ಮಂಜು ಕೋಟೆ
ಇಂದಿನ ಕಾರ್ಯಕ್ರಮದಲ್ಲಿ ಮುನಿಸು ಮರೆತು ಒಗ್ಗಟ್ಟು ತೋರ್ಪಡಿಸಲಿರುವ ಹಾಲಿ-ಮಾಜಿ ಶಾಸಕರು
ಎಚ್.ಡಿ.ಕೋಟೆ: ಹಾಲಿ ಮತ್ತು ಮಾಜಿ ಶಾಸಕರು, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ನಾಯಕರ ಸಂಘ, ಇತರ ಗಣ್ಯರು, ಮುಖಂಡರ ಸಮ್ಮುಖದಲ್ಲಿ ಒಗ್ಗಟ್ಟಿನಿಂದ ಮಂಗಳವಾರ ನಡೆಯ ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಕುತೂಹಲ ಮೂಡಿಸಿದೆ.
ತಾಲ್ಲೂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಶಾಸಕರಾದ ಅನಿಲ್ ಚಿಕ್ಕಮಾದು ಮತ್ತು ಮಾಜಿ ಶಾಸಕರಾದ ಬೀಚನಹಳ್ಳಿ ಚಿಕ್ಕಣ್ಣ, ಪುರಸಭೆ ಅಧ್ಯಕ್ಷರಾದ ಶಿವಮ್ಮ ಚಾಕಹಳ್ಳಿ ಕೃಷ್ಣ, ಉದ್ಯಮಿ ಎನ್, ಬೆಳ್ತೂರು ನಿಂಗರಾಜು, ನಾಯಕರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಸಿ.ದೊಡ್ಡ ನಾಯಕ ಸೇರಿದಂತೆ ಸಮುದಾಯದವರು ಒಗ್ಗಟ್ಟಿನಿಂದ ವಾಲ್ಮೀಕಿ ಜಯಂತಿಯನ್ನು ಮಂಗಳವಾರ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದಾರೆ.
ತಾಲ್ಲೂಕು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ದಿನದಿಂದ ಯಾವುದೇ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಚಿಕ್ಕಮಾದು ಮತ್ತು ಬೀಚನಹಳ್ಳಿ ಚಿಕ್ಕಣ್ಣ, ಕುಟುಂಬದವರು, ಬೆಂಬಲಿಗರು ಭಾಗಿಯಾಗಿರಲಿಲ್ಲ. ೧೭ ವರ್ಷಗಳ ನಂತರ ಶಾಸಕ ಅನಿಲ್ ಚಿಕ್ಕಮಾದು ಮತ್ತು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಇನ್ನಿತರ ಮುಖಂಡರು, ಗಣ್ಯರು ಒಗ್ಗಟ್ಟಾಗಿ, ಮನಸ್ತಾಪ, ರಾಜಕೀಯ ವೈಮನಸ್ಸುಗಳನ್ನು ಬಿಟ್ಟು ಕಾರ್ಯಕ್ರಮ ನಡೆಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಈಗಾಗಲೇ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳು, ಸಮುದಾಯದವರು ಮುಖಂಡರ ಸಭೆಗಳನ್ನು ನಡೆಸಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಪಕ್ಷಾತೀತವಾಗಿ ನಡೆಯುತ್ತಿದ್ದು, ಯಾವುದೇ ಸಮಸ್ಯೆಗಳು ಎದುರಾಗಬಾರದು, ಅರ್ಥ ಪೂರ್ಣವಾಗಿ, ಅದ್ಧೂರಿಯಾಗಿ ನಡೆಸಬೇಕು ಎಂದು ತೀರ್ಮಾನಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮದ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಪ್ರಮುಖ ರಸ್ತೆ ಗಳಲ್ಲಿ ಕಟೌಟ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಪಟ್ಟಣದ ಹನುಮಂತ ನಗರದ ವಾಲ್ಮೀಕಿ ವೃತ್ತದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಶಾಸಕರು, ಮಾಜಿ ಶಾಸಕರು, ಅನೇಕ ಗಣ್ಯರು, ಮುಖಂಡರು ಪೂಜೆ ಸಲ್ಲಿಸಿ, ಕಲಾತಂಡಗಳನ್ನು ಒಳಗೊಂಡ ಬೃಹತ್‌ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಂತರ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಅಂಬೇಡ್ಕರ್ ಭವನಕ್ಕೆ ಆಗಮಿಸಲಿದ್ದಾರೆ.
ಕೋಟೆ, ಸರಗೂರು ತಹಸಿಲ್ದಾರ್‌ಗಳಾದ ಶ್ರೀನಿವಾಸ್, ಮೋಹನಕುಮಾರಿ, ತಾಪಂ ಇಒಗಳಾದ ಧರಣೇಶ್, ಪ್ರೇಮ್ ಕುಮಾರ್, ಪುರಸಭೆ ಮುಖ್ಯ ಅಧಿಕಾರಿಗಳಾದ ಸುರೇಶ್, ಸಂತೋಷ್ ಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿ.ಆರ್.ಮಹೇಶ್, ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷರಾದ ಎಂ.ಸಿ.ದೊಡ್ಡನಾಯಕ, ಪುರದ ಕಟ್ಟೆ ಬಸವರಾಜು, ಮತ್ತಿತರರು ಕಾರ್ಯಕ್ರಮದ ರೂಪರೇಷೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಇಂದು ಜಾ.ದಳ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ:
ಎಚ್.ಡಿ.ಕೋಟೆ: ಕ್ಷೇತ್ರದ ಜಾ.ದಳ ಪಕ್ಷದ ಸಂಭವನೀಯ ಅಭ್ಯರ್ಥಿ ಮತ್ತು ಸಮಾಜ ಸೇವಕ ಕೆ.ಎಂ.ಕೃಷ್ಣನಾಯಕ ಅವರು ಪಟ್ಟಣದ ಜಾ.ದಳ ಕಚೇರಿಯಲ್ಲಿ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯ ಕ್ರಮವನ್ನು ಅದ್ಧೂರಿಯಿಂದ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.
ಜಾ.ದಳಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ನಂತರ ಪ್ರಪ್ರಥಮವಾಗಿ ನಡೆಯುತ್ತಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಇದಾಗಿರುವುದರಿಂದ ಪಟ್ಟಣದಲ್ಲಿರುವ ಜಾ.ದಳ ಕಚೇರಿಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಾಯಕ ಸಮುದಾಯದ ಮುಖಂಡರು, ಅಭಿಮಾನಿಗಳ ಜೊತೆಗೂಡಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಪಕ್ಷಗಳ ಅಧ್ಯಕ್ಷರು, ಹಿರಿಯ ಮುಖಂಡರು, ಕಾರ್ಯಕರ್ತರು, ಮುಖಂಡರೊಡನೆ ಅದ್ಧೂರಿಯಾಗಿ ಆಚರಿಸಲು ಮುಂದಾಗಿರುವುದು ವಿಶೇಷವಾಗಿದೆ.





