮೂಲಕ ಇಲಾಖೆಯ ಅಧಿಕಾರಿಗಳು ಮತ್ತು ಆ ವ್ಯಾಪ್ತಿಯ ಬೀಟ್ ಗಾರ್ಡ್‌ಗಳಿಗೆ ತಲುಪುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಳೆದ ಕೆಲ ವರ್ಷಗಳಿಂದ ಈ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದ್ದು, ಈ ಬಾರಿ ಸಿ ಅಂಡ್ ಸಿ ಕೇಂದ್ರ ತೆರೆಯಲಾಗಿರುವುದರಿಂದ ಈ ಕೇಂದ್ರದ ಮೂಲಕ ೨೪ ಗಂಟೆಯೂ ನಿಗಾ ವಹಿಸಲಾಗುತ್ತದೆ. ಬೆಂಕಿ ಕಂಡು ಬಂದ ಕೂಡಲೇ ಆ ವ್ಯಾಪ್ತಿಯ ಬೀಡ್ ಗಾರ್ಡ್ ಮತ್ತು ಫೈರ್ ವಾಚರ್‌ಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ. ಜನರಿಂದ ಸುಳ್ಳು ಮಾಹಿತಿ ಬಂದಾಗಲೂ ಫೈರ್ ವಾಚರ್ಸ್ ಪರಿಶೀಲಿಸಿ ಆ ಸಂಬಂಧ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ
” ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಫೈರ್ ವಾಚರ್‌ಗಳ ನೇಮಕ, ತಂತ್ರಜ್ಞಾನ ಬಳಸಿಕೊಂಡು ಕಾಡ್ಗಿಚ್ಚು ತಡೆಯುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.”
-ಅಭಿಷೇಕ್, ಡಿಸಿಎಫ್, ಮಡಿಕೇರಿ





